ಲಖನೌ, ಫೆ. 24: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ (Gorakhpur) ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗಾಲ್ಯಾಂಡ್ ಮೂಲದ ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ವಿಭಾಗದ ಮೂರನೇ ವರ್ಷದ ರೆಸಿಡೆಂಟ್ ವೈದ್ಯೆಯ ಮೇಲೆ ನಡೆದ ಜನಾಂಗೀಯ ನಿಂದನೆ (Racial harassment) ಮಾಡಲಾಗಿದೆ. ಜತೆಗೆ ಲೈಂಗಿಕ ದೌರ್ಜನ್ಯದ (Sexual Assault) ಎಸಗಲಾಗಿದ್ದು, ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಈಶಾನ್ಯ ಭಾರತದ ಜನರ ವಿರುದ್ಧದ ತಾರತಮ್ಯದ ಬಗ್ಗೆ ಗಂಭೀರ ಕಳವಳವನ್ನು ಮೂಡಿಸಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಫೆಬ್ರವರಿ 22ರ ರಾತ್ರಿ ಸುಮಾರು 8 ಗಂಟೆಗೆ ಈ ಘಟನೆ ನಡೆದಿದೆ. ವೈದ್ಯೆಯು ಓರಿಯನ್ ಮಾಲ್‌ನಿಂದ ಕ್ಯಾಂಪಸ್‌ಗೆ ಹಿಂತಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಕೆಯನ್ನು ಸುಮಾರು 1.5 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದ್ದಾರೆ. ನಂತರ ಇನ್‌ಸ್ಟಿಟ್ಯೂಟ್‌ನ ಗೇಟ್ ನಂ. 2ರ ಸಮೀಪವಿರುವ ಆರ್ಮಿ ಕ್ಯಾಂಪ್ ಬಳಿ ಆಕೆಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿಗಳು ಆಕೆಯ ಈಶಾನ್ಯ ಭಾರತದ ಮೂಲವನ್ನು ಗುರಿಯಾಗಿಸಿಕೊಂಡು ಅವಾಚ್ಯ ಜನಾಂಗೀಯ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಓರ್ವ ವ್ಯಕ್ತಿ ತನ್ನ ಶರ್ಟ್ ಬಿಚ್ಚಿ ಬೆದರಿಕೆ ಹಾಕಿದ್ದು, ಮತ್ತೊಬ್ಬ ವ್ಯಕ್ತಿ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವೈದ್ಯೆ ಕಿರುಚಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
ಕಾನೂನು ಕ್ರಮ
ಗೊರಖ್‌ಪುರ ಎಸ್‌ಎಸ್‌ಪಿ ಕೌಸ್ತುಭ್ ಈ ಬಗ್ಗೆ ಏಮ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಖಚಿತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳು ಬಳಸಿದ ಬೈಕನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಬಂಧಿಸಲು ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಭರವಸೆ ನೀಡಿದ್ದಾರೆ.
ವ್ಯಾಪಕ ಖಂಡನೆ
ನಾಗಾಲ್ಯಾಂಡ್ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, "ಇದು ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಈಶಾನ್ಯ ಭಾರತದ ಮಹಿಳೆಯರ ಮೇಲಿನ ಜನಾಂಗೀಯ ತಾರತಮ್ಯ ಮತ್ತು ದೌರ್ಜನ್ಯವನ್ನು ಕೇವಲ ಸುದ್ದಿಯಾಗಿ ನೋಡಬಾರದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ. ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಫೆಡರೇಶನ್ (NAFORD) ಸಹ ಈ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದು, ಮಹಿಳೆಯರ ಜೀವ ಉಳಿಸುವ ವೈದ್ಯೆಯೇ ತನ್ನ ಸಂಸ್ಥೆಯ ಬಳಿಯೇ ಇಂತಹ ಘೋರ ದೌರ್ಜನ್ಯಕ್ಕೆ ಒಳಗಾಗಿರುವುದು ಆಘಾತಕಾರಿ ಎಂದು ಹೇಳಿದೆ.