ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಥಾಣೆಯಲ್ಲಿ ಘೋರ ದುರಂತ; ಜಗಳದ ವೇಳೆ ಮಹಿಳೆಯನ್ನು ರೈಲಿನ ಮುಂದೆ ತಳ್ಳಿ ಕೊಲೆಗೈದ ಪಾಪಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾನಲ್ಲಿ ಶುಕ್ರವಾರ ಬೆಳಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಜಗಳದ ಬಳಿಕ ವ್ಯಕ್ತಿಯೊಬ್ಬ ಚಲಿಸುವ ರೈಲಿನ ಮುಂದೆ ತಳ್ಳಿ 39 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಂಧರ್ಬಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ (Maharashtra) ಥಾಣೆ (Thane) ಜಿಲ್ಲೆಯ ದಿವಾನಲ್ಲಿ (Railway Station) ಶುಕ್ರವಾರ ಬೆಳಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದೆ. ಜಗಳದ ಬಳಿಕ ವ್ಯಕ್ತಿಯೊಬ್ಬ ಚಲಿಸುವ ರೈಲಿನ ಮುಂದೆ ತಳ್ಳಿ 39 ವರ್ಷದ ಮಹಿಳೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಬೆಳಗ್ಗೆ 5:00ರಿಂದ 5:30 ಗಂಟೆಯ ನಡುವೆ ಪ್ಲಾಟ್‌ಫಾರ್ಮ್ ಸಂಖ್ಯೆ 5-6ರಲ್ಲಿ ಸಂಭವಿಸಿದೆ ಎಂದು ಥಾಣೆ ರೈಲ್ವೆ ಪೊಲೀಸ್ ಸ್ಟೇಷನ್‌ನ ಹಿರಿಯ ಇನ್ಸ್‌ಪೆಕ್ಟರ್ ಅರ್ಚನಾ ದುಸಾನೆ ವಿವರಿಸಿದ್ದಾರೆ. ದಿವಾ ಈಸ್ಟ್‌ನ ನಿವಾಸಿಯಾಗಿರುವ ಆರೋಪಿ ರಾಜನ್ ಶಿವನಾರಾಯಣ್ ಸಿಂಗ್, ಮಹಿಳೆಯೊಂದಿಗೆ ಜಗಳವಾಡಿ ಆಕೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆಕೆಯ ಕುತ್ತಿಗೆಯನ್ನು ಹಿಡಿದು ಚಲಿಸುತ್ತಿದ್ದ ಸರಕು ರೈಲಿನ ಮುಂದೆ ತಳ್ಳಿದ್ದಾನೆ. ಇದರಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಸುದ್ದಿಯನ್ನೂ ಓದಿ: Student Suicide: ರ‍್ಯಾಗಿಂಗ್‌ ಭೂತಕ್ಕೆ ಮತ್ತೊಂದು ಬಲಿ; ಖರಗ್‌ಪುರ ಐಐಟಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ರಾಜನ್ ಶಿವನಾರಾಯಣ್ ಸಿಂಗ್ ತಪ್ಪಿಸಿಕೊಳ್ಳಲು ಯತ್ನಿಸಿದರೂ, ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ಸಾಗರ್ ಶಿಂದೆ ಆತನನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಪ್ರತ್ಯಕ್ಷದರ್ಶಿಗಳೊಂದಿಗೆ ಮಾತನಾಡಿ ಘಟನೆಯ ಪೂರ್ಣ ವಿವರವನ್ನು ಕಲೆಹಾಕುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿಯಿಂದ ಘಟನೆಯ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ದುರಂತವು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.