ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೀತಿಸಿ ಮದುವೆಯಾಗಿ 9 ತಿಂಗಳಿಗೆ ಪತ್ನಿ ಮೇಲೆ ಪೆಟ್ರೋಲ್‌ ಸುರಿದು ಕೊಂದ ಪಾಪಿ ಪತಿ

ಪ್ರೀತಿಸಿ ಮದುವೆಯಾಗಿ ಕೇವಲ ಒಂಬತ್ತು ತಿಂಗಳುಗಳಲ್ಲಿ ಪತ್ನಿಯನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಪತಿಯೇ ದಹಿಸಿರುವ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ವಿಚ್ಛೇದನದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ಒಂದೇ ಕಾರಣಕ್ಕೆ ಈ ಭೀಕರ ಕೃತ್ಯ ಎಸಗಲಾಗಿದೆ.

ಸಂಗ್ರಹ ಚಿತ್ರ

ಪಟನಾ: ಪ್ರೀತಿಸಿ ಮದುವೆಯಾಗಿ ಕೇವಲ ಒಂಬತ್ತು ತಿಂಗಳುಗಳಲ್ಲಿ ಪತ್ನಿಯನ್ನು ಪೆಟ್ರೋಲ್ ಸುರಿದು ಜೀವಂತವಾಗಿ ಪತಿಯೇ ದಹಿಸಿರುವ (Murder Case) ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ವಿಚ್ಛೇದನದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ ಒಂದೇ ಕಾರಣಕ್ಕೆ ಈ ಭೀಕರ ಕೃತ್ಯ ಎಸಗಲಾಗಿದೆ. ಮುಜಾಫರ್‌ಪುರ ಜಿಲ್ಲೆಯ ಬೋಚಹಾನ್ ನಿವಾಸಿಯಾದ ದಾಮಿನಿ ಕುಮಾರಿ (21) ಮತ್ತು ಸುಪೌಲ್ ಜಿಲ್ಲೆಯ ಭಪ್ತಿಯಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜೀವ್ ಸಾಹ್ (23) ಇಬ್ಬರಿಗೂ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು.

ಪರಿಚಯ ಪ್ರೇಮಕ್ಕೆ ತಿರುಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಇಬ್ಬರ ಮನೆಯಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದಾಗ್ಯೂ, ಮನೆಯವರ ವಿರೋಧವನ್ನು ಲೆಕ್ಕಿಸದೆ ಕಳೆದ ಜನವರಿ ತಿಂಗಳಲ್ಲಿ ಇವರಿಬ್ಬರೂ ಮುಜಾಫರ್‌ಪುರದ ನ್ಯಾಯಾಲಯದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯಾದ ಕೇವಲ ಎರಡೇ ತಿಂಗಳುಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮತ್ತು ಜಗಳಗಳು ಆರಂಭವಾಗಿದ್ದವು.

ಕಲಹ ತಾರಕಕ್ಕೇರಿದಾಗ ಸಂಜೀವ್ ಸಾಹ್ ತನ್ನ ಪತ್ನಿಯಿಂದ ದೂರವಾಗಲು ನಿರ್ಧರಿಸಿ ಮುಜಾಫರ್‌ಪುರ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಆದರೆ, ದಾಮಿನಿ ಕುಮಾರಿ ಮಾತ್ರ ತಾನು ಯಾವುದೇ ಕಾರಣಕ್ಕೂ ವಿಚ್ಛೇದನ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಇದು ಸಂಜೀವ್‌ನ ಆಕ್ರೋಶಕ್ಕೆ ಕಾರಣವಾಗಿತ್ತು. ವಿಚ್ಛೇದನಕ್ಕೆ ಒಪ್ಪದ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ.

ಶನಿವಾರ ವಿಚ್ಛೇದನದ ಪತ್ರಗಳಿಗೆ ಸಹಿ ಹಾಕುವ ವಿಚಾರವಾಗಿ ಮಾತನಾಡಲು ದಾಮಿನಿಯನ್ನು ಸುಪೌಲ್‌ಗೆ ಬರುವಂತೆ ಕರೆಸಿಕೊಂಡಿದ್ದನು. ಪತಿಯ ಮಾತನ್ನು ನಂಬಿ ದಾಮಿನಿ ಸುಪೌಲ್‌ಗೆ ಬಂದಿದ್ದಾಳೆ. ಅಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಸಂಜೀವ್ ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಭಪ್ತಿಯಾಹಿ ಪ್ರದೇಶದ ನಿರ್ಜನ ರಸ್ತೆಯೊಂದಕ್ಕೆ ಕರೆದೊಯ್ದಿದ್ದಾನೆ. ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಇಬ್ಬರ ನಡುವೆ ಮತ್ತೆ ವಿಚ್ಛೇದನದ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ದಾಮಿನಿ ಸಹಿ ಮಾಡಲು ನಿರಾಕರಿಸಿದಾಗ, ಕೋಪೋದ್ರಿಕ್ತನಾದ ಸಂಜೀವ್ ತನ್ನ ಬೈಕ್‌ನಿಂದ ಪೆಟ್ರೋಲ್ ಅನ್ನು ಬಾಟಲಿಗೆ ತೆಗೆದು, ಆಕೆಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ರಸ್ತೆಯಲ್ಲಿ ಯುವತಿ ಬೆಂಕಿಯ ಜ್ವಾಲೆಯೊಂದಿಗೆ ಕಿರುಚುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಆಕೆಯನ್ನು ಸುಪೌಲ್‌ನ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು. ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದರ್ಭಾಂಗ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ದಾಮಿನಿ ಕೊನೆಯುಸಿರೆಳೆದಿದ್ದಾಳೆ. ಸಾವನ್ನಪ್ಪುವ ಮುನ್ನ ಮ್ಯಾಜಿಸ್ಟ್ರೇಟ್ ಎದುರು ಆಕೆ ನೀಡಿದ ಮರಣದಂಡನೆ ಹೇಳಿಕೆಯಲ್ಲಿ ತನ್ನ ಪತಿ ಸಂಜೀವ್ ತನಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನ್ನು ವಿವರಿಸಿದ್ದಾಳೆ.

ಜನದಟ್ಟಣೆಯ ರಸ್ತೆಯಲ್ಲೇ ಬೈಕ್ ಸವಾರನನ್ನು ಬೆನ್ನಟ್ಟಿ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತಲೆಮರಿಸಿಕೊಂಡಿದ್ದ ಆರೋಪಿ ಸಂಜೀವ್ ಸಾಹ್ ಪೊಲೀಸರ ಬಿಗಿ ಕಾವಲಿಗೆ ಹೆದರಿ ಭಪ್ತಿಯಾಹಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಆತ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕೊಲೆಗೆ ಸಂಜೀವ್‌ನ ಕುಟುಂಬಸ್ಥರೂ ಪ್ರೇರೇಪಣೆ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸಂಜೀವ್ ತಂದೆಯನ್ನೂ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Vishakha Bhat Heggar

View all posts by this author