ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಕೇರಳ (Kerala) ಮೂಲದ ಮಹಿಳೆಯರ ಕೊಲೆಯಾಗಿದ್ದು, ಘಟನೆ ಸಂಬಂಧಿಸಿದಂತೆ ಅವರ (Murder Case) ಆಪ್ತ ಸ್ನೇಹಿತೆಯನ್ನು ಬಂಧಿಸಲಾಗಿದೆ. ಮೃತರನ್ನು ತ್ರಿಶೂರ್ ಮೂಲದ ಅಂಜನಾ ಹರಿ (35) ಮತ್ತು ತಿರುವನಂತಪುರಂ ಮೂಲದ ಆನ್ ಮೇರಿ ಮ್ಯಾಥ್ಯೂ (40) ಎಂದು ಗುರುತಿಸಲಾಗಿದೆ. ಈ ಸಾವುಗಳಿಗೆ ಸಂಬಂಧಿಸಿದಂತೆ ಅವರ ಸ ಸ್ನೇಹಿತೆ ಕೊಟ್ಟಾಯಂ ಮೂಲದ ಅನಿಲಾ (32) ಅವರನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಮೂವರು ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿರುವ ಅಪಾರ್ಟ್‌ಮೆಂಟ್ ಒಂದರದಲ್ಲಿ ವಾಸವಿದ್ದರು. ವರದಿಗಳ ಪ್ರಕಾರ, ಶುಕ್ರವಾರ ಮಧ್ಯಾಹ್ನ ಆನ್ ಮೇರಿಯನ್ನು ಫ್ಲಾಟ್‌ನ ಕೋಣೆಯೊಳಗೆ ಇರಿದು ಕೊಲ್ಲಲಾಗಿದೆ ಬಳಿಕ ಅಂಜನಾಳನ್ನು ಕೆಳಕ್ಕೆ ಕರೆಸಿ ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಅಂಜನಾ ಮೇಲೆ ಹರಿದ ನೀಲಿ ಬಣ್ಣದ ಎಸ್‌ಯುವಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತರು ಇತ್ತೀಚೆಗೆ ಓಣಂ ಆಚರಣೆಗಳಲ್ಲಿ ಒಟ್ಟಿಗೆ ಭಾಗವಹಿಸಿದ್ದ ಆಪ್ತ ಸ್ನೇಹಿತೆಯರಾಗಿದ್ದು, ಹತ್ಯೆಗಳ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಮೃತದೇಹಗಳನ್ನು ಭಾರತಕ್ಕೆ ತರುವ ಬಗ್ಗೆ ಇಂದು ಬೆಳಗ್ಗೆ ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲ್ ಜನರಲ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ. ಶವಗಳನ್ನು ಭಾರತಕ್ಕೆ ರವಾನಿಸಲು ಅಗತ್ಯವಾದ ದಾಖಲೆಗಳನ್ನು ಪ್ರಕ್ರಿಯೆಗೊಳಿಸಲು ಮೃತರ ಕುಟುಂಬಸ್ಥರಿಗೆ ಸೂಚಿಸಲಾಗಿದೆ.
ಇನ್ನು ಕೊಲೆಯಾದ ಅಂಜನಾ ಶಾಲಾ ಶಿಕ್ಷಕಿಯಾಗಿದ್ದರು. ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ತಮ್ಮ ಪತಿ ವಿಜೇಶ್ ಮತ್ತು ಆರು ವರ್ಷದ ಮಗಳು ವಾಮಿಕಾ ಅವರೊಂದಿಗೆ ವಾಸಿಸುತ್ತಿದ್ದರು. ಕುಟುಂಬವು 2021 ರಲ್ಲಿ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಿತು. ಅಂಜನಾ ಕೊನೆಯ ಬಾರಿಗೆ ಕೇರಳಕ್ಕೆ ಭೇಟಿ ನೀಡಿದ್ದರು. ಆನ್ ಮೇರಿ ಅಮೆರಿಕದ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಪತಿ ಜಾಕೋಬ್ ಮತ್ತು ಅವರ ಮಕ್ಕಳಾದ ಆಂಡ್ರೀಸಾ (12) ಮತ್ತು ಅಲಿಸಾ (5) ಅವರನ್ನು ಅಗಲಿದ್ದಾರೆ. ಸದ್ಯ ಕೊಲೆಯ ಬಗ್ಗೆ ಅಮೆರಿಕನ್ ಪೊಲೀಸರು ಸಮಗ್ರ ತನಿಖೆಯನ್ನು ಪ್ರಾರಂಭಿಸಿದ್ದಾರೆ.