ಮೊಮ್ಮಗನ ಸಾವಿನಿಂದ ಶಾಕ್; ಕೇತನ್ ಅಗರ್ವಾಲ್ ಕೊಲೆಯ 17 ದಿನಗಳ ನಂತರ ತಾತ ನಿಧನ
Ketan Agarwal's Grandfather Dies: ಮೊಮ್ಮಗನ ಮರಣದ ಹದಿನೇಳು ದಿನಗಳ ನಂತರ, ಕೇತನ್ ಅಗರ್ವಾಲ್ ಅವರ ತಾತ ದೇವಿಚಂದ್ ಅಗರ್ವಾಲ್ ಶನಿವಾರ (ಜು.4) ರಾತ್ರಿ ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು. ಕೇತನ್ ಸಾವಿನ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ದೇವಿಚಂದ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೇತನ್ ಅಗರ್ವಾಲ್ ಕೊಲೆಯ 17 ದಿನಗಳ ನಂತರ ತಾತ ನಿಧನ -
ಪುಣೆ, ಜು.5: ಕೇತನ್ ಅಗರ್ವಾಲ್ (Ketan Agarwal) ಸಾವಿನಿಂದ ಈಗಾಗಲೇ ಕಂಗಾಲಾಗಿರುವ ಅಗರ್ವಾಲ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೊಮ್ಮಗನ ಮರಣದ ಹದಿನೇಳು ದಿನಗಳ ನಂತರ, ಕೇತನ್ ಅಗರ್ವಾಲ್ ಅವರ ತಾತ ದೇವಿಚಂದ್ ಅಗರ್ವಾಲ್ (Devichand Agarwal) ಶನಿವಾರ (ಜು.4) ರಾತ್ರಿ ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು. ಮೊಮ್ಮಗನನ್ನು ಕಳೆದುಕೊಂಡು ಅಪಾರ ದುಃಖತಪ್ತರಾಗಿದ್ದರು ಎಂದು ಅವರ ಕುಟುಂಬ ಹೇಳಿದೆ.
ಕೇತನ್ ಸಾವಿನ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ದೇವಿಚಂದ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ (ಜು.4) ರಾತ್ರಿ 9:45 ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೊಮ್ಮಗನ ನಿಧನದಿಂದ ದೇವಿಚಂದ್ ಕುಸಿದುಹೋಗಿದ್ದರು. ಅಂದಿನಿಂದ ಭಾವನಾತ್ಮಕವಾಗಿ ಹೋರಾಡುತ್ತಿದ್ದರು. ಆಘಾತ ಮತ್ತು ದುಃಖವು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಕುಟುಂಬ ಹೇಳಿದೆ.
ದೇವಿಚಂದ್ ಅಗರ್ವಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಜೂನ್ 27 ರಂದು, ತಮ್ಮ ವಸತಿ ಸಂಘದಲ್ಲಿ ನಡೆದಿದ್ದ ಮೇಣದಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಸಾವಿಗೆ ಕೆಲವು ದಿನಗಳ ಮೊದಲು, ದೇವಿಚಂದ್ ಅಗರ್ವಾಲ್ ತಮ್ಮ ಮೊಮ್ಮಗನಿಗೆ ನ್ಯಾಯ ಒದಗಿಸುವಂತೆ ಭಾವನಾತ್ಮಕವಾಗಿ ಮನವಿ ಮಾಡಿದ್ದರು. ದಶಕಗಳಿಂದ ತಮ್ಮ ಕುಟುಂಬ ನಂಬಿದ್ದ ಜನರು ಮಾಡಿದ ದ್ರೋಹದ ಬಗ್ಗೆ ಮಾತನಾಡುತ್ತಾ ಕಣ್ಣೀರು ಸುರಿಸುತ್ತಿದ್ದರು. ಸಿಯಾ ಮತ್ತು ಚೇತನ್‌ಗೆ ಮರಣದಂಡನೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ಸಿಯಾ ಗೋಯಲ್‌ಗೆ ಪಾಲಿಗ್ರಾಫ್ ಪರೀಕ್ಷೆಗೆ ಪೊಲೀಸರ ಮನವಿ
ಕೇತನ್ ಜೊತೆ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಕುಟುಂಬದೊಂದಿಗಿನ ದೀರ್ಘಕಾಲದ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ, ಆ ಯುವತಿಯ ಕುಟುಂಬವನ್ನು ನಾವು 35 ವರ್ಷಗಳಿಂದ ತಿಳಿದಿದ್ದೇವೆ ಎಂದು ದೇವಿಚಂದ್ ಹೇಳಿದ್ದರು. “ಅವರ ಮಗಳು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ಅವರ ಕುಟುಂಬಕ್ಕೆ ತಿಳಿದಿತ್ತು. ಆದರೆ, ಆಕೆಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ನಮ್ಮನ್ನು ಮದುವೆಗೆ ಒತ್ತಾಯಿಸಿದರು. ಅವರು ನಮಗೆ ಹಲವಾರು ಬಾರಿ ಭರವಸೆ ನೀಡಿದರು. ಚಿಂತಿಸಬೇಡಿ, ಅವಳು ತುಂಬಾ ಒಳ್ಳೆಯ ಹುಡುಗಿ ಎಂದಿದ್ದರು” ಎಂದು ಹೇಳಿದರು.
ಜೂನ್ 18 ರಂದು ಪುಣೆ ಬಳಿಯ ಲೋಹಗಡ್ ಕೋಟೆಯಿಂದ ಬಿದ್ದು ಕೇತನ್ ಅಗರ್ವಾಲ್ ಸಾವಿಗೀಡಾಗಿದ್ದರು. ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರಿಂದ, ತನಿಖೆ ಕೈಗೊಂಡ ಪೊಲೀಸರಿಗೆ ಇದು ಪೂರ್ವಯೋಜಿತ ಕೊಲೆ ಎಂದು ತಿಳಿದುಬಂತು. 25 ವರ್ಷದ ಕೇತನ್ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ವಿರುದ್ಧ ಪುಣೆ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇತನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಮುಖ ಆರೋಪಿ ಸಿಯಾಗೆ ಮದುವೆಯಾಗಲು ಇಷ್ಟವಿರಲಿಲ್ಲ. ಮದುವೆಯಾಗುವಂತೆ ಆಕೆಯ ಕುಟುಂಬದಿಂದ ಒತ್ತಡವಿತ್ತು ಎನ್ನಲಾಗಿದೆ.