ನವದೆಹಲಿ, ಫೆ.9: 20 ವರ್ಷದ ಭಯೋತ್ಪಾದಕ ಅಬ್ದುಲ್ ರೆಹಮಾನ್ (terrorist Abdul Rehman) ಮತ್ತೊಬ್ಬ ಕೈದಿಯ ದಾಳಿಗೆ ಬಲಿಯಾಗಿರುವ ಘಟನೆ ಫರಿದಾಬಾದ್ ಜಿಲ್ಲಾ ಜೈಲಿನಲ್ಲಿ (Faridabad jail) ನಡೆದಿದೆ. ಕೈದಿಯೊಬ್ಬ ಭಾನುವಾರ (ಫೆ.8) ಜೈಲಿನ ಆವರಣದೊಳಗೆ ಶಂಕಿತ ಉಗ್ರನ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಬ್ದುಲ್ ರೆಹಮಾನ್ ಮೇಲೆ ಅದೇ ಜೈಲಿನಲ್ಲಿದ್ದ ಕಾಶ್ಮೀರಿ ಯುವಕ ಅರುಣ್ ಚೌಧರಿ ಎಂಬಾತ ಹಲ್ಲೆ ನಡೆಸಿದ್ದಾನೆ. ಭಾನುವಾರ ತಡರಾತ್ರಿ ಆರೋಪಿಯು ಕೈದಿ ಅಬ್ದುಲ್ ರೆಹಮಾನ್‍ನ ತಲೆಗೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾನೆ. ಆತನಿಗೆ ಗಂಭೀರ ಗಾಯಗಳಾಗಿದ್ದು, ಮೃತಪಟ್ಟಿದ್ದಾನೆ ಎಂದು ಪೊಲೀಸ್ ವಕ್ತಾರ ಯಶ್ಪಾಲ್ ಸಿಂಗ್ ಹೇಳಿದರು.
Terrorist Death: ಶಂಕಿತ ಭಯೋತ್ಪಾದಕ ಕೇಂದ್ರ ಕಾರಾಗೃಹದಲ್ಲಿ ಸಾವು
ಅಬ್ದುಲ್ ರೆಹಮಾನ್ ಉತ್ತರ ಪ್ರದೇಶದ ಮಿಲ್ಕಿಪುರ ನಿವಾಸಿಯಾಗಿದ್ದು, ಮಾರ್ಚ್ 2, 2025 ರಂದು ಪಾಲಿ ಗ್ರಾಮದ ಬಳಿ ಎರಡು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಬಂಧಿಸಲಾಗಿತ್ತು. ಅಯೋಧ್ಯೆಯಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚಿನಲ್ಲಿ ಆತ ಭಾಗಿಯಾಗಿದ್ದ ಎಂದು ಭದ್ರತಾ ಸಂಸ್ಥೆಗಳು ಹೇಳಿದ್ದವು. ಆತನ ಬಂಧನದ ಸಮಯದಲ್ಲಿ, ತನಿಖಾಧಿಕಾರಿಗಳು ಆತನಿಂದ ಹಲವಾರು ವಿಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ರಾಮ ಮಂದಿರಕ್ಕೆ ಸಂಬಂಧಿಸಿದ ವಿವರಗಳಿದ್ದವು ಎಂದು ವರದಿಯಾಗಿದೆ.
ಗುಜರಾತ್ ವಿಶೇಷ ಕಾರ್ಯಪಡೆ (STF) ಮತ್ತು ಹರಿಯಾಣ STF ಜಂಟಿ ಕಾರ್ಯಾಚರಣೆಯ ಮೂಲಕ ಅಬ್ದುಲ್ ರೆಹಮಾನ್ ಅನ್ನು ಬಂಧಿಸಲಾಯಿತು. ಆ ಸಮಯದಲ್ಲಿ ಆತನಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದ್ದು, ಯಾವುದೇ ಅಪಾಯವಾಗದಂತೆ ತಡೆಗಟ್ಟಲಾಯಿತು ಎಂದು ಅಧಿಕಾರಿಗಳು ಹೇಳಿದ್ದರು. ಆತನ ಬಂಧನದ ನಂತರ, ದೊಡ್ಡ ಭಯೋತ್ಪಾದಕ ಜಾಲದ ತನಿಖೆ ಮುಂದುವರಿದಂತೆ ಆತನನ್ನು ಫರಿದಾಬಾದ್ ಜೈಲಿನಲ್ಲಿ ಇರಿಸಲಾಯಿತು.
ಹತ್ಯೆಗೂ ಮುನ್ನ ಜಮ್ಮು-ಕಾಶ್ಮೀರದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಜೈಶ್ ಭಯೋತ್ಪಾದಕ
ದಾಳಿ ನಡೆದ ತಕ್ಷಣ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಬ್ದುಲ್ ರೆಹಮಾನ್‍ನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆತರಲಾಯಿತು. ಆದರೆ, ವೈದ್ಯರು ಆತ ಮೃತಪಟ್ಟಿದ್ದಾಗಿ ಘೋಷಿಸಿದರು. ಘಟನೆಯ ನಂತರ, ಜೈಲಿನೊಳಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಜೈಲಿಗೆ ಭೇಟಿ ನೀಡಿದರು.
ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಕೈದಿ ಅರುಣ್ ಚೌಧರಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಲಿನ ಭದ್ರತೆಯಲ್ಲಿನ ಯಾವುದೇ ಲೋಪಗಳು ದಾಳಿ ನಡೆಯಲು ಅವಕಾಶ ಮಾಡಿಕೊಟ್ಟಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ವಿವರವಾದ ತನಿಖೆ ನಡೆಯುತ್ತಿದ್ದು, ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.