ಮುಂಬೈ, ಏ. 23: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಧ್ಯಾತ್ಮಿಕ ಚಿಕಿತ್ಸೆಯ ಹೆಸರಿನಲ್ಲಿ 28 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 'ಭೋಂದು ಬಾಬಾ (Bhondu Baba) ಎಂದು ಕರೆಯಲ್ಪಡುವ ಸ್ವಯಂಘೋಷಿತ ದೇವಮಾನವನ ವಿರುದ್ಧ ಪ್ರಕರಣ ದಾಖಲಾಗಿದೆ. ಮಾನಸಿಕ ನೆಮ್ಮದಿ ಅರಸಿ ಬಂದಿದ್ದ ಸಂತ್ರಸ್ತೆಯ ಮೇಲೆ ಈ ಕ್ರೂರ ಕೃತ್ಯ ನಡೆದಿದೆ. ಆರೋಪಿಯನ್ನು ಮಹೇಶ್‌ಗಿರಿ ಬಾಬಾ (Maheshgiri Baba) ಅಲಿಯಾಸ್ ಮಹೇಶ್ ದಿಲೀಪ್ ಕಾಕ್ಡೆ (Mahesh Dilip Kakde) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ರಾಜ್ಯದ ಮಾಟಮಂತ್ರ ವಿರೋಧಿ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸಂತ್ರಸ್ತೆಯನ್ನು ಆಕೆಯ ಪೋಷಕರು ಕುಟುಂಬದ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆಯ ಕಾರಣಕ್ಕಾಗಿ ಈ ದೇವಮಾನವನ ಬಳಿ ಕರೆದೊಯ್ದಿದ್ದರು. ಮಹಿಳೆಗೆ ದೆವ್ವ ಹಿಡಿದಿದೆ ಎಂದು ನಂಬಿಸಿದ ಆರೋಪಿ, ತಾನು ಅದನ್ನು ಗುಣಪಡಿಸುವುದಾಗಿ ಭರವಸೆ ನೀಡಿದ್ದ. ಪ್ರತಿ ಗುರುವಾರ ಪ್ರಾರ್ಥನೆಗೆ ಬರುವಂತೆ ಹೇಳಿ, ನಂತರ ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದ. 2024ರ ಆಗಸ್ಟ್‌ನಲ್ಲಿ ಆಕೆಯನ್ನು ಏಕಾಂತ ಪ್ರದೇಶಕ್ಕೆ ಕರೆದೊಯ್ದು ಲಾಡ್ಜ್‌ವೊಂದರಲ್ಲಿ ಅತ್ಯಾಚಾರವೆಸಗಿದ್ದಾನೆ.
ಮರಿ ಕಳೆದುಕೊಂಡು ದುಃಖದಲ್ಲಿ 3 ತಿಂಗಳ ಹಸುಗೂಸನ್ನು ಒತ್ತೆ ಇರಿಸಿಕೊಂಡ ಮಂಗ!
ಆಕೆ ವಿರೋಧಿಸಿದಾಗ ರುದ್ರಾಕ್ಷಿ ತೋರಿಸಿ ಬೆದರಿಸಿದ ಆರೋಪಿ, "ನನ್ನಲ್ಲಿ ದೈವಿಕ ಶಕ್ತಿಯಿದೆ. ನೀನು ಯಾವುದನ್ನೂ ವಿರೋಧಿಸಲು ಸಾಧ್ಯವಿಲ್ಲ" ಎಂದು ಹೇಳಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಮತ್ತು ತಾನೊಬ್ಬ "ಗೂಂಡಾ" ಎಂದು ಬೆದರಿಕೆ ಹಾಕಿದ್ದ. ಅಲ್ಲದೆ ಆಕೆಯ ಫೋನ್ ಕಿತ್ತುಕೊಂಡು ಸಾಕ್ಷ್ಯಗಳನ್ನು ನಾಶಪಡಿಸಿದ್ದ ಎನ್ನಲಾಗಿದೆ. ಅಂತಿಮವಾಗಿ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಹಾಯದಿಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅಕೋಲಾದಲ್ಲಿ ಮಕ್ಕಳ ಮೇಲಿನ ಕ್ರೌರ್ಯ
ಇದೇ ವೇಳೆ ಮಹಾರಾಷ್ಟ್ರದ ಅಕೋಲಾದಲ್ಲಿ ಚೇತನ್ ಸುನಿಲ್ ಮುಳೆ ಅಲಿಯಾಸ್ ಗುಲಾಲ್ ಶೇಷ್ ಮಹಾರಾಜ್ ಎಂಬ ಮತ್ತೊಬ್ಬ ದೇವಮಾನವನ ವಿರುದ್ಧ ಮಕ್ಕಳ ಮೇಲೆ ಕ್ರೌರ್ಯ ಎಸಗಿದ ಪ್ರಕರಣ ದಾಖಲಾಗಿದೆ. ಚಿಕಿತ್ಸೆಯ ಹೆಸರಿನಲ್ಲಿ ಮಕ್ಕಳನ್ನು ಹಲ್ಲಿನಿಂದ ಎತ್ತುವುದು, ಮೊಳೆಗಳ ಹಾಸಿಗೆಯ ಮೇಲೆ ಕುಳ್ಳಿರಿಸುವುದು ಮತ್ತು ಅಪಾಯಕಾರಿ ಆಚರಣೆಗಳನ್ನು ಮಾಡುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಸುಮಾರು ಹತ್ತು ವರ್ಷಗಳಿಂದ ಇಂತಹ ದರ್ಬಾರ್ ನಡೆಸುತ್ತಿದ್ದ ಈತ, ರೋಗಗಳನ್ನು ಗುಣಪಡಿಸುವುದಾಗಿ ಜನರನ್ನು ನಂಬಿಸುತ್ತಿದ್ದ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ಪ್ರಾಂಜಲಿ ಮನೋಜ್ ಜೈಸ್ವಾಲ್ ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಇದನ್ನು ಕಂಡು ದೂರು ನೀಡಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಮೌಢ್ಯಗಳ ವಿರುದ್ಧ ಪೊಲೀಸರು ಈಗ ಕಠಿಣ ಕಾರ್ಯಾಚರಣೆ ಆರಂಭಿಸಿದ್ದಾರೆ.