ರೀಲ್ಸ್‌ಗಾಗಿ ಲೈಂಗಿಕ ಕಿರುಕುಳ ಆರೋಪ ಕೇಸ್; ಶಿಮ್ಜಿತಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲು
ಕೇರಳದ ಕೋಝಿಕೋಡ್ ಜಿಲ್ಲೆಯ ನಿವಾಸಿ ದೀಪಕ್ ಬಸ್ ಪ್ರಯಾಣದ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ಮುಸ್ತಫಾ ವಿಡಿಯೊ ಹಂಚಿಕೊಂಡ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ದೀಪಕ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟ್ರೋಲ್ ಮಾಡಿದ್ದರು.ಇದೀಗ ಶಿಮ್ಜಿತಾ ಮುಸ್ತಫಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ.
ದೀಪಕ್- ಶಿಮ್ಜಿತಾ ಮುಸ್ತಫಾ -
ತಿರುವನಂತಪುರಂ: ಬಸ್‌ನಲ್ಲಿ ಲೈಂಗಿಕ ಕಿರುಕುಳ(Sex Harassment) ನೀಡಿದ್ದಾನೆ ಎಂದು ಸೋಷಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್(social media influencer) ಆರೋಪಿಸಿದ ಬಳಿಕ, ಕೇರಳ(Kerala)ದ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಕಿರುಕುಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವರು, ಇನ್‌ಫ್ಲುಯೆನ್ಸರ್ ಉದ್ದೇಶಪೂರ್ವಕವಾಗಿ ಕ್ಯಾಮೆರಾ ಆನ್ ಮಾಡಿಕೊಂಡು ಆ ವ್ಯಕ್ತಿಗೆ ಹತ್ತಿರ ಸರಿದು, ಅವನನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಇತರರು ಆ ಮಹಿಳೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೋಝಿಕೋಡ್ (Kozhikode) ಜಿಲ್ಲೆಯ ನಿವಾಸಿ ದೀಪಕ್(Deepak) ಬಸ್ ಪ್ರಯಾಣದ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ಮುಸ್ತಫಾ (Shimjitha Musthafa) ವಿಡಿಯೋ ಹಂಚಿಕೊಂಡ ಬಳಿಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ದೀಪಕ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟ್ರೋಲ್ ಮಾಡಿದ್ದರು. ದೀಪಕ್ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಬಗ್ಗೆ ಮಾತನಾಡಿಕೊಳ್ಳುತ್ತಿರುವುದನ್ನು ಕಂಡು ಸಂಪೂರ್ಣವಾಗಿ ಕುಗ್ಗಿಹೋಗಿದ್ದ ಮತ್ತು ಅದೇ ಅವನನ್ನು ಆ ತಪ್ಪು ನಿರ್ಣಯಕ್ಕೆ ತಳ್ಳಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೇ ಶಿಮ್ಜಿತಾ ಮುಸ್ತಫಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ.
"ಆರೋಪಿತ ಮಹಿಳೆ ತಲೆಮರೆಸಿಕೊಂಡಿದ್ದಾಳೆ. ತಾನು ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಈ ಮೊದಲು ಆಕೆ ಹೇಳಿಕೊಂಡಿದ್ದಳು, ಆದರೆ ಪೊಲೀಸರು ಅದನ್ನು ತಳ್ಳಿ ಹಾಕಿದ್ದು, ಆಕೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೀಪಕ್ ಅವರ ಸಾವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಆ ಮಹಿಳೆಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳು ಡಿಲೀಟ್ ಆಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಅದೇ ರೀತಿಯಲ್ಲಿ, ಘಟನೆಯ ಕುರಿತು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಪೊಲೀಸ್ ತನಿಖೆಗೆ ಆದೇಶಿಸಿ, ಉತ್ತರ ವಲಯದ ಡಿಐಜಿ ಅವರಿಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಫೆಬ್ರವರಿ 19ರಂದು ಜಿಲ್ಲೆಯಲ್ಲಿ ನಡೆಯುವ ಆಯೋಗದ ಸಭೆಯಲ್ಲಿ ಈ ಪ್ರಕರಣವನ್ನು ಪರಿಶೀಲಿಸಲಾಗುವುದು.
