ಗಾಂಧಿನಗರ, ಅ. 29: ಪ್ರೇಮ ಸಂಬಂಧದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಖೇರಾಲು ತಾಲೂಕಿನಲ್ಲಿ ನಡೆದಿದೆ (Crime news). ಮೃತ ವ್ಯಕ್ತಿಯನ್ನು ಸಿಧ್ಪುರ ತಾಲೂಕಿನ ವಾಘರೋಲ್ ಗ್ರಾಮದ ನಿವಾಸಿ ರಂಜಿತ್ ಚತುರ್ಜಿ ಠಾಕೂರ್ ಎಂದು ಗುರುತಿಸಲಾಗಿದೆ. ಅವರು ಸಿಧ್ಪುರದ ಚೋಳಮಂಡಲಂ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಕಂಪನಿಯಲ್ಲಿ ಕ್ರೆಡಿಟ್ ಮ್ಯಾನೇಜರ್ ಆಗಿದ್ದರು.
ರಂಜಿತ್ ಎರಡು ವರ್ಷಗಳಿಂದ ತಂಗನಾ ಗ್ರಾಮದ ನಿವಾಸಿ ಜಗಜಿ ರಾಂಚೋಡ್ ಠಾಕೋರ್ ಎಂಬುವವರ ಪುತ್ರಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಂಗಳವಾರ (ಅ. 27) ರಂಜಿತ್ ಬೈಕ್ನಲ್ಲಿ ಕೆಲಸಕ್ಕೆಂದು ಮನೆಯಿಂದ ಹೊರಟು ಪ್ರಿಯತಮೆಯನ್ನು ಭೇಟಿಯಾಗಲು ತಂಗನಾ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಆಕೆಯ ಕುಟುಂಬ ಸದಸ್ಯರು ಅವರನ್ನು ಹಿಡಿದು ಕಟ್ಟಿ ಹಾಕಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಮೃತನ ತಂದೆ ಚತುರ್ಜಿ ಬದ್ಸಂಗ್ಜಿ ಠಾಕೂರ್, ಚಿಕ್ಕಪ್ಪ ಮತ್ತು ಇತರ ಸಂಬಂಧಿಕರು ತಂಗನಾ ಗ್ರಾಮಕ್ಕೆ ಧಾವಿಸಿದರು. ಜಗಜಿ ರಾಂಚೋಡ್ ಅವರ ಮನೆಯನ್ನು ತಲುಪಿದಾಗ ಹುಣಸೆ ಮರದ ಕೆಳಗೆ ಕಬ್ಬಿಣದ ಹಾಸಿಗೆಯ ಮೇಲೆ ರಂಜೀತ್ ದೇಹ ಕಂಬಳಿ ತರಹದ ಚೀಲದಿಂದ ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಯ್ತು. ದೇಹವನ್ನು ಪರೀಕ್ಷಿಸಿದಾಗ ಬೆನ್ನು, ಕುತ್ತಿಗೆ ಮತ್ತು ಮೊಣಕಾಲುಗಳು ಸೇರಿದಂತೆ ವಿವಿಧ ಭಾಗಗಳಲ್ಲಿ ತೀವ್ರ ಗಾಯ ಕಂಡುಬಂದವು.
ತಮಿಳುನಾಡು ಜೈಲಿನಿಂದ ತಪ್ಪಿಸಿಕೊಂಡ 17 ಕೈದಿಗಳಲ್ಲಿ 13 ಮಂದಿ ಮರಳಿ ಸೆರೆಮನೆಗೆ
ಆ ವ್ಯಕ್ತಿಯನ್ನು ಹುಣಸೆ ಮರಕ್ಕೆ ಹಗ್ಗದಿಂದ ಕಟ್ಟಿ, ಕೋಲು ಮತ್ತು ದೊಣ್ಣೆಗಳಿಂದ ನಿರ್ದಯವಾಗಿ ಥಳಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮನೆಯಲ್ಲಿದ್ದ ಮಹಿಳೆಯೊಬ್ಬರು ರಂಜಿತ್ ಪ್ರೇಯಸಿಯನ್ನು ಭೇಟಿಯಾಗಲು ರಾತ್ರಿ ಬಂದಿದ್ದ. ಈ ವೇಳೆ ಆತನನ್ನು ಕಟ್ಟಿ ಹಾಕಲಾಯಿತು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕ್ರೂರವಾಗಿ ಥಳಿಸಿದ ವೇಳೆ ರಂಜಿತ್ ಪ್ರಜ್ಞೆ ಕಳೆದುಕೊಂಡರು. ನಂತರ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು. ಸಾವಿನ ನಂತರ, ಆರೋಪಿಗಳು ಅವರ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಿದರು ಎಂದು ವರದಿಯೊಂದು ತಿಳಿಸಿದೆ.
ದುರಂತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ವಶಕ್ಕೆ ತೆಗೆದುಕೊಂಡು, ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಮೃತ ರಂಜಿತ್ ತಂದೆ ನೀಡಿದ ಔಪಚಾರಿಕ ದೂರಿನ ಆಧಾರದ ಮೇಲೆ ಖೇರಾಳು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.