ಕೋಟಾ: ರಾಜಸ್ಥಾನದ ಕೋಟಾ (Kota) ನಗರದ ಪ್ಲೇ ಸ್ಕೂಲ್ (Play School) ನಲ್ಲಿ ಎರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Assault) ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಬಾಲಕಿ ಹಾಗೂ ಶಾಲೆಯ ಪುರುಷ ಸಿಬ್ಬಂದಿಗಳ ಡಿಎನ್‌ಎ ಮಾದರಿಗಳನ್ನು (DNA Samples) ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಆಗಸ್ಟ್ 30ರಂದು ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆರಂಭದಲ್ಲಿ ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಪೋಷಕರು ಮತ್ತೊಬ್ಬ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿಯ ಖಾಸಗಿ ಅಂಗದ ಸುತ್ತ ಗಾಯದ ಗುರುತುಗಳು ಕಂಡುಬಂದಿದ್ದು, ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತವಾಗಿದೆ. ನಂತರ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬಾಲಕಿ ಹೇಳಿದ ಎರಡು ಪದಗಳು — ‘ಅಂಕಲ್’ ಮತ್ತು ‘ಫಿಂಗರ್’
ಕೋಟಾ ನಗರ ಪೊಲೀಸ್ ಅಧೀಕ್ಷಕಿ ತೇಜಸ್ವಿನಿ ಗೌತಮ್ ಅವರ ಪ್ರಕಾರ, ಬಾಲಕಿಯನ್ನು ಜೆಕೆ ಲೋನ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿಯಿಂದ ಸಂಗ್ರಹಿಸಿದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬಾಲಕಿಗೆ ನಡೆದಿರುವ ಘಟನೆ ಬಗ್ಗೆ ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬಾಲಕಿ ಕೇವಲ “ಅಂಕಲ್” ಮತ್ತು “ಫಿಂಗರ್” ಎಂಬ ಎರಡು ಪದಗಳನ್ನು ಹೇಳಿದ್ದಾಳೆ ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಶಾಲೆಯ ಸಿಬ್ಬಂದಿಗಳ ಮುಂದೆ, ವಿಶೇಷವಾಗಿ ಸ್ವೀಪರ್‌ನನ್ನು ನೋಡಿದಾಗ, ಬಾಲಕಿ ಭಯಭೀತಳಾಗಿ ತಾಯಿಯನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತಾಯಿಯ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಹಾಗೂ ಎಫ್‌ಎಸ್‌ಎಲ್ ವರದಿಗಳು ಬಂದ ಬಳಿಕವೇ ಘಟನೆ ನಿಜವಾಗಿಯೂ ನಡೆದಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ಪೊಲೀಸರು ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕಳೆದ 10 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇದುವರೆಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.