ಮಧುರೈ ತನಿಷ್ಕ್ ಶೋರೂಂ 15 ಕೋಟಿ ರೂಪಾಯಿ ಮೌಲ್ಯದ ಆಭರಣ ದರೋಡೆ: ಕೈ ಮೇಲಿನ ಟ್ಯಾಟೂ ಸುಳಿವಿನಿಂದ ಸಿಕ್ಕಿಬಿದ್ದ ಯುಟ್ಯೂಬರ್ ನಿಶಾಂತ್
Madurai Tanishq Heist: ತಮಿಳುನಾಡಿನ ಮಧುರೈನಲ್ಲಿ ನಡೆದ ಬೃಹತ್ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಶಾಂತ್, ಆತನ ಪ್ರೇಯಸಿ ಮೀನಾಕ್ಷಿ ಮತ್ತು ನಿಶಾಂತ್‌ನ ತಂದೆಯನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
15 ಕೋಟಿ ಚಿನ್ನ ಕದ್ದ ಯುಟ್ಯೂಬರ್ ನಿಶಾಂತ್, ಪ್ರೇಯಸಿ ಮೀನಾಕ್ಷಿ ಪೊಲೀಸ್ ವಶಕ್ಕೆ -
ಚೆನ್ನೈ, ನ.18: ತಮಿಳುನಾಡಿನ ಮಧುರೈನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬೃಹತ್ ಜ್ಯುವೆಲ್ಲರಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ತನಿಷ್ಕ್ (Tanishq) ಚಿನ್ನದ ಶೋರೂಂನಿಂದ ಸುಮಾರು 15 ಕೋಟಿ ರೂ. ಮೌಲ್ಯದ 11 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ್ದ ಯುಟ್ಯೂಬರ್ ನಿಶಾಂತ್‌ನನ್ನು (Nishanth) ಧರ್ಮಪುರಿಯಲ್ಲಿ ಬಂಧಿಸಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದ ಆತನ ಪ್ರೇಯಸಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೀನಾಕ್ಷಿ ಹಾಗೂ ತಂದೆಯನ್ನೂ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 12ರಂದು ಮಧುರೈ ಬೈಪಾಸ್ ರಸ್ತೆಯಲ್ಲಿರುವ ತನಿಷ್ಕ್ ಚಿನ್ನದ ಶೋ ರೂಮಿನಲ್ಲಿ ಭಾರಿ ದರೋಡೆ ನಡೆದಿತ್ತು. ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಳ್ಳನ ಕೈ ಮೇಲಿದ್ದ ಟ್ಯಾಟೂ ಗುರುತಿನ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಪ್ರಮುಖ ಆರೋಪಿ ಯುಟ್ಯೂಬರ್ ನಿಶಾಂತ್‌ನನ್ನು ಧರ್ಮಪುರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೊ ನೋಡಿ:
#WATCH | Madurai, Tamil Nadu: On the Tanishq Jewellery heist, City Police Commissioner S. Rajendiran says, "Between midnight on November 11 and the early morning of November 12, a grave burglary took place at a Tanishq jewellery showroom. We formed various special teams, conducted an investigation, and arrested three accused. In this case, properties worth Rs 15 crores—weighing about 11.843 kilograms of diamond and gold jewellery—were stolen. The entire stolen property has been recovered. We followed all the available CCTV footage along with other clues. We also interrogated the employees of the shop, who provided some crucial leads, and based on that, we arrested them..."
— ANI (@ANI) November 17, 2026
ಆರೋಪಿ ಸುಳಿವು ನೀಡಿದ ಟ್ಯಾಟೂ
ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡ ರಚಿಸಿದ್ದ ಮಧುರೈ ಪೊಲೀಸರು, ಶೋರೂಂನ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಕಳ್ಳ ಮುಸುಕು ಧರಿಸಿದ್ದರಿಂದ ಮುಖ ಕಾಣಿಸುತ್ತಿರಲಿಲ್ಲ. ಆದರೆ, ಆಭರಣಗಳನ್ನು ಬ್ಯಾಗ್‌ಗೆ ತುಂಬುವಾಗ ಆತನ ಎಡಗೈ ಮೇಲಿದ್ದ ವಿಶೇಷ ಟ್ಯಾಟೂ ಗುರುತು ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಇದೇ ಸುಳಿವಿನ ಬೆನ್ನತ್ತಿದ ಪೊಲೀಸರು, ಸ್ಥಳೀಯ ಟ್ಯಾಟೂ ಸ್ಟುಡಿಯೋಗಳು ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳನ್ನು ಜಾಲಾಡಿದಾಗ ಆರೋಪಿಯು ಯೂಟ್ಯೂಬರ್ ನಿಶಾಂತ್ ಎಂಬುದು ಖಚಿತವಾಯಿತು.
