ಹತ್ಯೆಗೂ ಮುನ್ನ ಜಮ್ಮು-ಕಾಶ್ಮೀರದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಜೈಶ್ ಭಯೋತ್ಪಾದಕ
ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈತನ ಬಗ್ಗೆ ಭಯಾನಕ ಸುದ್ದಿಯೊಂದು ಹೊರಬಿದ್ದಿದ್ದು, ಹತ್ಯೆಗೂ ಮುನ್ನ ಆತ ಜಮ್ಮು ಕಾಶ್ಮೀರದಲ್ಲಿ ನೆಲೆಸಿದ್ದ ಎನ್ನಲಾಗಿದೆ.
-
ಶ್ರೀನಗರ, ಜ. 25: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಥುವಾ (Kathua) ಜಿಲ್ಲೆಯಲ್ಲಿ ಶುಕ್ರವಾರ (ಜನವರಿ 23) ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್-ಎ-ಮೊಮ್ಮದ್ (Jaish-e-Mohammad) ಸಂಘಟನೆಯ ಕಮಾಂಡರ್‌ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಹತ್ಯೆಯಾದ ಉಗ್ರನನ್ನು ಪಾಕಿಸ್ತಾನ (Pakistan) ಮೂಲದ ಉಸ್ಮಾನ್ (Usman) ಗುರುತಿಸಲಾಗಿದೆ. ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಶುಕ್ರವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಲಿ ಪಡೆದಿವೆ.
ಕಥುವಾದ ಬಿಲ್ಲಾವರ್ ಪ್ರದೇಶದ ಪರ್ಹೇಟರ್ ಎಂಬಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಸೇನೆ ಮತ್ತು ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿ ಪ್ರದೇಶವನ್ನು ಸುತ್ತುವರಿದಿದ್ದವು. ಈ ವೇಳೆ ತಾನು ಅಡಗಿದ್ದ ಮನೆಯಲ್ಲಿದ್ದ ಕುಟುಂಬದ ಸದಸ್ಯರನ್ನೇ ಬಂಧಿಯಾಗಿಸಿ ಉಗ್ರ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಚಾಣಾಕ್ಷತನದಿಂದ ಕಾರ್ಯಚರಣೆ ನಡೆಸಿದ ಸೇನೆಯು, ಒತ್ತೆಯಾಳುಗಳನ್ನು ರಕ್ಷಸಿ ಉಗ್ರನನ್ನು ಹೊಡೆದುರುಳಿಸಿದೆ ಎಂದು ಕಥುವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮೋಹಿತಾ ಶರ್ಮಾ ತಿಳಿಸಿದ್ದಾರೆ.
ಗಗನಯಾತ್ರಿ ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಘೋಷಣೆ
2024ರಲ್ಲಿ ಭಾರತಕ್ಕೆ ನುಸುಳಿದ್ದ ಉಸ್ಮಾನ್, ಬಾನಿ–ಬಿಲ್ಲಾವರ್ ವಲಯದಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ದಟ್ಟ ಅರಣ್ಯಗಳು ಹಾಗೂ ಕಡಿದಾದ ಪರ್ವತ ಪ್ರದೇಶಗಳಲ್ಲಿ ತನ್ನ ಅಡಗುತಾಣಗಳನ್ನು ನಿರ್ಮಿಸಿಕೊಂಡಿದ್ದ. ಅವನು ಆರು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದು, ಹಲವಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯಿಂದ ಕಣ್ಮರೆಯಾಗಿರಲು ಉಸ್ಮಾನ್ ನೈಸರ್ಗಿಕ ಗುಹೆಗಳನ್ನೇ ಅಡಗುತಾಣಗಳಾಗಿ ಬಳಸಿಕೊಂಡು ದಾಳಿಗಳ ಯೋಜನೆ ರೂಪಿಸುತ್ತಿದ್ದ. ಕಥುವಾ ಜಿಲ್ಲೆಯ ಬಾನಿ ಮತ್ತು ಬಿಲ್ಲಾವರ್ ಪ್ರದೇಶಗಳಲ್ಲಿ ಹಲವು ದಿನಗಳಿಂದ ಭದ್ರತಾ ಪಡೆಗಳು ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರೂ ಉಸ್ಮಾನ್‌ನ ಸುಳಿವು ಸಿಕ್ಕಿರಲಿಲ್ಲ. ಜನವರಿ 7ರಂದು, ಬಿಲ್ಲಾವರ್‌ನಲ್ಲಿ ಅವನ ಮೂರು ಅಡಗುತಾಣಗಳನ್ನು ಭದ್ರತಾ ಪಡೆಗಳು ಪತ್ತೆಹಚ್ಚಿ ಧ್ವಂಸಗೊಳಿಸಿದ್ದವು.
ಗುಪ್ತಚರ ಮಾಹಿತಿಯ ಪ್ರಕಾರ, ಅಡಗುತಾಣಗಳು ನಾಶವಾದ ಬಳಿಕ ಉಸ್ಮಾನ್ ಗ್ರಾಮಸ್ಥರ ಮನೆಗಳಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಮಧ್ಯಾಹ್ನ ಭಾನೆತರ್ ಗ್ರಾಮದೊಂದರ ಮನೆಯಲ್ಲಿ ಉಸ್ಮಾನ್ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಭದ್ರತಾ ಪಡೆಗಳು ತ್ವರಿತ ಕಾರ್ಯಾಚರಣೆ ಆತನನ್ನು ಬಲಿ ಪಡೆದಿವೆ. ಮೃತ ಉಗ್ರನಿಂದ ಎಂ4 ಸ್ವಯಂಚಾಲಿತ ರೈಫಲ್ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಈ ಪ್ರದೇಶದಲ್ಲಿ ಶೋಧಕಾರ್ಯ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.