ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Koppala News: ರಾಜ್ಯವೇ ತಲೆತಗ್ಗಿಸುವ ಘಟನೆ; ಗಂಗಾವತಿಯಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ, ಹಲ್ಲೆ

ಗಂಗಾವತಿಯಲ್ಲಿ ಇಡೀ ರಾಜ್ಯವೇ ನಾಚಿಕೆಯಿಂದ ತಲೆತಗ್ಗಿಸುವಂತ ಘಟನೆಯೊಂದು ಮಾ. 6ರ ರಾತ್ರಿ ನಡೆದಿದೆ. ಪ್ರವಾಸ ಬಂದಿದ್ದ ವಿದೇಶಿಗರೂ ಸೇರಿ ಐವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಸದ್ಯ ತಲೆಮರೆಸಿಕೊಂಡಿರುವ ದುಷ್ಕರ್ಮಿಗಳಿಗಾಗಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಗಂಗಾವತಿಯಲ್ಲಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ

ಸಾಣಾಪುರ ಗ್ರಾಮದ ಎಡದಂಡೆ ಕಾಲುವೆ ಬಳಿ ಪರಿಶೀಲನೆ ನಡೆಸಿದ ಪೊಲೀಸರು.

Profile Ramesh B Mar 7, 2025 8:28 PM

ಕೊಪ್ಪಳ: ರಾಜ್ಯದ ಮಿನಿ ಗೋವಾ ಎಂದೇ ಕರೆಯಲ್ಪಡುವ, ಪ್ರವಾಸಿಗರ ನೆಚ್ಚಿನ ಗಂಗಾವತಿಯಲ್ಲಿ ಇಡೀ ರಾಜ್ಯವೇ ನಾಚಿಕೆಯಿಂದ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ (Koppala News). ಪ್ರವಾಸ ಬಂದಿದ್ದ ವಿದೇಶಿಗರೂ ಸೇರಿ ಐವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಸಾಣಾಪುರ ಗ್ರಾಮದ ಎಡದಂಡೆ ಕಾಲುವೆ ಬಳಿ ಮಾ. 6ರಂದು ಘಟನೆ ನಡೆದಿದ್ದು, ಪ್ರವಾಸಿಗರೊಬ್ಬರು ನಾಪತ್ತೆಯಾಗಿದ್ದಾರೆ (Crime news). ಸದ್ಯ ತಲೆಮರೆಸಿಕೊಂಡಿರುವ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಹರಿದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆಗೆ ರಾತ್ರಿ 11:30ರ ವೇಳೆಗೆ ವಾಯುವಿಹಾರಕ್ಕೆ ಆಗಮಿಸಿದ ಪ್ರವಾಸಿಗರಾದ ಇಸ್ರೇಲ್‌ನ ಮಹಿಳೆ, ಅಮೆರಿಕದ ಡ್ಯಾನಿಯಲ್‌, ಮಹಾರಾಷ್ಟ್ರದ ಪಂಕಜ್‌, ಒಡಿಶಾದ ಬಿಬಾಸ್‌ ಮತ್ತು ರೆಸಾರ್ಟ್‌ ಮಾಲಕಿ ನಕ್ಷತ್ರ ನೋಡುತ್ತ, ಗಿಟಾರ್‌ ಬಾರಿಸುತ್ತ ಸಮಯ ಕಳೆಯುತ್ತಿದ್ದರು.



ಈ ವೇಳೆ ಬೈಕ್ ಮೇಲೆ ಬಂದಿದ್ದ ಮೂವರು, ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಸ್ವಲ್ಪ ಹಣ ಕೊಡಿ ಅಂತ ಕೇಳಿದ್ದರು. ಆಗ ಪ್ರವಾಸಿಗರು ಅಯ್ಯೋ ಪಾಪ ಎಂದುಕೊಂಡು 20 ರೂ. ನೀಡಿದ್ದರು. ಇಷ್ಟಕ್ಕೆ ತೃಪ್ತರಾಗದ ಮೂವರು 100 ರೂ. ನೀಡುವಂತೆ ಪಟ್ಟು ಹಿಡಿದಿದ್ದರು. ಜತೆಗೆ ಬ್ಯಾಗ್‌ ಕಸಿಯಲು ಮುಂದಾಗಿದ್ದರು. ಹೀಗೆ ಪ್ರವಾಸಿಗರು ಮತ್ತು ಅಪರಿಚಿತರ ನಡುವೆ ಘರ್ಷಣೆ ಆರಂಭವಾಗಿತ್ತು.

ಈ ಸುದ್ದಿಯನ್ನೂ ಓದಿ: Robbery Case: ಹಾವೇರಿ: ಶಾಸಕರ ಮನೆ ಎದುರೇ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ಕಳವು

ಬಳಿಕ ಡ್ಯಾನಿಯಲ್‌, ಪಂಕಜ್‌ ಮತ್ತು ಬಿಬಾಸ್‌ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕಾಲುವೆಗೆ ದೂಡಿದ್ದರು. ನಂತರ ಇಸ್ರೇಲ್‌ನ ಮಹಿಳೆ, ಹೋಮ್ ಸ್ಟೇ ಮಾಲಕಿ​​ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಡ್ಯಾನಿಯಲ್‌, ಪಂಕಜ್‌ ಈಜಿ ದಡ ಸೇರಿದ್ದರು. ಆದರೆ ಬಿಬಾಸ್‌ ನಾಪತ್ತೆಯಾಗಿದ್ದಾರೆ. ಕೊನೆಗೆ ಇವರೆಲ್ಲ ಗಂಗಾವತಿ ಗ್ರಾಮೀಣ ಠಾಣೆಗೆ ತೆರಳಿ ತಮ್ಮ ಮೇಲಾಗಿರುವ ದೌರ್ಜನ್ಯವನ್ನು ತಿಳಿಸಿದ್ದಾರೆ.

ಮಾಹಿತಿ ತಿಳಿದ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ರಾತ್ರಿಯೇ ಅಗ್ನಿಶಾಮಕ ಸಿಬ್ಬಂದಿ ಜತೆ ನಾಪತ್ತೆಯಾಗಿರುವ ಒಡಿಶಾ ಮೂಲದ ಬಿಬಾಸ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಶುಕ್ರವಾರ ಬೆಳಗ್ಗೆ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್, ಕೊಪ್ಪಳ ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಸ್ಥಳಕ್ಕೆ ಬೇಟಿ ನೀಡಿದ್ದಾರೆ.

ಪೊಲೀಸರಿಂದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ

ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ಹುಡುಕಾಟವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಅದಕ್ಕಾಗಿ 6 ತಂಡಗಳನ್ನು ರಚಿಸಲಾಗಿದ್ದು, ಸಂಶಯ ಬಂದ ಕಡೆಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ಶಾಕ್‌ಗೆ ಒಳಗಾಗಿದ್ದು, ಆರೋಪಿಗಳ ಪತ್ತೆಗೆ ಎಲ್ಲ ರೀತಿಯಿಂದಲೂ ನೆರವು ನೀಡುವುದಾಗಿ ತಿಳಿಸಿದ್ದಾರೆ. ರಾತ್ರಿ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯದಂತೆ ಪೊಲೀಸರು ರೆಸಾರ್ಟ್‌ ಮಾಲಕರಲ್ಲಿ ಮನವಿ ಮಾಡಿದ್ದಾರೆ.