ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Moda Kavida Vaatavarana Review: ಪ್ರೇಕ್ಷಕರೆದೆಗೆ ತಂಪೆರೆಯುತ್ತಲೇ ಬಿಸಿ ಮುಟ್ಟಿಸುವ ಹವಾಮಾನವಿದು..

ನಿರ್ದೇಶಕ ಸಿಂಪಲ್ ಸುನಿ ಅವರ ‘ಮೋಡ ಕವಿದ ವಾತಾವರಣ’ ಸಿನಿಮಾ ತೆರೆಕಂಡಿದ್ದು, ಶೀಲಂ ಎಂ. ಸ್ವಾಮಿ ಮೊದಲ ಬಾರಿಗೆ ಹೀರೋ ಆಗಿ ಸ್ಯಾಂಡಲ್‌ವಡ್‌ಗೆ ಕಾಲಿಟ್ಟಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ರೊಮ್ಯಾಂಟಿಕ್ ಕಾಮಿಡಿಯಂತೆ ಆರಂಭವಾದರೂ, ನಂತರ ಪೌರಾಣಿಕ ಕನೆಕ್ಷನ್ ಜೊತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಆಗಿಯೂ ಬದಲಾಗುತ್ತದೆ. ಈ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.

ನಿರ್ದೇಶಕ ʻಸಿಂಪಲ್ʼ ಸುನಿಯ ‘ಮೋಡ ಕವಿದ ವಾತಾವರಣ’ ಸಿನಿಮಾ ಹೇಗಿದೆ?

-

Avinash GR
Avinash GR Jun 26, 2026 8:04 PM

ಸಿಂಪಲ್‌ ಸುನಿ ಸಿನಿಮಾಗಳು ಸಿಂಪಲ್‌ ಆಗಿಯೇ ಇರ್ತಾವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ, ಈ ʻಮೋಡ ಕವಿದ ವಾತಾವರಣʼ ಚಿತ್ರ. ರಕ್ಷಿತ್‌ ಶೆಟ್ಟಿ, ರಿಷಿ, ಧನ್ವೀರ್‌, ದುಷ್ಯಂತ್‌ ಮುಂತಾದವರಿಗೆ ಆರಂಭಿಕ ಗೆಲುವು ತಂದುಕೊಟ್ಟು, ಅವರ ವೃತ್ತಿ ಬದುಕಿಗೆ ಯಶಸ್ಸಿನ ಮುಂಗಾರು ಸುರಿಸಿರುವ ಸುನಿ, ಈ ಬಾರಿ ತಮ್ಮ ಆಪ್ತ ಶೀಲಂ ಅವರನ್ನೇ ಅಖಾಡಕ್ಕಿಳಿಸಿ ʻಮೋಡ ಕವಿದ ವಾತಾವರಣʼ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮೇಲ್ನೋಟಕ್ಕೆ ಸಿಂಪಲ್‌ ಎನಿಸಿದರೂ, ಒಳಗೊಳಗೆ ಕ್ಲಿಷ್ಟಕರ ವಿಚಾರವೊಂದನ್ನು ಹೇಳುತ್ತಾ ಸಾಗುತ್ತದೆ.

ʻಮೋಡ ಕವಿದ ವಾತಾವರಣʼ ಸಿನಿಮಾದ ಕಥೆ ಏನು?