ಆಟೋದಲ್ಲಿ ಕರೆದೊಯ್ದು ಮಾತು ಬಾರದ, ಕಿವಿ ಕೇಳಿಸದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಪ್ರೇಯಸಿ, ತಂದೆ ಬಂಧನ
ನಿಶಾಂತ್‌ನ ಪ್ರೇಯಸಿ, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮೀನಾಕ್ಷಿ ಹಾಗೂ ನಿಶಾಂತ್ ತಂದೆ ಸುರೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕದ್ದ ಚಿನ್ನವನ್ನು ಬಚ್ಚಿಡಲು ಇವರಿಬ್ಬರು ಸಹಾಯ ಮಾಡಿದ್ದರು ಎಂಬುದು ಬಯಲಾಗಿದೆ. ನಿಶಾಂತ್ ಮತ್ತು ಆತನ ತಂದೆ ಸೇರಿ ಮಾಸ್ಕ್ ಹಾಗೂ ಕೈಗ್ಲೌಸ್ ಸುಡುತ್ತಿದ್ದುದನ್ನು ನೋಡಿದ್ದ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಹೇಳಿಕೆಯಿಂದ ತನಿಖೆಗೆ ತಿರುವು ಸಿಕ್ಕಿತ್ತು. ಇದೇ ವೇಳೆ ದರೋಡೆಗಾಗಿ ನಿಶಾಂತ್ ಹೊಸ ಮೊಬೈಲ್ ನಂಬರ್ ಬಳಸಿದ್ದ ಸುಳಿವು ಪೊಲೀಸರಿಗೆ ದೊರೆತಿತ್ತು. ಆ ಸಂಖ್ಯೆಯನ್ನು ಪತ್ತೆಹಚ್ಚಿದಾಗ ಆತನ ಪ್ರೇಯಸಿ, ಮಧುರೈ ಮೂಲದ ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಇನ್‌ಫ್ಲುಯೆನ್ಸರ್ ಮೀನಾಕ್ಷಿ ನಾಚಿಯಾರ್ ಹೆಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ ನಿಶಾಂತ್
ಆರೋಪಿಗಾಗಿ ವಿಶೇಷ ಪೊಲೀಸ್ ತಂಡವು ಹುಡುಕಾಟ ನಡೆಸಿತ್ತು. ಈ ವೇಳೆ ಆರೋಪಿ ನಿಶಾಂತ್ ಬೆಂಗಳೂರು-ಸೇಲಂ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಸುದ್ದಿ ವರದಿಗಳಲ್ಲಿ ಪ್ರಕಟವಾಗಿದ್ದ ಆತನ ಫೋಟೊವನ್ನು ನೋಡಿ ಗುರುತಿಸಿದ ಬಸ್ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಧರ್ಮಪುರಿ ಜಿಲ್ಲೆಯ ಶೇಷಂಪಟ್ಟಿ ಬಳಿ ಬಸ್ ತಡೆದು ಆತನನ್ನು ಬಂಧಿಸಿದ್ದಾರೆ. ಮಂಗಳವಾರ ಮಧುರೈ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಿಶಾಂತ್‌ನನ್ನು ಡಿಸೆಂಬರ್ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟ್ಯೂಷನ್‌ಗೆ ಹೊರಟ 16 ವರ್ಷದ ಪುತ್ರನನ್ನು ಹಾರೆಯಿಂದ ಹೊಡೆದು ಕೊಂದ ಪಾಪಿ
ಇದೀಗ ನಿಶಾಂತ್‌ನ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಮಧುರೈಯ ಮುನಿಯಾಂಡಿಪುರಂನ ಗೋಪಾಲಿಪುರಂ ಪ್ರದೇಶದ ಗುಡ್ಡವೊಂದರಲ್ಲಿ ಅಡಗಿಸಿಟ್ಟಿದ್ದ 6.2 ಕೆಜಿ ತೂಕದ ಚಿನ್ನಾಭರಣಗಳ ಮತ್ತೊಂದು ಕಂತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಮೀನಾಕ್ಷಿಯಿಂದ 5.5 ಕೆಜಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿದೆ.