ಹೈದರಾಬಾದ್, ನ. 1: ಮಹಿಳೆಯೊಬ್ಬಳು ಆನ್‌ಲೈನ್ ಮೂಲಕ ಕಳವು ಮಾಡುವುದು ಹೇಗೆಂದು ಕಲಿತು ರಾತ್ರಿ ವೇಳೆ ಹಲವು ಮನೆಗಳಿಗೆ ಕನ್ನ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಐಷಾರಾಮಿ ಜೀವನದ ಆಮೀಷಕ್ಕೆ ಬಲಿಯಾಗಿ ಆಕೆ ಕಳವು ಮಾಡಿದ್ದು, ಆಭರಣ, ನಗದು ಮತ್ತು ಐಫೋನ್ ವಶಪಡಿಸಿಕೊಳ್ಳಲಾಗಿದೆ (Massive Hyderabad Heist). ಮಹಿಳೆಯ ಈ ಕೃತ್ಯದ ಸುಳಿವೇ ಇರದ ಆಕೆಯ ಪತಿ ಘಟನೆ ಬೆಳಕಿಗೆ ಬಂದು ಬೆಚ್ಚಿಬಿದ್ದಿದ್ದಾನೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ 25 ವರ್ಷದ ಆಕೆ ಉಪ್ಪಾಳ್ ಪೊಲೀಸರ ಅತಿಥಿಯಾಗಿದ್ದಾಳೆ.
ಚಿನ್ನದ ಆಭರಣ, ನಗದು ಮತ್ತು ಐಫೋನ್ 17 ಫೋನ್ ಕದ್ದ ಈ ಮಹಿಳೆ ಪೊಲೀಸರು ಹಣೆದ ಬಲೆಗೆ ಬೀಳುತ್ತಿದ್ದಂತೆ ಬೆಚ್ಚಿ ಬೀಳಿಸುವ ವಿವರ ಹೊರ ಬಿದ್ದಿದೆ. ಬಂಧಿತ ಮಹಿಳೆಯನ್ನು ಉಪ್ಪಾಳ್‌ನ ನವ ಭಾರತ್ ನಗರ ನಿವಾಸಿ ಪಗಾ ಜಯಾ ಎಂದು ಗುರುತಿಸಲಾಗಿದೆ. ಆಕೆಯ ಮೇಲೆ 5 ಕಳವು ಪ್ರಕರಣಗಳಿವೆ. ಆಕೆಯ ಬಳಿಯಿಂದ ಐಫೋನ್ 17, ನಗದು ಸೇರಿ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಗೆ ಕನ್ನ ಹಾಕಲು ಯತ್ನಿಸಿದ ಬುರ್ಖಾಧಾರಿ ಮಹಿಳೆ:
ಘಟನೆ ವಿವರ
ಐಷಾರಾಮಿ ಜೀವನದ ಕನಸು ಕಾಣುತ್ತಿದ್ದ ಜಯಾ ಇದಕ್ಕಾಗಿ ಕಷ್ಟಪಡುವ ಬದಲು ಹಿಡಿದಿದ್ದು ಮಾತ್ರ ಕೆಟ್ಟ ದಾರಿ. ಪತಿಗೆ ತಿಳಿಯದಂತೆ ಆನ್‌ಲೈನ್ ಮೂಲಕ ಬಾಗಿಲು ಒಡೆದು ಮನೆ ಒಳಗೆ ಪ್ರವೇಶಿಸುವುದು ಹೇಗೆ ಎನ್ನುವುದನ್ನು ಅರಿತುಕೊಂಡ ಆಕೆ ರಾತ್ರಿಯಾಗುತ್ತಿದ್ದಂತೆ ಮನೆಯಿಂದ ಹೊರ ಬೀಳುತ್ತಿದ್ದಳು.
ರೀಲ್ಸ್‌ನಲ್ಲಿ ಒಡವೆ ತೋರಿಸಿದ ಬೆನ್ನಲ್ಲೇ ಯುಟ್ಯೂಬರ್ ದಂಪತಿ ಮನೆಗೆ ಕನ್ನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳವು
ಗುರುತು ಮರೆಮಾಚಲು ಬುರ್ಖಾ ಧರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯೊಂದರ ಒಳಗೆ ನುಗ್ಗಲು ಯತ್ನಿಸಿದಾಗ ಆಕೆಯ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಅಂತಿಮವಾಗಿ ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಆಕೆ ಬುರ್ಖಾ, ಗ್ಲೌಸ್ ಧರಿಸಿ, ಮುಖ ಮುಚ್ಚಿ ಓಡಾಡುತ್ತಿರುವುದು ಸೆರೆಯಾಗಿದೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಜಯಾ ಐಷಾರಾಮಿ ಜೀವನ ಶೈಲಿಗಾಗಿ ಕಳವು ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ವರದಿ ಮಾಡಿವೆ. ಪತ್ನಿಯ ಈ ಕೃತ್ಯದ ಸುಳಿವೇ ಇರದ ಪತಿ ಅಚ್ಚರಿಗೊಳಗಾಗಿದ್ದಾನೆ.
ವಿಶೇಷ ಚೇತನನಂತೆ ನಟಿಸಿ ಭಿಕ್ಷಾಟನೆ, ಐಫೋನ್ ಕಳವು: ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ಸಿಕ್ಕಿಬಿದ್ದಿದ್ದು ಹೇಗೆ?
ಗುರುತು ಮರೆಮಾಚಿ ಮನೆಗೆ ಕನ್ನ ಹಾಕುತ್ತಿದ್ದ ಜಯಾ ಅದೃಷ್ಟ ಅದೊಂದು ದಿನ ಕೈಕೊಟ್ಟಿತು. ನವ ಭಾರತ್ ನಗರ ನಿವಾಸಿ ಗಂಗಮ್ ಭಾಸ್ಕರ್ ರೆಡ್ಡಿ ಅಕ್ಟೋಬರ್ 27ರಂದು ಉಪ್ಪಾಳ್ ಪೊಲೀಸ್ ಠಾಣೆ ಮೆಟ್ಟಿಲೇರುವುದರೊಂದಿಗೆ ಘಟನೆಗೆ ತಿರುವು ಸಿಕ್ಕಿತು. ಅಕ್ಟೋಬರ್ 26ರಂದು ಮನೆಗೆ ಬೀಗ ಹಾಕಿ ಎಲ್ಲರೂ ಹೊರ ಹೋಗಿದ್ದಾಗ ಬಾಗಿಲು ಒಡೆದು ಕಳವು ಮಾಡಿದ್ದಾಗಿ ದೂರು ನೀಡಿದ್ದರು. 48 ತೊಲ ಚಿನ್ನದ ಆಭರಣ, 1.5 ಕೆಜಿ ಬೆಳ್ಳಿ ಆಭರಣ ಮತ್ತು 2 ಲಕ್ಷ ರೂಪಾಯಿ ನಾಪತ್ತೆಯಾಗಿದ್ದಾಗಿ ತಿಳಿಸಿದ್ದರು. ಈ ವೇಳೆ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಜಯಾ ಚಲನವಲನ ಗೊತ್ತಾಯಿತು ಎಂದು ಮೂಲಗಳು ತಿಳಿಸಿವೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.