ಪಾರ್ಟ್‌ಟೈಮ್‌ ಸೈಕಾಲಜಿಸ್ಟ್‌ ಆಗಿ, ಫುಲ್‌ ಟೈಮ್‌ ಮೀಮರ್‌ ಆಗಿರುವ ಚೆರಿಶ್‌ಗೆ (ಶೀಲಂ ಎಂ. ಸ್ವಾಮಿ) ಆಗಲೇ ಬಾಲ್ಯದ ಗೆಳತಿ ಸಾತ್ವಿಕಾ (ಸಾತ್ವಿಕಾ) ಜೊತೆ ಮದುವೆ ಫಿಕ್ಸ್‌ ಆಗಿದೆ. ಆದರೂ ಇಬ್ಬರ ನಡುವೆ ಅನ್ಯೋನ್ಯತೆಯ ಕೊರತೆ ಇದೆ. ಆ ಕಾರಣಕ್ಕೆ ಹೋಮ್‌ಸ್ಟೇಗೆ ಹೋಗಿ ಸ್ವಲ್ಪ ಕ್ವಾಲಿಟಿ ಟೈಮ್‌ ಕಳೆಯೋಣ, ಇಬ್ಬರು ಅರ್ಥ ಮಾಡಿಕೊಳ್ಳೋಣ ಅಂತ ಪ್ಲ್ಯಾನ್‌ ಮಾಡ್ತಾರೆ. ಅದೇ ಹೋಮ್‌ಸ್ಟೇಗೆ ಸೌಪರ್ಣಿಕಾ (ಮೋಕ್ಷಾ ಕುಶಲ್) ಕೂಡ ಬರ್ತಾಳೆ. ಅಲ್ಲಿಂದ ಕಥೆಯೊಳಗೆ ಹಲವು ತಿರುವುಗಳು, ಮಾತಿನ ಲಹರಿಗಳು ಜೊತೆಯಾಗುತ್ತವೆ. ಒಂದು ಸಿಂಪಲ್‌ ಕಥೆಗೆ ಸೈಕಾಲಜಿಕಲ್‌ ಟಚ್‌ ಕೊಟ್ಟು, ಜೊತೆಗೆ ಪಟಪಟ ಮಾತಾಡುವ ಹೀರೋ, ಅಷ್ಟೇ ಫಾಸ್ಟ್‌ ಆಗಿರುವ ನಾಯಕಿ, ಒಂದು ಕೂಲ್‌ ಆಗಿರುವ ಲೊಕೇಷನ್‌.. ತಮ್ಮ ಇಂತಹ ಎಂದಿನ ಸಿಗ್ನೇಚರ್‌ ಸ್ಟೈಲ್‌ ಅನ್ನು ಬೆರೆಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸುನಿ.

Devanobba Jaadugaara: ʻಪ್ರೇಮ ಕಾವ್ಯʼ ಸೀರಿಯಲ್‌ ನಟಿ ಪ್ರಿಯಾ ಆಚಾರ್‌ - ಸಚಿನ್ ಹೊಸ ಸಿನಿಮಾ ಟೀಸರ್‌ ರಿಲೀಸ್;‌ ಹುಚ್ಚ ವೆಂಕಟ್, ಸಿಂಪಲ್‌ ಸುನಿ ಸಪೋರ್ಟ್‌

ಮೇಕಿಂಗ್‌ ಹೇಗಿದೆ? ಸುನಿ ಕೆಲಸಕ್ಕೆ ಫುಲ್‌ ಮಾರ್ಕ್ಸಾ?

ಸರಳವಾಗಿ ಸಿನಿಮಾವನ್ನು ಆರಂಭಿಸುವ ಸುನಿ, ಎಂದಿನ ಶೈಲಿಯಲ್ಲೇ ಪಾತ್ರಧಾರಿಗಳ ಪರಿಚಯ ಮಾಡಿಕೊಡುತ್ತಾ ಸಾಗುತ್ತಾರೆ. ಆದರೆ ಕಥೆ ಸಾಗಿದಂತೆಲ್ಲಾ, ಒಂದು ರೊಮ್ಯಾಂಟಿಕ್‌ ಕಾಮಿಡಿ ಆಗಬೇಕಿದ್ದ ಸಿನಿಮಾವು, ಸೈಕಾಲಜಿಕಲ್‌ ಥ್ರಿಲ್ಲರ್‌ ಆಗಿ ಬದಲಾಗುತ್ತದೆ. ಇಬ್ಬರು ನಾಯಕಿಯರ ಮಧ್ಯೆ ಮುದ್ದಾದ ಹೀರೋ ಜಾಗದಲ್ಲಿ ಮತ್ತೊಬ್ಬನ ನೆರಳು ಕಾಣುತ್ತದೆ. ಅದ್ಯಾರು ಅನ್ನೋ ಸಸ್ಪೆನ್ಸ್‌ ಕೊನೆವರೆಗೂ ಕಾಪಾಡಿಕೊಂಡಿದ್ದಾರೆ ಸುನಿ. ಸಿನಿಮಾದಲ್ಲಿ‌ ಬರುವ ಸೈಕಾಲಜಿಕಲ್‌ ಸಮಸ್ಯೆಯೊಂದನ್ನು ಪೌರಾಣಿಕ ಕಥೆಯೊಂದಕ್ಕೆ ಸೇರಿಸಿ ಸುನಿ ನಿರೂಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸ್ಕ್ರಿಪ್ಟ್‌ನಲ್ಲಿ ಒಂಚೂರು ಹೊಸತನಕ್ಕೆ ಜಾಗಕ್ಕೆ ಮಾಡಿಕೊಟ್ಟಿದ್ದಾರೆ.

