ಲಖನೌ, ಜ. 21: ಮೂವರು ಪುರುಷರೊಂದಿಗೆ ಅಸಭ್ಯ ಸ್ಥಿತಿಯಲ್ಲಿದ್ದ ತನ್ನ ಪತ್ನಿಯನ್ನು ನೋಡಿದ ವ್ಯಕ್ತಿಯೊಬ್ಬ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ (Crime News). ಈ ದಂಪತಿ ಪರಸ್ಪರ, ಪ್ರೀತಿಸಿ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಮರುದಿನ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಈ ಘಟನೆ ನಡೆದಿದೆ.
ಆರೋಪಿಯನ್ನು ಸಚಿನ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ತಿಂಗಳಿನಿಂದ ತನ್ನ ಪತ್ನಿ ಶ್ವೇತಾ ಸಿಂಗ್ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿಯು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆ ನೋಂದಾಯಿಸುವ ಮೂಲಕ ಈ ಜೋಡಿ ಕಾನೂನು ಪ್ರಕಾರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಚಿನ್ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ತನ್ನ ಹೆಂಡತಿಯ ನಡವಳಿಕೆಯ ಬಗ್ಗೆ ಆತನಿಗೆ ಅನುಮಾನ ಮೂಡಿತ್ತು. ತಾನು ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ, ಮಹಾರಾಜಪುರದ ಎಂಜಿನಿಯರಿಂಗ್ ಕಾಲೇಜು ಬಳಿ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಆಕೆ ಸಂಬಂಧ ಬೆಳೆಸಿಕೊಂಡಿದ್ದಳು ಎಂದು ಆತ ಆರೋಪಿಸಿದ್ದಾನೆ.
ರೀಲ್ಸ್‌ಗಾಗಿ ಲೈಂಗಿಕ ಕಿರುಕುಳ ಆರೋಪ ಕೇಸ್; ಶಿಮ್ಜಿತಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲು
ಎರಡು ದಿನಗಳ ಹಿಂದೆ ತನ್ನ ಪತ್ನಿಗೆ ತಾನು ಹಳ್ಳಿಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾನೆ. ಆ ರಾತ್ರಿ ಹಿಂತಿರುಗಲಿಲ್ಲವೆಂದು ಹೇಳಿದ್ದಾನೆ. ಆದರೆ ಅದೇ ದಿನ ರಾತ್ರಿ ಅನಿರೀಕ್ಷಿತವಾಗಿ ಹಿಂತಿರುಗಿದಾಗ ತನ್ನ ಪತ್ನಿ ಮೂವರು ಪುರುಷರೊಂದಿಗೆ ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಿದ್ದಾಗಿ ಹೇಳಿದ್ದಾನೆ. ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಲು ಸಚಿನ್ ಮುಂದಾಗಿದ್ದಾನೆ. ಈ ವೇಳೆ ತನ್ನ ಪತಿಗೆ ಹಲ್ಲೆ ನಡೆಸುವಂತೆ ಯುವಕರಿಗೆ ಪತ್ನಿ ಪ್ರಚೋದಿಸಿದ್ದಾಳೆ ಎಂಬುದು ಸಚಿನ್ ಆರೋಪ.
ಕೂಡಲೇ ಸಚಿನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಈ ವಿಷಯವನ್ನು ಮುಂದುವರಿಸಲು ಇಷ್ಟವಿಲ್ಲ ಮತ್ತು ನಂತರ ಪರಿಹರಿಸಲು ಬಯಸುತ್ತೇನೆ ಎಂದು ಸಚಿನ್ ಪೊಲೀಸರಿಗೆ ಹೇಳಿದ್ದಾಗಿ ವರದಿಯಾಗಿದೆ. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಮನೆಗೆ ಹಿಂದಿರುಗಿದ ನಂತರ ಪತ್ನಿಯು ಪತಿ ಸಚಿನ್‍ನೊಂದಿಗೆ ಜಗಳವಾಡಿದ್ದಾಳೆ. ಯುವಕರನ್ನು ಬಿಡುಗಡೆ ಮಾಡಲಾಗಿದೆಯೇ ಎಂಬ ಬಗ್ಗೆ ಸರಿಯಾದ ಮಾಹಿತಿ ಕೊಡುವಂತೆ ಒತ್ತಡ ಹೇರಿದ್ದಾಳೆ. ಅಷ್ಟೇ ಅಲ್ಲದೆ, ಪತಿಯನ್ನು ಬಿಟ್ಟು ಆ ಮೂವರ ಜತೆ ಹೋಗಿ ವಾಸಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಸಚಿನ್ ಆರೋಪಿಸಿದ್ದಾನೆ. ಅಲ್ಲದೆ, ಈ ಸಮಯದಲ್ಲಿ ಪತಿಯನ್ನು ಕೊಲ್ಲುವುದಾಗಿಯೂ ಆಕೆ ಬೆದರಿಸಿದ್ದಳಂತೆ.
ಇದರಿಂದ ಕೋಪಗೊಂಡ ಸಚಿನ್ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದಾಗಿ ಹೇಳಿದ್ದಾನೆ. ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಬಾಡಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದ. ಮರುದಿನ, ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿದರು. ಅಲ್ಲಿ ಶ್ವೇತಾಳ ದೇಹವು ಕಂಬಳಿಯಲ್ಲಿ ಸುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರೋಪಿ ಪತಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ. ಮೃತದೇಹದ ಪ್ರಾಥಮಿಕ ಪರೀಕ್ಷೆ ನಡೆಯುತ್ತಿದೆ.