ಈ ನಡುವೆ, ಬಿಜೆಪಿ ನಾಯಕ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ದುಃಖಿತ ಕುಟುಂಬವನ್ನು ಭೇಟಿಯಾಗಿ, ಸಮರ್ಪಕ ತನಿಖೆ ಆರಂಭಿಸುವಲ್ಲಿ ವಿಳಂಬವಾಗಿದೆ ಎಂದು ಆರೋಪಿಸಿದರು. ಜೊತೆಗೆ, ವಿಡಿಯೋ ದಾಖಲಿಸಿದ ಮಹಿಳೆ ರಾಜಕೀಯ ಪಕ್ಷದ ಸಕ್ರಿಯ ಕಾರ್ಯಕರ್ತೆ ಹಾಗೂ ಚುನಾಯಿತ ಪ್ರತಿನಿಧಿಯಾಗಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದರು. ಕೇರಳದಲ್ಲಿ ಇಂತಹ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.ವಿಡಿಯೋವೊಂದರಲ್ಲಿ ಶಿಮ್ಜಿತಾ ಮುಸ್ತಫಾ, “ನಿನ್ನೆ ಬಸ್‌ನಲ್ಲಿ ನನ್ನ ಅನುಮತಿ ಇಲ್ಲದೆ ಒಬ್ಬ ವ್ಯಕ್ತಿ ಉದ್ದೇಶಪೂರ್ವಕವಾಗಿ ನನ್ನನ್ನು ಸ್ಪರ್ಶಿಸಿದ ವಿಡಿಯೋವನ್ನು ಹಂಚಿಕೊಂಡಿದ್ದೇನೆ. ಇದು ಅಪಘಾತವೂ ಅಲ್ಲ, ತಪ್ಪು ಅರ್ಥೈಸಿಕೊಂಡಿರುವುದೂ ಅಲ್ಲ. ಇದು ನನ್ನ ಲೈಂಗಿಕ ಮಿತಿಗ ಸ್ಪಷ್ಟ ಉಲ್ಲಂಘನೆ,” ಎಂದು ಹೇಳಿರುವುದು ಕೇಳಿಸಿದೆ.
“ನನ್ನ ಮುಂದಿದ್ದ ಮಹಿಳೆ ಅಸಹಜವಾಗಿರುವುದನ್ನು ಗಮನಿಸಿದ ಬಳಿಕ ನಾನು ರೆಕಾರ್ಡ್ ಮಾಡಲಾರಂಭಿಸಿದೆ. ಅದು ಗೊತ್ತಿದ್ದರೂ ಸಹ, ಆ ವ್ಯಕ್ತಿ ನನ್ನನ್ನು ಸ್ಪರ್ಶಿಸಿದ. ಇದು ಉದ್ದೇಶಪೂರ್ವಕ ಕೃತ್ಯ ಮತ್ತು ತನ್ನನ್ನು ಏನೂ ಮಾಡಿಕೊಳ್ಳಲಾಗುವುದಿಲ್ಲ ಎಂಬ ಮನಸ್ಥಿತಿಯನ್ನು ತೋರಿಸುತ್ತದೆ,” ಎಂದು ಆಕೆ ಹೇಳಿದ್ದಾಳೆ.
ಸಂಬಂಧಿಕರ ಪ್ರಕಾರ, ಈ ವೀಡಿಯೊ ಶುಕ್ರವಾರ ವೈರಲ್ ಆಗಿದ್ದು, ನಡೆದ ಘಟನೆ ಬಗ್ಗೆ ದೀಪಕ್ ತನ್ನ ತಾಯಿಗೆ ಹೇಳಿಕೊಂಡಿದ್ದ. ಅವರೂ ಮಗನಿಗೆ ಧೈರ್ಯ ತುಂಬಿದ್ದರು. ಈ ವಿಷಯವನ್ನು ದೀಪಕ್ ತಮ್ಮ ಸ್ನೇಹಿತನ ಜೊತೆಯೂ ಚರ್ಚಿಸಿದ್ದರು. ಆದರೆ ಭಾನುವಾರ ಬೆಳಗ್ಗೆ ದೀಪಕ್ ಮೃತದೇಹವಾಗಿ ಪತ್ತೆಯಾಗಿದ್ದರು