ಬೆಂಗಳೂರು: ಮೆಡಿಕಲ್ ಶಾಪ್ ನಡೆಸ್ತಿದ್ದ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ (Bengaluru) ಮಡಿವಾಳದ ಅಂಡರ್‌ಪಾಸ್ ಸಮೀಪ ನಿನ್ನೆ ರಾತ್ರಿ (Medical Shop Owner Murder) ನಡೆದಿದೆ. ಮಂಗಮ್ಮನ ಪಾಳ್ಯದ ಸುಹೇಲ್ ಮೃತ ವ್ಯಕ್ತಿಯಾಗಿದ್ದು, ರಾತ್ರಿ 10 ಗಂಟೆಗೆ ಮಡಿವಾಳದಿಂದ ಕೊರಮಂಗಲ ಕಡೆ ಹೊರಟಿದ್ದ ಸುಹೇಲ್ನನ್ನು ಮುಖ್ಯ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಬಂಡೆಪಾಳ್ಯದಲ್ಲಿ ನಡೆದಿದ್ದ ಶಬ್ಬೀರ್ ಕೊಲೆ ಕೇಸ್ನಲ್ಲಿ ಸುಹೇಲ್ ಸಹೋದರರಾದ ಖಲೀಂ, ನಜೀರ್, ಇನ್ನೋರ್ವ ಸೋದರ ಭಾಗಿಯಾಗಿದ್ದರು. ಅದೇ ಸೇಡಿನ ಮೇಲೆ ಈ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಸುಹೇಲ್ ಟ್ರಾಫಿಕ್ ಜಾಮ್‌ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ತಲ್ವಾರ್‌ಗಳಿಂದ ಅವರ ಮೇಲೆ ಮುಗಿಬಿದ್ದಿದೆ. ನೂರಾರು ಜನರ ಕಣ್ಣೆದುರೇ ಸುಹೇಲ್ ಅವರನ್ನು ಕೊಚ್ಚಿ ಕೊಲೆ ಮಾಡಿದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಲೆ ನಡೆದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಹೋದರ ನಜೀರ್, “ಸುಹೇಲ್ ನನಗೆ ಕೇವಲ ಅಣ್ಣನಾಗಿರಲಿಲ್ಲ, ಅಪ್ಪನ ಸ್ಥಾನದಲ್ಲಿದ್ದ. ಈ ಕೃತ್ಯ ಎಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಶಪಥ ಮಾಡಿದ್ದಾನೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಶಬ್ಬೀರ್ ಕೊಲೆ ಕೇಸ್ನಲ್ಲಿ ಕೊಲೆಯಾದ ಸುಹೇಲ್ ಸಹೋದರಾದ ಖಲೀಂ, ನಜೀರ್ ಹಾಗೂ ಇನ್ನೋರ್ವ ಸಹೋದರ ಭಾಗಿಯಾಗಿದ್ದರಂತೆ. ಖಲೀಂ ಇನ್ನೂ ಜೈಲಿನಲ್ಲಿಯೇ ಇದ್ದು ಬಿಡುಗಡೆಯಾಗಿಲ್ಲ. ನಜೀರ್ ಒಂದು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಘಟನಾ ಸ್ಥಳಕ್ಕೆ ಜಂಟಿ ಆಯುಕ್ತ ರಮೇಶ್ ಬಾನೂತ್, ಡಿಸಿಪಿ ಮಹಮ್ಮದ್ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಭೇಟಿ ನೀಡಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
ಬಾವಿಯಲ್ಲಿ ದಲಿತ ಯುವತಿ ಶವ ಪತ್ತೆ
ರಾಯಚೂರು ಜಿಲ್ಲೆಯ ಸಿರ್ವಾರ್ ತಾಲ್ಲೂಕಿನ ಹೊಕ್ರಾನಿ ಗ್ರಾಮದ ಬಾವಿಯಲ್ಲಿ ಗುರುವಾರ ದಲಿತ ಯುವತಿಯ ಶವ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಯನ್ನು ಹೊಕ್ರಾನಿ ಗ್ರಾಮದ ಅಶ್ವಿನಿ ತಿಮ್ಮಾರೆಡ್ಡಿ(22) ಎಂದು ಗುರುತಿಸಲಾಗಿದ್ದು, ಆಕೆ ಇತ್ತೀಚೆಗೆ ಪದವಿ ಮುಗಿಸಿದ್ದಳು. ಬುಧವಾರ ಸಂಜೆ ಬಯಲು ಶೌಚಕ್ಕೆ ಹೋಗಿದ್ದ ಯುವತಿ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ, ನಂತರ ಕುಟುಂಬಸ್ಥರು ಆಕೆಯನ್ನು ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಆಕೆಯ ಶವ ಬಾವಿಯಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಬಳಿಕ ಶವವನ್ನು ಬಾವಿಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.