ನವದೆಹಲಿ: ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (Jaish-e-Mohammed) ನಿರ್ವಹಿಸುತ್ತಿದ್ದ ವಾಟ್ಸಾಪ್ ಚಾನೆಲ್ ಅನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ವೈಟ್ ಕಾಲರ್ ಭಯೋತ್ಪಾದನೆಗಾಗಿ (white-collar terror) ಯುವಕರನ್ನು ಬಳಸಿಕೊಳ್ಳಲು ಜೈಶ್-ಎ-ಮೊಹಮ್ಮದ್ ಈ ಚಾನೆಲ್ (Jaish WhatsApp channel) ಅನ್ನು ನಿರ್ವಹಿಸುತ್ತಿತ್ತು ಎನ್ನಲಾಗಿದೆ. ಭಾರತೀಯ ವೈಟ್ ಕಾಲರ್ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಚಾನೆಲ್ ಮೂಲಕ ಮೂಲಭೂತ ವಿಷಯಗಳನ್ನು ಜೈಶ್-ಎ-ಮೊಹಮ್ಮದ್ (Jaish) ಸಂಘನೆಯು ಹರಡುತ್ತಿತ್ತು. ಜೈಶ್-ಎ-ಮೊಹಮ್ಮದ್ ನಿರ್ವಹಿಸುತ್ತಿದ್ದ ಈ ಚಾನೆಲ್ 13,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿತ್ತು ಎನ್ನಲಾಗಿದೆ.
ಜೈಶ್-ಎ-ಮೊಹಮ್ಮದ್ ಸಂಘಟನೆಯು ನಿರ್ವಹಿಸುತ್ತಿದ್ದ ವಾಟ್ಸಾಪ್ ಚಾನೆಲ್ ವೈದ್ಯರು, ಪತ್ರಕರ್ತರು ಮತ್ತು ಇತರ ವೃತ್ತಿಪರರಂತಹ ಪ್ರಭಾವಿ ವಲಯಗಳ ಉದ್ಯೋಗಿಗಳನ್ನು ತನ್ನ ಗುಂಪಿನ ಪ್ರಚಾರಕ್ಕಾಗಿ ಬಳಸುವ ತಂತ್ರ ರೂಪಿಸಿಕೊಂಡಿತ್ತು. ಈ ಕುರಿತು ಮಾಧ್ಯಮವೊಂದು ಪ್ರಕಟಿಸಿದ ವರದಿಯ ಬಳಿಕ ಮೆಟಾ ಭಾರತದಲ್ಲಿಈ ಚಾನೆಲ್ ಪ್ರಸಾರವಾಗುವುದನ್ನು ತಡೆ ಹಿಡಿದಿದೆ. ಈ ಚಾನೆಲ್ ಮೂಲಕ ಜೆಇಎಂನ ಚಟುವಟಿಕೆಗಳ ಆಡಿಯೊ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿತ್ತು.
ಇದನ್ನೂ ಓದಿ: “ಎಸ್‌ಐಬಿ ಹರ್ ಅಕೌಂಟ್ “ ಮಹಿಳೆಯರಿಗಾಗಿ ವಿಶೇಷ ಖಾತೆ ಯೋಜನೆ ಆರಂಭಿಸಿದ ಸೌತ್ ಇಂಡಿಯನ್ ಬ್ಯಾಂಕ್
ಬಾಲಕೋಟ್ ನಲ್ಲಿ 2019ರಲ್ಲಿ ದಾಳಿ ನಡೆದ ಬಳಿಕ ಪಾಕಿಸ್ತಾನದಲ್ಲಿರುವ ಜೆಇಎಂ ಸಂಘಟನೆಯ ಕಾರ್ಯಚಟುವಟಿಕೆಯನ್ನು ಕಂಡು ಹಿಡಿಯಲು ಮಾಧ್ಯಮವೊಂದು ರಹಸ್ಯ ವರದಿಗಾರರ ತಂಡವನ್ನು ನೇಮಿಸಿಕೊಂಡಿತು. ಇದು ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ನ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಜೆಇಎಂ ನ ಕಾರ್ಯಾಚರಣೆಗಳನ್ನು ಬಹಿರಂಗಪಡಿಸುವ ಪ್ರಯತ್ನ ಮಾಡಿತ್ತು.
ಇದರ ಬಳಿಕ ಜೆಇಎಂ ಆಧುನಿಕ ಸಂವಹನ ಮಾರ್ಗಗಳನ್ನು ಬಳಸುವುದನ್ನು ದೂರವಿಟ್ಟು ಮೊಬೈಲ್ ಫೋನ್, ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡಿತು. ಜೆಇಎಂ ನಾಯಕ ಮಸೂದ್ ಅಜರ್ ಕೆಲವು ನಿರ್ದಿಷ್ಟ ಬ್ಲಾಗ್‌ಗಳ ಮೂಲಕ ಸಂವಹನ ಇಟ್ಟುಕೊಂಡನು.
ಪಹಲ್ಗಾಮ್ ನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಬಳಿಕ ಜೆಇಎಂನ ಚಟುವಟಿಕೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗಿದೆ. 2024ರ ಜೂನ್ 27ರಂದು ಮದುವೆ ಕಾರ್ಯಕ್ರಮವೊಂದರಲ್ಲಿ ಅಜರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ತನ್ನ ಭಾಷಣವನ್ನು ರೆಕಾರ್ಡ್ ಮಾಡಲು ಅವಕಾಶ ಮಾಡಿಕೊಟ್ಟನು.
ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ಪ್ರಭಾವ ಬೀರಲು ಜೆಇಎಂ ವಾಟ್ಸಾಪ್ ಚಾನಲ್ ಅನ್ನು ಬಳಸಿಕೊಳ್ಳಲು ಪ್ರಾರಂಭಿಸಿತು. ಮರ್ಕಜ್ ಸಯ್ಯಿದ್ನಾ ತಮೀಮ್ ದಾರಿ (MSTD) ಎಂಬ ಹೆಸರಿನ ಒಂದು ಚಾನೆಲ್ ಅನ್ನು 2024ರ ಜನವರಿಯಲ್ಲಿ ಪ್ರಾರಂಭಿಸಿದ್ದು, ಇದಕ್ಕೆ 13,000ಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ ಎಂಬುದನ್ನು ಮಾಧ್ಯಮದ ರಹಸ್ಯ ಕಾರ್ಯಾಚರಣೆ ತಂಡ ಪತ್ತೆ ಹಚ್ಚಿದೆ.
ಇದನ್ನೂ ಓದಿ: Bomb Threat: ಕಾರು ಸ್ಫೋಟ ಮಾಸುವ ಮುನ್ನವೇ ಮತ್ತೆ ಡೇಂಜರ್? ದೆಹಲಿ ನ್ಯಾಯಾಲಯ, ಶಾಲೆಗಳಿಗೆ ಬಾಂಬ್ ಬೆದರಿಕೆ
ಈ ಚಾನೆಲ್ ಮೂಲಕ ನಿಯಮಿತವಾಗಿ ಧರ್ಮೋಪದೇಶಗಳು, ಸೈದ್ಧಾಂತಿಕ ಸಂದೇಶಗಳನ್ನು ವಿತರಿಸಲಾಗುತ್ತಿತ್ತು ಮತ್ತು ಕಠಿಣ ಧಾರ್ಮಿಕ ನಿಲುವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಲಾಗುತ್ತಿತ್ತು.