ಪುಣೆ, ಸೆ.20: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ (Ketan Agarwal Murder Case) ಸಂಬಂಧ ಪುಣೆ ನ್ಯಾಯಾಲಯದಲ್ಲಿ ಪೊಲೀಸರು, ಶನಿವಾರ (ಸೆ.19) 5,053 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಲೋಹಗಢ ಕೋಟೆಯಲ್ಲಿ (Lohagad Fort) ಕೇತನ್ ಅಗರ್ವಾಲ್ ಹತ್ಯೆ ನಡೆದಿತ್ತು. ಕೇತನ್ ಅವರ ಸಾವಿನ ಹಿಂದೆ ನಡೆದಿರಬಹುದು ಎನ್ನಲಾದ ಸಂಚಿನ ವಿವರಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ.
ಜೂನ್ 18ರಂದು ಕೇತನ್ ಅವರನ್ನು ಕೋಟೆಯಿಂದ ಕೆಳಗೆ ತಳ್ಳಲಾಗಿತ್ತು, ಇದರಿಂದ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಕೇತನ್ ಅವರ ಜೊತೆ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್, ಸಿಯಾಳ ಪ್ರಿಯಕರ ಚೇತನ್ ಚೌಧರಿ ಹಾಗೂ ಮತ್ತೊಬ್ಬ ಆರೋಪಿ ರಿತೇಶ್ ಹಂಗೆ ಅವರನ್ನು ಬಂಧಿಸಲಾಗಿದೆ.
ಕೇತನ್ ಮತ್ತು ಸಿಯಾ ಇಬ್ಬರೂ ಪುಣೆಯವರಾಗಿದ್ದು, 2026ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ವಿವಾಹವನ್ನು ನವೆಂಬರ್‌ನಲ್ಲಿ ಜೈಪುರದಲ್ಲಿ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿತ್ತು. ಆರೋಪಪಟ್ಟಿಯ ಪ್ರಕಾರ, ಆರೋಪಿಗಳು ಮೊದಲು ಕೇತನ್ ಅಗರ್ವಾಲ್ ಅವರನ್ನು ಗಂಭೀರವಾಗಿ ಗಾಯಗೊಳಿಸುವ ಬಗ್ಗೆ ಚರ್ಚಿಸಿದ್ದರು. ಈ ಕೆಲಸವನ್ನು ಮಾಡಲು ಮಹಾರಾಷ್ಟ್ರದ ಹೊರಗಿನಿಂದ ಯಾರನ್ನಾದರೂ ನೇಮಿಸಿಕೊಳ್ಳುವ ಬಗ್ಗೆಯೂ ಯೋಚಿಸಿದ್ದರು.
ಆದರೆ ಆ ವ್ಯಕ್ತಿ ನಂತರ ತಮ್ಮ ಸಂಚಿನ ಬಗ್ಗೆ ಪೊಲೀಸರಿಗೆ ಅಥವಾ ಬೇರೆಯವರಿಗೆ ಮಾಹಿತಿ ನೀಡಬಹುದು, ಅಥವಾ ತಮಗೆ ಸಮಸ್ಯೆ ಉಂಟುಮಾಡಬಹುದು ಎಂಬ ಭಯದಿಂದ ಆ ಯೋಜನೆಯನ್ನು ಕೈಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಈ ಹಂತದಲ್ಲಿ ಆರೋಪಿಗಳು ಸಂಪರ್ಕಿಸಿದ್ದ ಒಬ್ಬ ವ್ಯಕ್ತಿ, ಈಗ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಪಟ್ಟಿಯ ಪ್ರಕಾರ, ನಂತರ ಆರೋಪಿಗಳು ಕೇತನ್ ಅಗರ್ವಾಲ್ ಅವರನ್ನು ತಾವೇ ಕೊಲ್ಲಲು ನಿರ್ಧರಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಕೊಲೆ ಮಾಡುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಅವರು ಕೆಲವು ಕೊಲೆ ಕುರಿತ ಸಿನಿಮಾಗಳನ್ನು ವೀಕ್ಷಿಸಿದ್ದರು ಮತ್ತು ಚಾಟ್ ಜಿಪಿಟಿ ಬಳಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರಿಗೆ ಸಿಕ್ಕಿಬೀಳದಂತೆ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಪಾಡ್‌ಕಾಸ್ಟ್‌ಗಳನ್ನೂ ಆಲಿಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮೊಮ್ಮಗನ ಸಾವಿನಿಂದ ಶಾಕ್; ಕೇತನ್ ಅಗರ್ವಾಲ್ ಕೊಲೆಯ 17 ದಿನಗಳ ನಂತರ ತಾತ ನಿಧನ
ಇದಲ್ಲದೆ, ಅವರು ಮೇಘಾಲಯದ ರಾಜಾ ರಘುವಂಶಿ ಹನಿಮೂನ್ ಹತ್ಯೆ ಪ್ರಕರಣದ ಬಗ್ಗೆಯೂ ಸಂಶೋಧನೆ ನಡೆಸಿದ್ದರು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಮಧ್ಯಪ್ರದೇಶದ ಇಂದೋರ್ ನಿವಾಸಿ ರಘುವಂಶಿ, ಕಳೆದ ವರ್ಷ (2025) ಮೇ ತಿಂಗಳಲ್ಲಿ ಮೇಘಾಲಯದಲ್ಲಿ ಹನಿಮೂನ್ ತೆರಳಿದ್ದ ವೇಳೆ ಅವರ ಪತ್ನಿ ಸೋನಂ ಅವರಿಂದ ಕೊಲೆಯಾಗಿದ್ದರು.
ಲೋಹಗಢ ಕೋಟೆಯನ್ನು ಆಯ್ಕೆ ಮಾಡುವ ಮೊದಲು ಆರೋಪಿಗಳು ಲೋನಾವಾಲ ಸುತ್ತಮುತ್ತಲಿನ ಸ್ಥಳಗಳ ಸಮೀಕ್ಷೆ ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಪಟ್ಟಿಯ ಪ್ರಕಾರ, ಗೋಯಲ್ ಮತ್ತು ಚೌಧರಿ ಟೈಗರ್ ಪಾಯಿಂಟ್ ಮತ್ತು ಇತರ ಸ್ಥಳಗಳಿಗೆ ಪ್ರತ್ಯೇಕ ಸ್ಥಳವನ್ನು ಹುಡುಕುತ್ತಾ ಭೇಟಿ ನೀಡಿದರು. ಸೆಲ್ಫಿ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಬಿದ್ದು ಅಗರ್ವಾಲ್ ಮೃತಪಟ್ಟಿದ್ದಾರೆ ಎಂದು ಬಿಂಬಿಸಬಹುದು ಎಂದು ಆರೋಪಿಗಳು ಲೋಹಗಢ ಕೋಟೆಯನ್ನು ಆಯ್ಕೆ ಮಾಡಿಕೊಂಡರು ಎನ್ನಲಾಗಿದೆ.