ಮುಂಬೈ: ಮುಂಬೈ (Mumbai)ನ ವಿಶೇಷ ನ್ಯಾಯಾಲಯವೊಂದು ಒಂಬತ್ತು ವರ್ಷಗಳ ಹಿಂದೆ 16 ವರ್ಷದ ಬಾಲಕಿಗೆ ಬೆನ್ನುಹತ್ತಿ ಕಿರುಕುಳ ನೀಡಿದ ಮತ್ತು ಲೈಂಗಿಕ ದೌರ್ಜನ್ಯ (sexually harassing) ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 3,000 ರೂಪಾಯಿ ದಂಡ ವಿಧಿಸಿದೆ. ಪ್ರಸ್ತುತ ವಿವಾಹಿತನಾಗಿರುವ ಮತ್ತು ಮೂರು ತಿಂಗಳ ಮಗುವಿನ ತಂದೆಯಾಗಿರುವ ಈ ಆರೋಪಿ, 2017ರಲ್ಲಿ ನಡೆಸಿದ ಕೃತ್ಯಗಳಿಗಾಗಿ ಈಗ ಶಿಕ್ಷೆ ಅನುಭವಿಸುವಂತಾಗಿದೆ.
ಏನಿದು ಪ್ರಕರಣ?
ವರದಿಗಳ ಪ್ರಕಾರ, ಜನವರಿ 2017ರಲ್ಲಿ ಮುಂಬೈನ ನೆರೆಹೊರೆಯಲ್ಲಿ ಸ್ಥಳೀಯ 'ಹಳದಿ ಕುಂಕುಮ' ಕಾರ್ಯಕ್ರಮದ ವೇಳೆ ಆಗ 19 ವರ್ಷದವನಾಗಿದ್ದ ಆರೋಪಿ ಬಾಲಕಿಗೆ 'ಫ್ಲೈಯಿಂಗ್ ಕಿಸ್' ನೀಡಿದ್ದನು. ಈ ಬಗ್ಗೆ ನೆರೆಯವರು ಮಾಹಿತಿ ನೀಡಿದಾಗ, ಬಾಲಕಿಯು ತನಗಾದ ಹಿಂದಿನ ಕಿರುಕುಳವನ್ನೂ ಪೋಷಕರಿಗೆ ವಿವರಿಸಿದ್ದಳು. ಆತ ಒಮ್ಮೆ ಟ್ಯೂಷನ್ ತರಗತಿಗೆ ಹೋಗುತ್ತಿದ್ದಾಗ ಆಕೆಯ ಕೈ ಹಿಡಿದು ಎಳೆದಾಡಿದ್ದನು. ಈ ವಿಷಯದ ಬಗ್ಗೆ ಮಾತನಾಡಲು ಬಾಲಕಿಯ ತಂದೆ ಆರೋಪಿ ಮತ್ತು ಆತನ ತಾಯಿಯನ್ನು ಮನೆಗೆ ಕರೆಸಿದಾಗ, ಅವರು ಬಾಲಕಿಯ ಕುಟುಂಬದವರ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಸಂಬಂಧ ಎಫ್‌ಐಆರ್ (FIR) ದಾಖಲಾಗಿತ್ತು.
ಕೋರ್ಟ್ ಹೇಳಿದ್ದೇನು?
ವಿಚಾರಣೆ ವೇಳೆ ಆರೋಪಿ ಪರ ವಕೀಲರು, "ನೃತ್ಯ ಮಾಡುವಾಗ ಆತ ಅಚಾನಕ್ ಆಗಿ ಆ ಸನ್ನೆಯನ್ನು ಮಾಡಿರಬಹುದು" ಎಂದು ವಾದಿಸಿದ್ದರು. ಆದರೆ ನ್ಯಾಯಾಧೀಶರು ಇದನ್ನು ತಳ್ಳಿಹಾಕಿದರು. "ಫ್ಲೈಯಿಂಗ್ ಕಿಸ್ ನೀಡುವುದು ಲೈಂಗಿಕ ಸೂಚನೆಯ ಸಂಕೇತವಾಗಿದೆ. ಇದು ಬಾಲಕಿಯ ಘನತೆಯನ್ನು ಉಲ್ಲಂಘಿಸುವುದಲ್ಲದೆ, ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
Physical Abuse: ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್
ನೆರೆಯವರೊಂದಿಗಿನ ಹಳೆಯ ದ್ವೇಷಕ್ಕಾಗಿ ಸುಳ್ಳು ಕೇಸ್ ಹಾಕಲಾಗಿದೆ ಎಂಬ ಆರೋಪಿಯ ವಾದವನ್ನೂ ನ್ಯಾಯಾಲಯ ಒಪ್ಪಲಿಲ್ಲ. ಪೋಷಕರು ಕೇವಲ ನೆರೆಯವರಿಗಾಗಿ ಮಗಳ ಮಾನವನ್ನು ಪಣಕ್ಕಿಡುವುದಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಸದ್ಯ 9 ವರ್ಷಗಳ ಹಿಂದೆ ಮಾಡಿದ ತಪ್ಪಿಗೆ ಆರೋಪಿಗೆ ಇಂದು ಶಿಕ್ಷೆ ಆಗಿದ್ದು, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬ ಗಾದೆಗೆ ಈ ಘಟನೆ ಜೀವಂತ ನಿದರ್ಶನವಾಗಿದೆ.