ಕೊಟ್ಟೂರು ತ್ರಿವಳಿ ಕೊಲೆ ಕೇಸ್‌ಗೆ ಟ್ವಿಸ್ಟ್; ಹಣಕ್ಕಾಗಿ ಮಾವನ ಜತೆ ಸೇರಿ ಸ್ವಂತ ಕುಟುಂಬವನ್ನೇ ಕೊಂದ ಕಿರಾತಕ!
Kotturu triple murder case: ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆಗೈದಿದ್ದ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಆದರೆ, ಇದೀಗ ಎಫ್‌ಡಿ ಹಣಕ್ಕಾಗಿ ಸ್ವಂತ ಕುಟುಂಬವನ್ನೇ ಕೊಂದಿದ್ದ ಎಂಬುವುದು ತಿಳಿದುಬಂದಿದೆ.
ಆರೋಪಿ ಅಕ್ಷಯ್, ಆತನ ಮಾವ ವಸಂತ್ ಕುಮಾರ್ ಮತ್ತು ಕೊಲೆಯಾದ ಕುಟುಂಬ. -
ವಿಜಯನಗರ: ಜಿಲ್ಲೆಯ ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ (Kotturu triple murder case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ತಂಗಿ ಗರ್ಭಿಣಿಯಾಗಿದ್ದಳು ಎಂಬ ಕಥೆ ಕಟ್ಟಿ ಪೊಲೀಸರನ್ನು ನಂಬಿಸಲು ಯತ್ನಿಸಿದ್ದ ಹಂತಕ ಅಕ್ಷಯ್‌ನ ಅಸಲಿ ಮುಖವಾಡ ಇದೀಗ ಕಳಚಿದೆ. ಈ ಭೀಕರ ಕೃತ್ಯದ ಹಿಂದೆ ಮರ್ಯಾದೆ ಹತ್ಯೆಯ ಕಾರಣವಿಲ್ಲ, ಬದಲಿಗೆ ಬರೋಬ್ಬರಿ 1.20 ಕೋಟಿ ರೂಪಾಯಿ ಎಫ್‌ಡಿ ಹಣದಾಸೆಗೆ ಕೃತ್ಯ ಎಸಗಿದ್ದಾನೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಬ್ಯಾಂಕ್‌ನಲ್ಲಿ 1.20 ಕೋಟಿ ರೂ. ಎಫ್‌ಡಿ
ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆಗೈದಿದ್ದ ಆರೋಪಿ ಅಕ್ಷಯ್, ತನ್ನ ತಂಗಿಯ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಕೋಟಿ ಕೋಟಿ ಹಣದ ವ್ಯವಹಾರ ಬೆಳಕಿಗೆ ಬಂದಿದೆ. ಹಂತಕ ಅಕ್ಷಯ್‌ಗೆ ಆತನ ಮಾವ ವಸಂತ್ ಕುಮಾರ್ ಸಹಾಯ ಮಾಡಿದ್ದು, ಇಬ್ಬರೂ ಸೇರಿ ಈ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಹರಪ್ಪನಹಳ್ಳಿಯಲ್ಲಿದ್ದ ಡೂಪ್ಲೆಕ್ಸ್ ಮನೆಯನ್ನು ಮಾರಾಟ ಮಾಡಿದ್ದ ತಂದೆ, ಬಂದ ಹಣದಲ್ಲಿ ಸುಮಾರು 1.20 ಕೋಟಿ ರೂ.ಗಳನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿದ್ದರು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಅಕ್ಷಯ್, ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.
ಮಗಳ ವಿದ್ಯಾಭ್ಯಾಸಕ್ಕೆ ಎತ್ತಿಟ್ಟಿದ್ದ ಹಣವೇ ಮುಳುವಾಯಿತೇ? ತಂದೆ ರಾಜಶೇಖರ್ ಅವರು ತನ್ನ ಮಗಳ ಭವಿಷ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಸುಮಾರು 50 ಲಕ್ಷ ರೂಪಾಯಿ ಹಣವನ್ನು ಆಕೆಯ ಹೆಸರಿನಲ್ಲಿ ಎಫ್‌ಡಿ ಮಾಡಿದ್ದರು. ಮನೆ ಮಾರಾಟದ ಉಳಿದ ಹಣವನ್ನೂ ಸಹ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಅಕ್ಷಯ್‌ಗೆ ಹಣ ನೀಡಲು ತಂದೆ ನಿರಾಕರಿಸಿದ್ದರು. ಇದರಿಂದ ತಂದೆ ಮತ್ತು ಮಗನ ನಡುವೆ ತೀವ್ರ ಗಲಾಟೆಗಳು ನಡೆಯುತ್ತಿದ್ದವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಾವ ವಸಂತ್ ಕುಮಾರ್, ಅಳಿಯನಿಗೆ ಕುಮ್ಮಕ್ಕು ನೀಡಿ ಮೂವರನ್ನೂ ಮುಗಿಸುವ ಪ್ಲಾನ್ ಹಾಕಿಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ.
ತಂಗಿ ಗರ್ಭಿಣಿ ಎಂದು ನಾಟಕವಾಡಿದ್ದ ಕಿರಾತಕ
ಪೊಲೀಸರ ದಿಕ್ಕು ತಪ್ಪಿಸಲು 'ಗರ್ಭಿಣಿ' ನಾಟಕ ಕೊಲೆಯ ನಂತರ ಅಕ್ಷಯ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತನ್ನ ತಂಗಿ ಯುವಕನೊಬ್ಬನ ಜತೆ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದಳು. ಇದರಿಂದ ಕುಟುಂಬದ ಮರ್ಯಾದೆ ಹೋಗುತ್ತದೆ ಎಂದು ಈ ಕೆಲಸ ಮಾಡಿದೆ ಎಂದು ಸುಳ್ಳು ಕತೆ ಸೃಷ್ಟಿಸಿದ್ದ. ಆದರೆ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆಯ ವೇಳೆ ಈ ಆರೋಪ ಸುಳ್ಳೆಂದು ಸಾಬೀತಾಗಿದೆ. ಹಣದ ವಿಚಾರ ಹೊರಬರಬಾರದು ಎಂಬ ಕಾರಣಕ್ಕೆ ಇಂತಹ ಕೀಳು ಮಟ್ಟದ ಆರೋಪ ಮಾಡಿದ್ದ ಎನ್ನಲಾಗಿದೆ.
ತನಿಖೆ ಮುಂದುವರಿಕೆ ಸದ್ಯ ಪೊಲೀಸರು ಅಕ್ಷಯ್ ಮತ್ತು ಆತನಿಗೆ ಪ್ರಚೋದನೆ ನೀಡಿದ ಮಾವ ವಸಂತ್ ಕುಮಾರ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.