ನವದೆಹಲಿ: ಕಳೆದ ಜುಲೈ 20ರಂದು ದೆಹಲಿಯ ಜಂತರ್ ಮಂತರ್ (delhi Jantar Mantar protest,) ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಚಾಕು ಸೇರಿದಂತೆ ಹರಿತವಾದ ಆಯುಧಗಳಿಂದ (Sharp weapons) ದಾಳಿ (Delhi crime) ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 2,500ಕ್ಕೂ ಹೆಚ್ಚು ಅಪರಾಧಿಗಳ ಗುರುತು ಪತ್ತೆ ಮಾಡಲಾಗಿದೆ. ಇಲ್ಲಿಯವರೆಗೆ 15 ಎಫ್‌ಐಆರ್‌ಗಳನ್ನು (FIR) ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡೇ ಚಾಕು ಸೇರಿದಂತೆ ಹರಿತವಾದ ಆಯುಧಗಳನ್ನು ಬಳಸಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಜುಲೈ 20ರಿಂದ ದೆಹಲಿಯಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದೆ. ಅದರಲ್ಲೂ ಜುಲೈ 20ರಂದು ನಡೆದ ಹಿಂಸಾಚಾರದಲ್ಲಿ ಜಂತರ್ ಮಂತರ್‌ನಲ್ಲಿ ದೆಹಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕ್ರಿಮಿನಲ್ ಹಿನ್ನೆಲೆಯುಳ್ಳ 2,500 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿರೋಧ ಪಕ್ಷದ ಬೆಂಬಲಿತ ಆಂದೋಲನದ ಸಮಯದಲ್ಲಿ ಭುಗಿಲೆದ್ದ ಘರ್ಷಣೆಗಳ ಹಿನ್ನೆಲೆಯಲ್ಲಿ ಪೊಲೀಸರು ಕಣ್ಗಾವಲು ತೀವ್ರಗೊಳಿಸಿದ್ದರಿಂದ ಜುಲೈ 21 ಮತ್ತು ಜುಲೈ 23 ರ ನಡುವೆ ಸುಮಾರು 2,500ಕ್ಕೂ ಹೆಚ್ಚು ವ್ಯಕ್ತಿಗಳ ಗುರುತು ಪತ್ತೆ ಮಾಡಲಾಗಿದೆ. ಇವರು ಪ್ರತಿಭಟನಾಕಾರರ ನಡುವೆ ನುಗ್ಗಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.
ಪ್ರತಿಭಟನಾ ಸ್ಥಳದ ಸುತ್ತಲಿನ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ನಾಲ್ಕು ಎಫ್ ಆರ್ ಎಸ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಅವನ್ನು ನೇರವಾಗಿ ದೆಹಲಿ ಪೊಲೀಸ್ ಡೇಟಾಬೇಸ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಇದು ಪೊಲೀಸರಿಗೆ ಅಪರಾಧಿಗಳನ್ನು ಗುರುತಿಸಲು ಸಹಾಯ ಮಾಡಿದೆ.
ಕೊಲೆ ಯತ್ನ ಆರೋಪ
ರೈಲು ಭವನ ಮತ್ತು ಸಂಸತ್ತಿನ ಬಳಿ ನಡೆದ ಘರ್ಷಣೆ ಸಂಬಂಧಿಸಿ ನಿಯೋಜಿತ ಇನ್ಸ್‌ಪೆಕ್ಟರ್ ದೂರಿನ ಮೇರೆಗೆ ದೆಹಲಿಯ ಕರ್ತವ್ಯ ಪಥ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ನಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109(1) ಅಡಿಯಲ್ಲಿ ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.
ನಿಷೇಧಾಜ್ಞೆಗಳು ಜಾರಿಯಲ್ಲಿದ್ದು, ಪ್ರತಿಭಟನೆಗೆ ಅನುಮತಿ ಇಲ್ಲ ಎಂದು ಪ್ರತಿಭಟನಾಕಾರರಿಗೆ ತಿಳಿಸುವ ಧ್ವನಿವರ್ಧಕಗಳ ಮೂಲಕ ಪದೇ ಪದೇ ಘೋಷಣೆಗಳನ್ನು ಮಾಡಿದರೂ ಪ್ರತಿಭಟನಾಕಾರರಲ್ಲಿ ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಗುಂಪನ್ನು ಪ್ರಚೋದಿಸಿದರು. ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ಮತ್ತು ಚಪ್ಪಲಿಗಳಿಂದ ಹಲ್ಲೆ ನಡೆಸಿ, ಕೊಲ್ಲುವ ಉದ್ದೇಶದಿಂದ ದಾಳಿ ಮಾಡಿದ್ದಾರೆ. ಇದರಿಂದ ಹಲವಾರು ಅಧಿಕಾರಿಗಳು ಗಾಯಗೊಂಡರು. ಸಾರ್ವಜನಿಕ ಆಸ್ತಿ ಮತ್ತು ಖಾಸಗಿ ವಾಹನಗಳಿಗೂ ಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೇಲೆ ಯಾವುದೇ ಕಾನೂನು ಕ್ರಮವಿಲ್ಲ ಎಂಬುದಾಗಿ ಸರ್ಕಾರ ಭರವಸೆ ನೀಡಿದ ಬಳಿಕ ಈ ಮಾಹಿತಿ ಬಂದಿದೆ.