ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿರಾಮ್ ಕಣಿವೆ ಹತ್ಯಾಕಾಂಡ: 13 ವರ್ಷಗಳ ಬಳಿಕ 10 ಮಾವೋವಾದಿಗಳಿಗೆ ಮರಣ ದಂಡನೆ

Jiram Valley Massacre: ಹದಿಮೂರು ವರ್ಷಗಳ ಬಳಿಕ ಛತ್ತೀಸ್‌ಗಢದ ಜಿರಾಮ್ ಕಣಿವೆ ಹತ್ಯಾಕಾಂಡದ ಆರೋಪಿಗಳಿಗೆ ಮರಣದಂಡನೆ ವಿಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಒಟ್ಟು 10 ಮಂದಿ ಅಪರಾಧಿಗಳನ್ನು ವಿವಿಧ ಕಾನೂನುಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಈ ತೀರ್ಪು ನೀಡಲಾಗಿದೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ರಕ್ಷಣಾ ಪರ ವಕೀಲರು ನಿರ್ಧರಿಸಿದ್ದಾರೆ.

ಸಂಗ್ರಹ ಚಿತ್ರ

ಛತ್ತೀಸ್‌ಗಢ: ವಿಧಾನ ಸಭಾ 2013ರ ಚುನಾವಣೆಗೂ ಮೊದಲು ಬಸ್ತಾರ್‌ನ ದರ್ಬಾದ ಜಿರಾಮ್ ಕಣಿವೆಯ ರಾಷ್ಟ್ರೀಯ ಹೆದ್ದಾರಿ 221ರಲ್ಲಿ ಮಾವೋವಾದಿಗಳು (Maoist attack) ನಡೆಸಿದ ಹತ್ಯಾಕಾಂಡ (Jhiram Valley massacre) ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರು ಸೇರಿ 10 ಮಂದಿ ಅಪರಾಧಿಗಳನ್ನು ಛತ್ತೀಸ್‌ಗಢದ (Chhattisgarh) ಬಸ್ತಾರ್ ಜಿಲ್ಲೆಯ ಜಗದಲ್‌ಪುರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ವಿವಿಧ ಕಾನೂನುಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಮರಣದಂಡನೆ (death penalty) ವಿಧಿಸಿ ಆದೇಶಿಸಿದೆ. ಜಿರಾಮ್ ಕಣಿವೆ ಹತ್ಯಾಕಾಂಡದಲ್ಲಿ 27 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಅಜಯ್ ಸಿಂಗ್ ರಜಪೂತ್ ಅವರು ಸೆಪ್ಟೆಂಬರ್ 5 ರಂದು 10 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆಯ ಪ್ರಮಾಣದ ಆದೇಶವನ್ನು ಕಾಯ್ದಿರಿಸಿದ್ದರು. ಇದೀಗ ಅವರಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ ಎಂದು ಎನ್‌ಐಎ ಪರ ವಕೀಲ ದಿನೇಶ್ ಪನಿಗ್ರಾಹಿ ದೃಢಪಡಿಸಿದ್ದಾರೆ. ನ್ಯಾಯಾಯಲಯದ ತೀರ್ಪಿನ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ರಕ್ಷಣಾ ಪರ ವಕೀಲ ಅರವಿಂದ್ ಚೌಧರಿ ತಿಳಿಸಿದರು.

ಬೆಂಗಳೂರಲ್ಲಿ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪತಿ!

ಪ್ರಕರಣಕ್ಕೆ ಸಂಬಂಧಿಸಿ ಚೈತು ಲೆಕಮ್, ಮುಕ್ಕಾ ಮಂಡವಿ, ಕೋಸಾ ಕವಾಸಿ, ಆಯತಾ ಮಾರ್ಕಮ್, ಮಡ್ಕಾಮಿ ದೇವ, ಜೋಗಾ ಮಡ್ಕಾಮಿ, ಬಂಜಾಮಿ ಸನ್ನಾ ಮತ್ತು ಮಹಾದೇವ್ ನಾಗ್ ಮಹಿಳೆಯರಾದ ಪ್ರಮೀಳಾ ಮೋಡಿಯಂ, ಸುಮಿತ್ರಾ ಪುನೆಮ್ ಮೋಡಿಯಂ ಅವರನ್ನು ಭಾರತೀಯ ದಂಡ ಸಂಹಿತೆ ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.

ಏನಾಗಿತ್ತು?

ಛತ್ತೀಸ್‌ಗಢದ 2013ರ ವಿಧಾನಸಭಾ ಚುನಾವಣೆಗೆ ಮೊದಲು ದರ್ಬಾದ ಜಿರಾಮ್ ಕಣಿವೆಯ ರಾಷ್ಟ್ರೀಯ ಹೆದ್ದಾರಿ 221ರಲ್ಲಿ ಮಾವೋವಾದಿಗಳು ಕಾಂಗ್ರೆಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದರು. ಐಇಡಿ ಸ್ಫೋಟಗೊಳಿಸಿ ದಾಳಿಯನ್ನು ಪ್ರಾರಂಭಿಸಲಾಯಿತು. ಗುಂಡಿನ ದಾಳಿ, ಗ್ರೆನೇಡ್ ದಾಳಿಗಳಿಂದ 24 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಗಾಯಗೊಂಡವರ ಪೈಕಿ ಮೂವರು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಮೃತರಲ್ಲಿ ಆಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದ್ ಕುಮಾರ್ ಪಟೇಲ್, ಅವರ ಪುತ್ರ ದಿನೇಶ್ ಪಟೇಲ್, ವಿರೋಧ ಪಕ್ಷದ ಮಾಜಿ ನಾಯಕ ಮಹೇಂದ್ರ ಕರ್ಮ, ಕೇಂದ್ರದ ಮಾಜಿ ಸಚಿವ ವಿದ್ಯಾ ಚರಣ್ ಶುಕ್ಲಾ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಉದಯ್ ಮುದ್ಲಿಯಾರ್ ಸೇರಿದ್ದರು.

