ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ
Kerala student self-harming: ಕೇರಳದ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ಕಟ್ಟಡದಿಂದ ಬಿದ್ದು ಮೃತಪಟ್ಟ (ಆತ್ಮಹತ್ಯೆ ಮಾಡಿದ) ನಂತರ ಪೊಲೀಸರು ಅಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯನ್ನು ತಿರುವನಂತಪುರಂನ ಪುದುಕುಲಂಗರದ ಉಳಮಲಕ್ಕಲ್ ಮೂಲದ ನಿತಿನ್ ರಾಜ್ ಆರ್‌ಎಲ್ (22) ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಕಣ್ಣೂರು, ಏ.12: ಕೇರಳದ (Kerala) ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು (student death) ಕಟ್ಟಡದಿಂದ ಬಿದ್ದು ಮೃತಪಟ್ಟ (ಆತ್ಮಹತ್ಯೆ ಮಾಡಿದ) ನಂತರ ಪೊಲೀಸರು ಅಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಅಧ್ಯಾಪಕರಿಂದ ಭಾವನಾತ್ಮಕ ಕಿರುಕುಳ ಅನುಭವಿಸಿದ್ದಾರೆ ಎಂದು ಮೃತಪಟ್ಟನ ಪೋಷಕರು ಮತ್ತು ಸ್ನೇಹಿತರು ಆರೋಪಿಸಿದ ನಂತರ, ಚಕ್ಕರಕ್ಕಲ್ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ವಿದ್ಯಾರ್ಥಿಯನ್ನು ತಿರುವನಂತಪುರಂನ ಪುದುಕುಲಂಗರದ ಉಳಮಲಕ್ಕಲ್ ಮೂಲದ ನಿತಿನ್ ರಾಜ್ ಆರ್‌ಎಲ್ (22) ಎಂದು ಗುರುತಿಸಲಾಗಿದೆ. ಇಲ್ಲಿನ ಅಂಜರಕಂಡಿಯಲ್ಲಿರುವ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಏಪ್ರಿಲ್ 10 ರ ಮಧ್ಯಾಹ್ನ ಕಟ್ಟಡದಿಂದ ಬಿದ್ದು ರಾಜ್ ವೈದ್ಯಕೀಯ ಕಾಲೇಜು ಬ್ಲಾಕ್ ಬಳಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ವೈದ್ಯಕೀಯ ಕಾಲೇಜಿಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ, ನಂತರ ಅವರು ಮೃತಪಟ್ಟಿದ್ದಾರೆ.
ಘಟನೆಯ ನಂತರ, ಕಾಲೇಜು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿತು. ಶನಿವಾರ ದಂತ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಎಂಕೆ ರಾಮ್ ಮತ್ತು ಅಸೋಸಿಯೇಟ್ ಪ್ರೊಫೆಸರ್ ಕೆಟಿ ಸಂಗೀತಾ ನಂಬಿಯಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ದೈಹಿಕ ಹಲ್ಲೆ ಮತ್ತು ಪರೀಕ್ಷೆಗಳಲ್ಲಿ ಅಂಕಗಳನ್ನು ಕಡಿಮೆ ಮಾಡುವಂತಹ ಶೈಕ್ಷಣಿಕ ಪರಿಣಾಮಗಳನ್ನು ಒಳಗೊಂಡಂತೆ ಅಧ್ಯಾಪಕರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜ್ ತನ್ನ ಸ್ನೇಹಿತರಿಗೆ ಆಡಿಯೋ ಸಂದೇಶವನ್ನು ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದ್ದು, ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಚಕ್ಕರಕ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ರಾಜ್ ಅವರ ಸಹಪಾಠಿಗಳು, ಕಾಲೇಜು ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗನ ಕಪ್ಪು ಮೈಬಣ್ಣ ಮತ್ತು ಬಡ ಕುಟುಂಬದ ಹಿನ್ನೆಲೆಯ ಕಾರಣ ಶಿಕ್ಷಕರು ಭಾವನಾತ್ಮಕವಾಗಿ ಮತ್ತು ಮೌಖಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮೃತ ರಾಜ್ ತಂದೆ ಆರೋಪಿಸಿದ್ದಾರೆ. ಅಧ್ಯಾಪಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಮತ್ತು ಮಗನ ಸಾವಿನ ಬಗ್ಗೆ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.
Harassment: ನನಗೆ ಕ್ಯಾನ್ಸರ್ ಇದೆ, ನಗ್ನ ಫೋಟೋ ಕಳಿಸು: ಶಿಕ್ಷಕಿಗೆ ಕಾಮುಕನ ಕಿರುಕುಳ!
ರಾಜ್ ಸಹೋದರಿ ನಿಕಿತಾ, ಜಾತಿ ಮತ್ತು ಬಣ್ಣದ ಆಧಾರದ ಮೇಲೆ ಪದೇ ಪದೇ ಕಿರುಕುಳ ಅನುಭವಿಸಿದ್ದಾರೆ ಎಂದು ಹೇಳಿದರು. ರಾಜ್ ಕಾಲೇಜು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ರಾಜ್ ಅವರನ್ನು ತರಗತಿಯಲ್ಲಿ ಇತರ ವಿದ್ಯಾರ್ಥಿಗಳ ಮುಂದೆ ಅಧ್ಯಾಪಕ ಸದಸ್ಯರು ಸ್ಲಮ್ ಡಾಗ್ ಎಂದು ಕರೆಯುತ್ತಿದ್ದರು ಎಂದು ಸಹೋದರಿ ಹೇಳಿದ್ದಾರೆ. ಒಮ್ಮೆ, ಕಿರುಕುಳ ಅಸಹನೀಯವಾದಾಗ, ಅವನು ಪ್ರತಿಕ್ರಿಯಿಸಿದನು. ಈ ವೇಳೆ ನಿಂದನೆ ತೀವ್ರಗೊಂಡಿತು ಎಂದು ಅವರು ಹೇಳಿದರು.
ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಭಾನುವಾರ (ಏ.12) ವಿದ್ಯಾರ್ಥಿಯ ಸಾವಿನ ಬಗ್ಗೆ ವಿವರವಾದ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.