ತಮ್ಮ ವೈಫಲ್ಯಕ್ಕೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ನೆಪ ಮಾಡಿದ್ದಾರೆ: ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕ ನಿಶಿಕಾಂತ್ ದುಬೆ
ಕಳಪೆ ಸಾಧನೆಗಾಗಿ ಕೆಲವು ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನೆಪವಾಗಿ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆಗಳ ಬದಲು ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ಅವರು ಸಂಸತ್ತು ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ನಾಗರಿಕ ಸೇವೆಗಳಲ್ಲಿ ವೃತ್ತಿಜೀವನವನ್ನು ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ (student protest) ಭಾಗವಹಿಸುವ ಬದಲು ತಮ್ಮ ಅಧ್ಯಯನದತ್ತ ಗಮನಹರಿಸುವಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಹೇಳಿದರು. ಸಂಸತ್ತು ಭವನದ ಸಂಕೀರ್ಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ವಿದ್ಯಾರ್ಥಿಗಳು ತಮ್ಮ ವೈಫಲ್ಯವನ್ನು ಮರೆ ಮಾಡಲು ಪ್ರಶ್ನೆಪತ್ರಿಕೆ ಸೋರಿಕೆಯನ್ನು (NEET Paper leak) ನೆಪವಾಗಿ ಬಳಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ತೊಡಗಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಅಧ್ಯಯನದತ್ತ ಗಮನಹರಿಸುವಂತೆ ತಿಳಿಸಿದರು.
ನೀಟ್ ಆಕಾಂಕ್ಷಿಗಳ ಒಂದು ವರ್ಗವು ತಮ್ಮ ಪೋಷಕರಿಗೆ ಕಳಪೆ ಸಾಧನೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ನೆಪವಾಗಿ ಬಳಸಿಕೊಂಡು ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಮೋದಿ ಅನುಮತಿ ಮೇರೆಗೆ ದೆಹಲಿಯಲ್ಲಿ ಸೇನೆ ನಿಯೋಜನೆಗೆ ಸೇನಾಧಿಕಾರಿ ಆದೇಶ ? ಏನಿದು ವೈರಲ್ ಸುದ್ದಿ
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳನ್ನು ಒತ್ತಾಯಿಸಿದ ಅವರು, ಸಂಸತ್ತಿನಲ್ಲಿ ಚರ್ಚೆಯಾದರೆ ಬಲವಾದ ಕಾನೂನು ನಿಬಂಧನೆಗಳನ್ನು ತರಲು ಸಾಧ್ಯವಿದೆ. ದೇಶಾದ್ಯಂತ ಸುಮಾರು 65,000 ವೈದ್ಯಕೀಯ ಸೀಟುಗಳಿವೆ. ಆದರೆ ಪ್ರತಿ ವರ್ಷ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳು ಸಮರ್ಥರು ಎಂದೇ ಭಾವಿಸುತ್ತಾರೆ ಎಂದರು.
ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದ ಪ್ರತಿಭಟನೆಯಲ್ಲಿ ಸೇರುವ ಬದಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬೇಕು. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ನಿರಾಶೆಯ ಭಾವನೆ ಉಂಟಾಗುತ್ತಿದೆ. ಜಂತರ್ ಮಂತರ್ ಅವರಿಗೆ ಸೂಕ್ತ ಸ್ಥಳವಲ್ಲ ಎಂಬುದನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ದುಬೆ ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿಸಲ್ಪಟ್ಟಿರುವ 13 ಜನರಿಗೆ ಕಠಿಣ ಶಿಕ್ಷೆಯಾಗುವದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ದೇಶದ ಕೆಲವು ಪ್ರಮುಖ ವಕೀಲರನ್ನು ನೇಮಿಸುತ್ತದೆ. ಇದಕ್ಕಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ಆದಷ್ಟು ಶೀಘ್ರದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದು ಎಂದು ಅವರು ಹೇಳಿದರು.
ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ : ಸತತ ಮೂರನೇ ದಿನವೂ ಮುಚ್ಚಿದ ದೆಹಲಿಯ 17 ಮೆಟ್ರೋ ನಿಲ್ದಾಣಗಳು
ನಿರ್ಭಯಾ ಪ್ರಕರಣದ ಬಳಿಕ ಮಹಿಳಾ ಸುರಕ್ಷತೆಗಾಗಿ ನಿಬಂಧನೆಗಳನ್ನು ಬಲಪಡಿಸಲು ಬಲವಾದ ಕಾನೂನನ್ನು ಜಾರಿಗೆ ತಂದಂತೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಕಠಿಣ ಕಾನೂನು ತರಲು ಸಂಸತ್ತಿನಲ್ಲಿ ಚರ್ಚಿಸಬೇಕಿದೆ. ಇದಕ್ಕಾಗಿ ಪ್ರತಿಭಟನಾಕಾರರು, ವಿರೋಧ ಪಕ್ಷದವರು ಅವಕಾಶ ಮಾಡಿಕೊಡಬೇಕಿದೆ ಎಂದು ತಿಳಿಸಿದರು.