ನಿಷೇಧಿತ ಮಾವೋವಾದಿ ಸಿಪಿಐ ಸಂಘಟನೆಯ ಸಶಸ್ತ್ರ ಕಾರ್ಯಕರ್ತರು, ಸ್ಥಳೀಯ ಸಮಿತಿ ಮತ್ತು ವಿಭಾಗಗಳ ಕಾರ್ಯಕರ್ತರೊಂದಿಗೆ ಬೆರೆತು 'ಟ್ಯಾಕ್ಟಿಕಲ್ ಕೌಂಟರ್ ಅಫೆನ್ಸಿವ್ ಕ್ಯಾಂಪೇನ್' (TCOC) ಭಾಗವಾಗಿ ಆಯೋಜಿಸಲಾಗಿದ್ದ 'ಪರಿವರ್ತನ್ ಕಾಂಗ್ರೆಸ್ ಯಾತ್ರೆ'ಯ ಮೇಲೆ ದಾಳಿ ನಡೆಸಿದ್ದರು. ಯಾತ್ರೆಯ ಭಾಗವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಭದ್ರತಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದು ತನಿಖೆಯಿಂದ ದೃಢಪಟ್ಟಿದೆ.

ಆರಂಭದಲ್ಲಿ ರಾಜ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಬಳಿಕ ಇದನ್ನು ಎನ್‌ಐಎಗೆ ಹಸ್ತಾಂತರಿಸಲಾಯಿತು. ಒಂಬತ್ತು ಆರೋಪಿಗಳ ವಿರುದ್ಧ ಮೊದಲ ದೋಷಾರೋಪಣೆ ಪಟ್ಟಿಯನ್ನು 2014ರ ಸೆಪ್ಟೆಂಬರ್ 25ರಂದು ಸಲ್ಲಿಸಲಾಯಿತು. ಬಳಿಕ 2015ರ ಸೆಪ್ಟೆಂಬರ್ 28ರಂದು 30 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಇದರಿಂದ ಆರೋಪಿಗಳ ಸಂಖ್ಯೆ 39ಕ್ಕೆ ಏರಿಕೆಯಾಗಿತ್ತು.

ಬಂಧಿತ 11 ಆರೋಪಿಗಳ ಪೈಕಿ ಒಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾಗ ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ರಾಜಕೀಯ ಪಿತೂರಿ ಇದೆ. ಈ ಬಗ್ಗೆ ಎನ್‌ಐಎ ಸಂಪೂರ್ಣ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ದೂರುತ್ತಲೇ ಇದೆ.

ಪ್ರಕರಣಕ್ಕೆ ಸಂಬಂಧಿಸಿ 2019ರಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಆಗಿನ ಕಾಂಗ್ರೆಸ್ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ಹೊಸ ಎಫ್‌ಐಆರ್ ದಾಖಲಿಸಿತ್ತು. ಅನಂತರ ಎನ್‌ಐಎ ಈ ಹೊಸ ತನಿಖೆಯನ್ನು ತನ್ನ ವಶಕ್ಕೆ ಪಡೆಯಲು ಕೋರಿತು. ಅದರ ಮನವಿ ತಿರಸ್ಕೃತಗೊಂಡಿದ್ದು, ಅದು ಸುಪ್ರೀಂ ಕೋರ್ಟ್‌ನ ಮೊರೆ ಹೋಯಿತು. ಇದರಲ್ಲಿ ಮಧ್ಯೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿತ್ತು.

ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ನಿಗೂಢ ಸಾವು ಪ್ರಕರಣ: ಆದಿತ್ಯ ಠಾಕ್ರೆಗೆ 500 ಕೋಟಿ ರೂ. ಗಳ ನೋಟಿಸ್

ಕಾಂಗ್ರೆಸ್ ಹೇಳುವುದೇನು?

ಈ ಕುರಿತು ಪ್ರತಿಕ್ರಿಯಿಸಿದ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದೀಪಕ್ ಬೈಜ್, ಇದು ಅಪೂರ್ಣ ನ್ಯಾಯಕ್ಕೆ ಸಮಾನವಾಗಿದೆ. ಪಕ್ಷವು ನ್ಯಾಯಾಲಯದ ನಿರ್ಧಾರವನ್ನು ಗೌರವಿಸುತ್ತದೆ. ದಾಳಿಯಲ್ಲಿ ಸುಮಾರು 200 ಮಾವೋವಾದಿಗಳು ಭಾಗಿಯಾಗಿದ್ದರು. ಆದರೆ 39 ಮಂದಿಯನ್ನು ಆರೋಪಿಗಳೆಂದು ಗುರುತಿಸಿ ಕೇವಲ 10 ಮಂದಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಯಾಕೆ ಹೀಗೆ ಎಂದು ಪ್ರಶ್ನಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author