ಶಿಲ್ಲಾಂಗ್: ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್ ಜಿಲ್ಲೆಯ ಥಾಂಗ್ಸ್ಕು ಪ್ರದೇಶದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ(Meghalaya Mine Blast) ಗುರುವಾರ ಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿ ಕನಿಷ್ಠ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಣಿಯೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸ್ ಮಹಾನಿರ್ದೇಶಕ ಐ. ನೊಂಗ್ರಾಂಗ್ ತಿಳಿಸಿದ್ದಾರೆ.
ಸ್ಫೋಟದ ಸಮಯದಲ್ಲಿ ಗಣಿಯೊಳಗೆ ಎಷ್ಟು ಮಂದಿ ಕೆಲಸ ಮಾಡುತ್ತಿದ್ದರು ಎಂಬುದು ಇನ್ನೂ ಖಚಿತವಾಗಿಲ್ಲ. ಇದುವರೆಗೆ 16 ಮೃತದೇಹಗಳನ್ನು ಹೊರತೆಗೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಒಬ್ಬರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸುಟ್ಂಗಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿಲ್ಲಾಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಫೋಟ ಸಂಭವಿಸಿದ ವೇಳೆ ಗಣಿಗಾರಿಕೆ ಕಾರ್ಯ ನಡೆಯುತ್ತಿತ್ತು. ಈ ಗಣಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
''ಅಕ್ರಮ ನುಸುಳುಕೋರರ ಪರ ಕೋರ್ಟ್‌ಗೆ ಹಾಜರಾಗುತ್ತೀರಿ'': ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಮೇಘಾಲಯದಲ್ಲಿ ಅಕ್ರಮ ಗಣಿಗಾರಿಕೆ ಸಮಸ್ಯೆ
ಮೇಘಾಲಯದಲ್ಲಿ ಅಕ್ರಮ ಗಣಿಗಾರಿಕೆ ದೀರ್ಘಕಾಲದಿಂದಲೂ ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ‘ರಾಟ್ ಹೋಲ್ ಮೈನಿಂಗ್’ ಎಂಬ ಅಪಾಯಕಾರಿ ಗಣಿಗಾರಿಕೆ ವಿಧಾನ ಹಲವು ಪ್ರದೇಶಗಳಲ್ಲಿ ನಡೆಯುತ್ತಿರುವುದಾಗಿ ಆರೋಪಗಳು ಕೇಳಿಬರುತ್ತಿವೆ. ಪರಿಸರ ಹಾನಿ ಮತ್ತು ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT) 2014ರಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಿತ್ತು. ನಿಯಂತ್ರಿತ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ಮಾತ್ರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಲಾಗಿತ್ತು.
ಆದರೆ ಕಾನೂನು ಕಟ್ಟುನಿಟ್ಟಾಗಿದ್ದರೂ ಹಲವೆಡೆ ಅಕ್ರಮ ಗಣಿಗಳು ಇನ್ನೂ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬರುತ್ತಿದೆ. ಈಗ ಸ್ಫೋಟಗೊಂಡಿರುವ ಗಣಿ ಸಹ ಅಕ್ರಮವಾಗಿ ನಡೆಯುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸುರಕ್ಷತಾ ನಿಯಮಗಳ ಉಲ್ಲಂಘನೆ
ಗಣಿಗಾರಿಕೆ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮಗಳಿದ್ದರೂ ಅನೇಕ ಕಡೆ ಅವುಗಳನ್ನು ಕಡೆಗಣಿಸಲಾಗುತ್ತಿದೆ. ಇದರಿಂದಲೇ ಇಂತಹ ದುರಂತಗಳು ಮರುಕಳಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ 2021ರಲ್ಲಿ ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಗಣಿ ಸ್ಫೋಟ ಪ್ರಕರಣವೂ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಘಟನೆ ಮತ್ತೆ ಕಾರ್ಮಿಕರ ಸುರಕ್ಷತೆ, ಅಕ್ರಮ ಗಣಿಗಾರಿಕೆಯ ನಿಯಂತ್ರಣ ಮತ್ತು ಕಾನೂನು ಜಾರಿಯ ಪ್ರಶ್ನೆಗಳನ್ನು ಗಂಭೀರವಾಗಿ ಎತ್ತಿ ಇಡಿದಿದೆ.