ಶ್ರೀನಗರ, ಸೆ. 15: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲಷ್ಕರ್-ಎ-ತೊಯ್ಬಾ ಬೆಂಬಲಿತ ಭಯೋತ್ಪಾದನಾ ಓವರ್ ಗ್ರೌಂಡ್ ವರ್ಕರ್ (OGW) ಮಾಡ್ಯೂಲ್ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಬಂಧಿಸಲಾಗಿದೆ. ಭಯೋತ್ಪಾದಕರಿಗೆ (Terrorists) ನುಸುಳಲು ಸಹಾಯ ಮಾಡುತ್ತಿದೆ ಎಂದು ಹೇಳಲಾದ ಭಯೋತ್ಪಾದನಾ ಬೆಂಬಲ ಜಾಲದ ಮೇಲೆ ಈ ದಾಳಿ ನಡೆಸಲಾಯಿತು. ಈ ವೇಳೆ ಕೋಟ್ಚಾರ್ವಾಲ್ ಟೆರಿಯಾತ್ ನಿವಾಸಿಗಳಾದ ಜಾಕಿರ್ ಹುಸೇನ್ ಮತ್ತು ಮೊಹಮ್ಮದ್ ಅಜಮ್ ಹಾಗೂ ಉಧಾನ್ ರಾಜೌರಿಯ ಮೊಹಮ್ಮದ್ ಮುಷ್ತಾಕ್‌ನನ್ನು ಬಂಧಿಸಲಾಯಿತು.
ಬಂಧಿತ ಮೂವರು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಉಗ್ರರಿಗೆ ವಸತಿ, ಸುರಕ್ಷಿತ ಆಶ್ರಯ ಮತ್ತು ಸಂಚಾರ ಮಾರ್ಗಗಳ ಮೂಲಕ ನೆರವು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಬಂಧಿತರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ, ಉಗ್ರಗಾಮಿ ಗುಂಪುಗಳಿಗೆ ದುರ್ಗಮ ಪರ್ವತ ಮಾರ್ಗಗಳ ಮೂಲಕ ಕಾಶ್ಮೀರ ಕಣಿವೆಯತ್ತ ತೆರಳಲು ನೆರವಾಗಿದ್ದರು. ನಾಗರಿಕರ ಮೇಲಿನ ಭೀಕರ ದಾಳಿ ಸೇರಿ ಹಲವು ಹೈ-ಪ್ರೊಫೈಲ್ ದಾಳಿಗಳಿಗೆ ಅವರು ಲಾಜಿಸ್ಟಿಕಲ್ ನೆರವು ಒದಗಿಸಿರುವ ಶಂಕೆಯೂ ಇದೆ.
ಆರೋಪಿಗಳಲ್ಲಿ ಓರ್ವ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸುಧಾರಿತ ಸ್ಫೋಟಕ ಸಾಧನ (IED) ವಶಪಡಿಸಿಕೊಂಡಿದ್ದಾರೆ. ಭಯೋತ್ಪಾದಕರು ಸುರಕ್ಷಿತವಾಗಿಡಲು ಹಸ್ತಾಂತರಿಸಿದ್ದರು ಎನ್ನಲಾದ ಐಇಡಿಯನ್ನು ಪ್ರದೇಶದಲ್ಲಿ ಭೀತಿಯನ್ನು ಹರಡಲು ಉದ್ದೇಶಿತ ದಾಳಿಯಲ್ಲಿ ಬಳಸಲು ನಿರ್ಧರಿಸಲಾಗಿತ್ತು.
ಪೂಂಚ್‌ನ ಎಲ್‌ಒಸಿ ಬಳಿ ಪಾಕಿಸ್ತಾನದ ಡ್ರೋನ್ ಪತ್ತೆ; ಜಮ್ಮು-ಕಾಶ್ಮೀರದಲ್ಲಿ ಅಲರ್ಟ್
ಈ ಬಂಧನಗಳು ಗಡಿಯಾಚೆಗಿನ ಭಯೋತ್ಪಾದನಾ ಜಾಲದಲ್ಲಿನ ನಿರ್ಣಾಯಕ ಸಂಪರ್ಕವನ್ನು ಬಹಿರಂಗಪಡಿಸಿದೆ. ವಿಚಾರಣೆಯಲ್ಲಿ ಹೆಚ್ಚಿನ ಸಹಚರರು ಮತ್ತು ಸ್ಲೀಪರ್ ಸೆಲ್‌ಗಳ ವಿವರ ಬಹಿರಂಗಗೊಳ್ಳುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವ್ಯಾಪಕವಾದ ಶೋಧ ನಡೆಯುತ್ತಿದೆ.
ಪಾಕಿಸ್ತಾನದಲ್ಲಿ ಹಾನಿಗೊಳಗಾದ ಸೇನಾ ನೆಲೆ, ಉಗ್ರ ಶಿಬಿರಗಳ ಮರುನಿರ್ಮಾಣ
ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತೀಯ ಸೇನೆ ಮತ್ತು ವಾಯುಪಡೆಯ ದಾಳಿಯಿಂದ ಹಾನಿಗೊಳಗಾದ ಸೇನಾ ನೆಲೆಗಳು ಹಾಗೂ ಉಗ್ರ ಮೂಲಸೌಕರ್ಯಗಳನ್ನು ಪಾಕಿಸ್ತಾನ ತುರ್ತಾಗಿ ಮರುನಿರ್ಮಿಸುತ್ತಿದೆ ಎನ್ನಲಾಗಿದೆ. ಭಾರತೀಯ ಥರ್ಮಲ್ ಇಮೇಜರ್‌ಗಳು, ಫೋಲಿಯೇಜ್-ಪೆನೆಟ್ರೇಟಿಂಗ್ ರಡಾರ್‌ಗಳು ಮತ್ತು ಉಪಗ್ರಹ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು, ನಿಯಂತ್ರಣ ರೇಖೆ (LoC) ಸಮೀಪದ ದಟ್ಟ ಅರಣ್ಯಗಳಲ್ಲಿ ಸಣ್ಣ ಮತ್ತು ಚದುರಿದ ಉಗ್ರ ಶಿಬಿರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲುನಿ, ಪುಟ್ವಾಲ್, ತೈಪು ಪೋಸ್ಟ್, ಜಮೀಲಾ ಪೋಸ್ಟ್, ಉಮ್ರಾನ್‌ವಾಲಿ, ಛಪ್ರಾರ್, ಫಾರ್ವರ್ಡ್ ಕಹುತಾ, ಛೋಟಾ ಚಕ್ ಮತ್ತು ಜಂಗ್ಲೋರಾ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ. ಹಾನಿಗೊಳಗಾದ ನೆಲೆಗಳನ್ನು ಮರು ನಿರ್ಮಿಸಲು ಹಾಗೂ JF-17 ಯುದ್ಧ ವಿಮಾನಗಳು ಮತ್ತು C-130 ಸಾರಿಗೆ ವಿಮಾನಗಳನ್ನು ದುರಸ್ತಿಪಡಿಸಲು ಪಾಕಿಸ್ತಾನ ಕೋಟ್ಯಂತರ ಡಾಲರ್ ಮೌಲ್ಯದ ಟೆಂಡರ್‌ಗಳನ್ನು ಆಹ್ವಾನಿಸಿತ್ತು ಎನ್ನಲಾಗಿದೆ.