''ಅಕ್ರಮ ನುಸುಳುಕೋರರ ಪರ ಕೋರ್ಟ್‌ಗೆ ಹಾಜರಾಗುತ್ತೀರಿ'': ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಕ್ರಮ ವಲಸಿಗರನ್ನು ಉತ್ತೇಜಿಸುವ ಮೂಲಕ ರಾಜ್ಯದ ಯುವಜನತೆಯ ಭವಿಷ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಈ ಟೀಕೆ ಮಾಡಿದ್ದಾರೆ.
ನರೇಂದ್ರ ಮೋದಿ - ಮಮತಾ ಬ್ಯಾನರ್ಜಿ -
ನವದೆಹಲಿ, ಫೆ. 6: ಪಶ್ಚಿಮ ಬಂಗಾಳದ (West Bengal) ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (Trinamool Congress) ವಿರುದ್ಧ ಗುರುವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ತೀವ್ರ ವಾಗ್ದಾಳಿ ನಡೆಸಿದ್ದು, "ಅಕ್ರಮ ವಲಸಿಗರನ್ನು ಆಹ್ವಾನಿಸುವ ಮೂಲಕ ರಾಜ್ಯದ ಯುವಜನತೆಯ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ವಿರುದ್ಧ ಹೆಸರನ್ನು ಉಲ್ಲೇಖಿಸದೇ ಮೋದಿ ಈ ಟೀಕೆ ಮಾಡಿದ್ದಾರೆ.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಪ್ರಧಾನಿ ಮೋದಿ, "ವಿಶ್ವದ ಹಲವು ರಾಷ್ಟ್ರಗಳು ಅಕ್ರಮ ವಲಸಿಗರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದರೆ, ಇಲ್ಲಿ ಕೆಲವರು ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದಾರೆ. ನಿಮ್ಮದೇ ಜನರ ಹಕ್ಕುಗಳು ಮತ್ತು ಉದ್ಯೋಗಗಳನ್ನು ಕಸಿದುಕೊಳ್ಳುತ್ತಿರುವ ಅಕ್ರಮ ನುಸುಳುಕೋರರ ಪರವಾಗಿ ನೀವು ಕೋರ್ಟ್‌ಗೆ ಹಾಜರಾಗುತ್ತೀರಿ" ಎಂದು ಕಿಡಿಕಾರಿದರು.
ʼʼಕಾಂಗ್ರೆಸ್, ಟಿಎಂಸಿ ಮತ್ತು ಎಡಪಕ್ಷಗಳು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕೇವಲ ತಮ್ಮ ಖಜಾನೆ ತುಂಬಿಸಿಕೊಂಡಿವೆಯೇ ಹೊರತು ಜನರಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲʼʼ ಎಂದು ಅವರು ಆರೋಪಿಸಿದರು.
ಬ್ಯಾಲೆಟ್ ಪೇಪರ್‌ನಲ್ಲೇ ಗ್ರಾಮ ಪಂಚಾಯಿತಿಗಳ ಚುನಾವಣೆ; ಸಚಿವ ಸಂಪುಟ ಮಹತ್ವದ ನಿರ್ಧಾರ
ಮಮತಾ ಬ್ಯಾನರ್ಜಿ ಅವರ ಸುಪ್ರೀಂ ಕೋರ್ಟ್ ವಾದ
ಬುಧವಾರ (ಫೆಬ್ರವರಿ 4) ಸುಪ್ರೀಂ ಕೋರ್ಟ್‌ನಲ್ಲಿ ಸ್ವತಃ ತಾವೇ ವಾದ ಮಂಡಿಸಿದ ಮೊದಲ ಹಾಲಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಮಮತಾ ಬ್ಯಾನರ್ಜಿ ಪಾತ್ರರಾದರು. ಪಶ್ಚಿಮ ಬಂಗಾಳವನ್ನು ಗುರಿ ಮಾಡಲಾಗುತ್ತಿದೆ ಮತ್ತು ಜನರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅವರು 'SIR' ಪ್ರಕ್ರಿಯೆ ವಿರೋಧವಾಗಿ ವಾದ ಮಂಡಿಸಿದರು.
ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯವು, "ಅರ್ಹ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಬೇಕು," ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಫೆಬ್ರವರಿ 9ರೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗ (ECI) ಮತ್ತು ಪಶ್ಚಿ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಕೋರ್ಟ್ ನೋಟಿಸ್ ನೀಡಿದೆ.
ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಬ್ಯಾನರ್ಜಿ, “ತಾರ್ಕಿಕ ವ್ಯತ್ಯಾಸ” ಇರುವ ಪ್ರಕರಣಗಳಲ್ಲಿ ಇತರೆ ದಾಖಲೆಗಳನ್ನು ನೀಡುವಂತೆ ಒತ್ತಾಯಿಸದೇ, ಆಧಾರ್ ಕಾರ್ಡ್‌ನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಮಮತಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಬಿಜೆಪಿ ಟೀಕೆ
ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಬಿಜೆಪಿ 'ಫ್ಲಾಪ್ ಡ್ರಾಮಾ' ಎಂದು ಕರೆದಿದೆ. ನ್ಯಾಯಾಲಯದಲ್ಲಿ ಅವರು ರಾಜಕೀಯ ಭಾಷಣ ಮಾಡಿದ್ದಾರೆ ಮತ್ತು ತಮ್ಮ ಅಧಿಕಾರದ ದಿನಗಳು ಎಣಿಕೆಯಾಗುತ್ತಿವೆ ಎಂದು ತಿಳಿದು ಇಂತಹ ಹಠಕ್ಕೆ ಬಿದ್ದಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.