ಭೋಪಾಲ್, ಸೆ. 19: ಕೌಟುಂಬಿಕ ಕಲಹವೊಂದು ನಾಲ್ವರ ಹತ್ಯೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ (Crime News). ಮಧ್ಯ ಪ್ರದೇಶದ (Madhya Pradesh) ದಾಮೋಹ್ ಜಿಲ್ಲೆಯ ಕಬೀರ್‌ಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಖೇಮಾ ಪಟೇಲ್ (27), ಅವರ ಪುತ್ರಿ ಊರ್ಮಿಳಾ (7) ಹಾಗೂ ಐದು ಮತ್ತು ಒಂದು ವರ್ಷದ ಪುತ್ರರು ಎಂದು ಗುರುತಿಸಲಾಗಿದೆ. ಅಪರಾಧಿ ದ್ವಾರಕ ಪಟೇಲ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ದಂಪತಿ ನಡುವೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಆರು ತಿಂಗಳ ಹಿಂದೆ, ಅಪರಾಧಿ ವಿರುದ್ಧ ಖೇಮಾ ಮ್ಯಾಗ್ರಾನ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿತ್ತು. ಆದರೆ ಕುಟುಂಬ ಸದಸ್ಯರು ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದರು ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆನಂದ್ ಕಲಾದ್ಗಿ ಹೇಳಿದ್ದಾರೆ.
ಸೆಪ್ಟೆಂಬರ್ 19ರ ಬೆಳಗ್ಗೆ ದ್ವಾರಕ ಪಟೇಲ್ ತನ್ನ ಮನೆಯ ಹೊರಗೆ ಕೊಡಲಿ ಹಿಡಿದು ಕುಳಿತಿದ್ದು, ತನ್ನ ಕುಟುಂಬ ಸದಸ್ಯರನ್ನು ಕೊಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಕೂಡಲೇ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಆತನನ್ನು ಬಂಧಿಸಿದರು ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆನಂದ್ ಕಲಾದ್ಗಿ ತಿಳಿಸಿದ್ದಾರೆ.
ಚಿಕ್ಕಮ್ಮನ ಕೈಯಲ್ಲಿದ್ದ 6 ತಿಂಗಳ ಮಗುವಿನ ಮೇಲೆ ಪಿಟ್‌ಬುಲ್ ಶ್ವಾನದ ದಾಳಿ;
ಘಟನೆ ಹಿನ್ನೆಲೆ
ಶುಕ್ರವಾರ (ಸೆ. 18) ವಾಗ್ವಾದಗಳು ಭುಗಿಲೆದ್ದವು. ಸಂಬಂಧಿಕರು ಮಧ್ಯ ಪ್ರವೇಶಿಸಲು ಪ್ರಯತ್ನಿಸಿ, ಪರಿಸ್ಥಿತಿ ಶಾಂತವಾದ ನಂತರ ಅಲ್ಲಿಂದ ಹೊರಟು ಹೋದರು. ಆದರೆ ಶನಿವಾರ ಮುಂಜಾನೆ, ದ್ವಾರಕ ತನ್ನ ಪತ್ನಿ ಮತ್ತು ಮಕ್ಕಳು ಮಲಗಿದ್ದಾಗ ಅವರನ್ನು ಹತ್ಯೆ ಮಾಡಿದ್ದಾನೆ. ಹತ್ಯೆ ಮಾಡಿದ ನಂತರ ಪರಾರಿಯಾಗುವ ಬದಲು ಮನೆಯ ಹೊರಗೆ ಕೊಡಲಿ ಹಿಡಿದು ಪೊಲೀಸರಿಗಾಗಿ ಕಾಯುತ್ತಾ ಕುಳಿತಿದ್ದ ಎನ್ನಲಾಗಿದೆ.
ಹಿಂದಿನ ದೂರು ಮತ್ತು ಕುಟುಂಬದ ಸಾಕ್ಷ್ಯಗಳನ್ನು ಗಣನೆಗೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.