Assault Case: ಎಂಇಎಸ್ ಪುಂಡಾಟ, ಕಂಡಕ್ಟರ್ ಬಳಿಕ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಹಲ್ಲೆ
ಬೆಳಗಾವಿ ತಾಲೂಕಿನ ಗೋಜಗಾ ಸಮೀಪ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಅಂಬೇವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ ಪಾಟೀಲ್, ಹಾಲಿ ಅಧ್ಯಕ್ಷರ ಪುತ್ರ ವಿಕ್ರಮ್ ಯಳ್ಳೂರಕರ್ ಅವರ ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗಿದೆ.

ಎಂಇಎಸ್‌ನ ಹಲ್ಲೆ ಆರೋಪಿಗಳು

ಬೆಳಗಾವಿ: ಬೆಳಗಾವಿಯಲ್ಲಿ (Belagavi news) ಎಂಇಎಸ್ (MES) ಪುಂಡರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಅಂಬೇವಾಡಿ ಗ್ರಾಮ ಪಂಚಾಯತ್ (Grama Panchayat) ಕಾರ್ಯದರ್ಶಿ ನಾಗಪ್ಪ ಎಂಬವರ ಮೇಲೆ, ತಾವು ಹೇಳಿದ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಎಂಇಎಸ್ ಪುಂಡರು ದಾಳಿ (Assault Case) ನಡೆಸಿದ್ದಾರೆ. ಇತ್ತೀಚೆಗಷ್ಟೇ ಬೆಳಗಾವಿ ಗಡಿಯಲ್ಲಿ ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ನಡೆಸಿದ ಹಲ್ಲೆ (Crime news) ಪ್ರಕರಣ ವ್ಯಾಪಕ ಪ್ರತಿಭಟನೆ, ಬಸ್ಸು ಸಂಚಾರ ನಿಲುಗಡೆಗೆ ಕಾರಣವಾಗಿತ್ತು.
ಬೆಳಗಾವಿ ತಾಲೂಕಿನ ಗೋಜಗಾ ಸಮೀಪ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಅಂಬೇವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ ಪಾಟೀಲ್, ಹಾಲಿ ಅಧ್ಯಕ್ಷರ ಪುತ್ರ ವಿಕ್ರಮ್ ಯಳ್ಳೂರಕರ್ ಅವರ ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗಿದೆ. ‘ನಾವು ಹೇಳಿದ ಹಾಗೆ ನೀನು ಕೆಲಸ ಮಾಡಬೇಕು. ಇಲ್ಲದಿದ್ದರೆ ಲಂಚ ಪಡೆದಿದ್ದೀಯಾ ಎಂಬುದಾಗಿ ಕೇಸ್ ಹಾಕುತ್ತೇವೆ’ ಎಂದು ಹಲ್ಲೆಕೋರರು ಧಮಕಿ ಹಾಕಿದ್ದಾರೆ. ಚೇತನ್ ಪಾಟೀಲ್, ವಿಕ್ರಮ್ ಯಳ್ಳೂರಕರ್ ಅವರ ಗ್ಯಾಂಗ್ ಮತ್ತು ಎಂಇಎಸ್ ಪುಂಡರು ಜತೆಯಾಗಿ ಹಲ್ಲೆ ಮಾಡಿದ್ದಾರೆ. ಚೇತನ್ ಪಾಟೀಲ್ ಎಂಇಎಸ್ ಜಿಲ್ಲಾ ಸಂಚಾಲಕರೂ ಆಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಈಗ, ತಾವು ಹೇಳಿದಂತೆ ಅಕ್ರಮ ಕೆಲಸ ಮಾಡಿಲ್ಲ ಎಂದು ದಾಳಿ ನಡೆಸಲಾಗಿದೆ ಗಾಯಾಳು ನಾಗಪ್ಪ ಅವರನ್ನು ಸದ್ಯ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ವಿರೋಧ ಮತ್ತು ಆಕ್ರೋಶಕ್ಕೆ ಗುರಿಯಾಗಿತ್ತು. ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಲೈಂಗಿಕ ದೌರ್ಜನ್ಯ ದೂರು ನೀಡಲಾಗಿತ್ತು. ಇದನ್ನು ಪರಿಗಣಿಸಿದ್ದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲಿಸಿದ್ದರು. ಆದರೆ ನಂತರ, ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ದೂರನ್ನು ವಾಪಸ್ ಪಡೆದಿದ್ದರು. ಮರಾಠಿ ಪುಂಡರ ಬಲವಂತದ ಮೇರೆಗೆ ಕಂಡಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂಬ ಆರೋಪ ಕೂಡ ಕೇಳಿಬಂದಿತ್ತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಅದಾದ ಕೆಲವೇ ದಿನಗಳಲ್ಲಿ ಇದೀಗ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮೇಲೆ ಹಲ್ಲೆ ನಡೆದಿದೆ.
ಇದನ್ನೂ ಓದಿ: Koppala News: ರಾಜ್ಯವೇ ತಲೆತಗ್ಗಿಸುವ ಘಟನೆ; ಗಂಗಾವತಿಯಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