KPSC Recruitment Scam: ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್
ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ. ವಿಚಾರಣೆ ವೇಳೆ ಅಸಮಂಜಸ ಹೇಳಿಕೆ ನೀಡಿದ್ದರಿಂದ ಅವರನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್. -
ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ (KPSC Recruitment Scam) ಸಂಬಂಧಿಸಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನಿಖೆಗೆ ಸೂಕ್ತ ಸಹಕಾರ ನೀಡದ ಹಿನ್ನೆಲೆಯಲ್ಲಿ ಅವರನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗ್ಯಾನೇಂದ್ರ ಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಅಂಕ ತಿದ್ದುಪಡಿ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ.
ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಶುಕ್ರವಾರ 11 ಗಂಟೆಗಳ ಕಾಲಸುದೀರ್ಘ ವಿಚಾರಣೆ ನಡೆಸಿದ್ದರು. ಬಳಿಕ ಇಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ಮುಂದುವರಿಸಿದ ತನಿಖಾಧಿಕಾರಿಗಳು, ಗ್ಯಾನೇಂದ್ರ ಕುಮಾರ್ ನೀಡಿದ ಹೇಳಿಕೆಗಳಲ್ಲಿನ ಅಸಮಂಜಸತೆ ಹಾಗೂ ತನಿಖಾ ಪ್ರಕ್ರಿಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಅಂತಿಮವಾಗಿ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಅಧಿಕಾರಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣದಲ್ಲಿ ಇತರ ಪ್ರಭಾವಿಗಳ ಪಾತ್ರವನ್ನು ಬಯಲಿಗೆಳೆಯಲು ಹೆಚ್ಚಿನ ದಿನಗಳ ಅವರನ್ನು ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲು ಸಿಐಡಿ ಸಿದ್ಧತೆ ನಡೆಸಿದೆ.
ಅವಧಿ ಮೀರಿದ ಬಿಸ್ಕೇಟ್ ಮಾರಾಟ: ಎಫ್‌ಡಿಎ ಅಧಿಕಾರಿಗೆ ಜನರಿಂದ ಘೇರಾವ್, ಬಾಯಿಗೆ ಬಿಸ್ಕೇಟ್ ತುರುಕಲು ಯತ್ನ
ಬೆಂಗಳೂರಿನ ನಿವಾಸದ ಮೇಲೆ ನಡೆದಿತ್ತು ಇಡಿ ದಾಳಿ
ಕೆಪಿಎಸ್‌ಸಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಕಳೆದ ವಾರ ಬೆಂಗಳೂರಿನಲ್ಲಿರುವ ಗ್ಯಾನೇಂದ್ರ ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರು ಮನೆಯಲ್ಲಿ ಇರಲಿಲ್ಲ. ಅವರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು.
ಬಳಿಕ ಇ.ಡಿ. ಅಧಿಕಾರಿಗಳು ಲಖನೌದಲ್ಲಿರುವ ಗ್ಯಾನೇಂದ್ರ ಕುಮಾರ್ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದರು. ಆದರೆ ಅಲ್ಲಿಯೂ ಅವರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ಯಾನೇಂದ್ರ ಕುಮಾರ್ ಅವರ ಪತ್ತೆ ಕುರಿತು ಹಲವು ಪ್ರಶ್ನೆಗಳು ಮೂಡಿದ್ದವು. ಆದರೆ ಅವರು ಶುಕ್ರವಾರ ದಿಢೀರ್ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಅಧಿಕಾರಿಯನ್ನು ಅರೆಸ್ಟ್ ಮಾಡಲಾಗಿದೆ.