Moda Kavida Vatavarana: ಸಿಂಪಲ್‌ ಸುನಿ ಹೊಸ ಸಿನಿಮಾ ಘೋಷಣೆ; ‘ಮೋಡ ಕವಿದ ವಾತಾವರಣಕ್ಕೆ ಹೀರೋ ಆದ ಶೀಲಮ್

ಆದರೆ, ಸಿನಿಮಾ ಕೊನೇ ಹಂತ ತಲುಪಿದಾಗ ಒಂಚೂರು ಸಾವಧಾನವಾಗಿ ಸಾಗಿದ್ದರೆ ಚೆನ್ನಾಗಿತ್ತು ಎನಿಸುತ್ತದೆ. ಜೂಡಾ ಸ್ಯಾಂಡಿ ಸಂಗೀತದಲ್ಲಿ ಒಂದು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತವು ಕಥೆಗೆ ಹೊಂದಿಕೆಯಾಗಿದೆ. ಛಾಯಾಗ್ರಹಣ ಈ ಸಿನಿಮಾದ ದೊಡ್ಡ ಪ್ಲಸ್‌ ಪಾಯಿಂಟ್.‌ ಕಣ್ಣಿಗೆ ಮುದ ನೀಡುವಂತ ಲೊಕೇಷನ್‌ ಆಯ್ದುಕೊಂಡಿರುವ ಸುನಿ, ಪ್ರೇಕ್ಷಕರಿಗೆ ಮಳೆಯಲ್ಲಿ ತೊಯ್ದಂತಹ ಅನುಭವ ಕರುಣಿಸಿದ್ದಾರೆ. ನಿರ್ದೇಶಕ ಸುನಿ ಇಲ್ಲಿ ಕಥೆಗಿಂತ ಹೆಚ್ಚಾಗಿ ವಾತಾವರಣಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಮಳೆ, ಮಂಜು, ಮಲೆನಾಡಿನ ಬೆಟ್ಟಗಳು ಕೂಡ ಪಾತ್ರಗಳಂತೆ ಕಾಡುತ್ತವೆ.

ಕಲಾವಿದರ ನಟನೆ ಹೇಗಿದೆ?

ಸುನಿ ಅವರ ಜೊತೆಗಿನ ದೀರ್ಘ ಒಡನಾಟದಿಂದಲೇ ಏನೋ ಶೀಲಂ ಎಂ. ಸ್ವಾಮಿ ಅವರು ನಿರ್ದೇಶಕರ ನಾಡಿಮಿಡಿತ ಅರಿತು ನಟಿಸಿದ್ದಾರೆ. ಚೆರೀಶ್‌ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ್ದಾರೆ. ಡೈಲಾಗ್‌ ಡೆಲಿವರಿ ಚೆನ್ನಾಗಿದೆ. ಸಾತ್ವಿಕಾ ಪಾತ್ರಕ್ಕೆ ಇನ್ನಷ್ಟು ಪರಿಣಾಮಕಾರಿ ಬರವಣಿಗೆ ಬೇಕಿತ್ತು ಎನಿಸುತ್ತದೆ. ಮೋಕ್ಷಾ ಕುಶಾಲ್‌ ಅವರು ಎರಡು ಶೇಡ್‌ನಲ್ಲಿ ಮಿಂಚಿದ್ದಾರೆ ಮತ್ತು ಪ್ರೇಕ್ಷಕರ ಗಮನಸೆಳೆಯುತ್ತಾರೆ. ಚಿಕ್ಕ ಪಾತ್ರವೊಂದರಲ್ಲಿ ಮಿಂಚಿದ್ದಾರೆ ನಟಿ ʻಸ್ಪರ್ಶʼ ರೇಖಾ.

Movie: ಮೋಡ ಕವಿದ ವಾತಾವರಣ
Release Date: ಜೂನ್ 26, 2026
Language: ಕನ್ನಡ
Genre: ಡ್ರಾಮಾ, ‌ರೊಮ್ಯಾಂಟಿಕ್ ಥ್ರಿಲ್ಲರ್
Director: ಸಿಂಪಲ್‌ ಸುನಿ
Cast: ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್‌, ಸಾತ್ವಿಕಾ, ʻಸ್ಪರ್ಶʼ ರೇಖಾ.
Duration: 120 ನಿಮಿಷ
Rating: 3/5