ಲಖನೌ: ಪಾಪಿ ತಂದೆಯೊಬ್ಬ ಹೋಮ್ ವರ್ಕ್ (homework) ಮಾಡದಿದ್ದಕ್ಕೆ ಹೆತ್ತ ಮಗಳನ್ನೇ ಕೊಂದಿರುವ ಭೀಕರ ಘಟನೆ ಫರಿದಾಬಾದ್(Faridabad)ನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಆರೋಪಿಯನ್ನು 31 ವರ್ಷದ ಕೃಷ್ಣ ಜೈಸ್ವಾಲ್ (Krishna Jaiswal ) ಎಂದು ಗುರುತಿಸಲಾಗಿದ್ದು, 50ರವರೆಗೆ ಸಂಖ್ಯೆಗಳು ಬರೆಯಲು ವಿಫಲವಾದ ಕಾರಣ ತನ್ನ ನಾಲ್ಕು ವರ್ಷದ ಮಗಳನ್ನು ತಂದೆಯೇ ಕ್ರೂರವಾಗಿ ಥಳಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಖೇರತಿಯಾ ಗ್ರಾಮದದವನಾದ ಕೃಷ್ಣ ಜೈಸ್ವಾಲ್, ಫರಿದಾಬಾದ್‌ನಲ್ಲಿ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಜೈಸ್ವಾಲ್ ಮತ್ತು ಅವರ ಪತ್ನಿ ಇಬ್ಬರೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ದಿನದ ವೇಳೆ ಕೆಲಸಕ್ಕೆ ಹೋಗುತ್ತಿದ್ದರೆ, ಜೈಸ್ವಾಲ್ ಮನೆಲ್ಲೇ ಉಳಿದು ಮಕ್ಕಳನ್ನು ನೋಡಿಕೊಳ್ಳುತ್ತಾ ಮಗಳಿಗೆ ಪಾಠ ಹೇಳಿಕೊಡುತ್ತಿದ್ದ.
ಜನವರಿ 21ರಂದು ಎಂದಿನಂತೆ ತನ್ನ ಮಗಳಿಗೆ ಪಾಠ ಹೇಳಿಕೊಡುತ್ತಿದ್ದ ಜೈಸ್ವಾಲ್, 1 ರಿಂದ 50ರವರೆಗೆ ಸಂಖ್ಯೆಗಳನ್ನು ಬರೆಯಲು ತಿಳಿಸಿದ್ದಾನೆ. ಪುಟ್ಟ ಮಗುವಿಗೆ ಆ ಸಂಖ್ಯೆಗಳನ್ನು ಬರೆಯಲು ಸಾಧ್ಯವಾಗದೇ ಇದ್ದಾಗ ಕೋಪಗೊಂಡ ಜೈಸ್ವಾಲ್, ಕಂದಮ್ಮಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಈ ಹಲ್ಲೆಯಿಂದ ಮಗು ಗಂಭೀರ ಗಾಯಗೊಂಡು ಮೃತಪಟ್ಟಿದೆ," ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ
Physical Assault: ಕ್ಯಾಬ್ ಚಾಲಕನಿಗೆ ಬಾಡಿಗೆ ನೀಡದೆ ಸುಳ್ಳು ಕಿರುಕುಳದ ಆರೋಪ ಹೊರಿಸಿದ ಮಹಿಳೆ!
ಸಂಜೆ ಕೆಲಸದಿಂದ ತಾಯಿ ಮನೆಗೆ ಮರಳಿದಾಗ, ಮಗು ಮನೆಯಲ್ಲೇ ಮೃತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳೀಯ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಆಗಮಿಸಿ, ಮಗುವಿನ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಆರೋಪಿ ಕೃಷ್ಣ ಜೈಸ್ವಾಲ್ ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಫರಿದಾಬಾದ್ ಪೊಲೀಸ್ ಅಧಿಕಾರಿಗಳು, "ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ,” ಎಂದು ತಿಳಿಸಿದ್ದಾರೆ.