ದೆಹಲಿ: ದೆಹಲಿ (Delhi)ಯ ಮಾಳವೀಯ ನಗರ (Malviya Nagar)ದಲ್ಲಿ ವಾಸವಿರುವ ಅರುಣಾಚಲ ಪ್ರದೇಶ (Arunachal Pradesh)ದ ಮೂವರು ಮಹಿಳೆಯರ ಮೇಲೆ ಅವರ ನೆರೆಹೊರೆಯವರು ಜನಾಂಗೀಯ ನಿಂದನೆ ಮತ್ತು ಲೈಂಗಿಕ ಅಧಿಕ್ಷೇಪ ಮಾಡಿದ ಘಟನೆ ವರದಿಯಾಗಿದೆ. ಯುಪಿಎಸ್‌ಸಿ (UPSC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿನಿ ಮತ್ತು ಆಕೆಯ ಗೆಳತಿಯರು ಈ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
ಫೆಬ್ರವರಿ 20 ರಂದು ಸಂಜೆ 3.30 ರ ಸುಮಾರಿಗೆ, ಯುವತಿಯರು ತಮ್ಮ ನಾಲ್ಕನೇ ಮಹಡಿಯ ಫ್ಲಾಟ್‌ನಲ್ಲಿ ಏರ್ ಕಂಡಿಷನರ್ (AC) ಅಳವಡಿಸಲು ಎಲೆಕ್ಟ್ರಿಷಿಯನ್ ಒಬ್ಬರನ್ನು ಕರೆಸಿದ್ದರು. ಗೋಡೆಗೆ ರಂಧ್ರ ಕೊರೆಯುವಾಗ ಸ್ವಲ್ಪ ಧೂಳು ಮತ್ತು ಕಲ್ಲುಗಳು ಕೆಳಗಿನ ಮಹಡಿಯ ಬಾಲ್ಕನಿಗೆ ಬಿದ್ದದೆ. ಈ ಸಣ್ಣ ಕಾರಣಕ್ಕಾಗಿ ಮೊದಲ ಮಹಡಿಯಲ್ಲಿ ವಾಸವಿದ್ದ ಹರ್ಷ್ ಸಿಂಗ್ ಮತ್ತು ಆತನ ಪತ್ನಿ ರೂಬಿ ಜೈನ್ ಜಗಳ ತೆಗೆದೊದ್ದಾರೆ. ಸಂತ್ರಸ್ತ ಯುವತಿಯರು ತಕ್ಷಣವೇ ಕ್ಷಮೆಯಾಚಿಸಿದರೂ, ದಂಪತಿಯು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾರೆ.
ಜನಾಂಗೀಯ ಮತ್ತು ಲೈಂಗಿಕ ನಿಂದನೆ:
ಕೇವಲ ಧೂಳಿನ ವಿಚಾರಕ್ಕೆ ಶುರುವಾದ ಜಗಳ, ತಕ್ಷಣವೇ ಜನಾಂಗೀಯ ನಿಂದನೆಗೆ ತಿರುಗಿತು. "ಈಶಾನ್ಯ ಭಾರತದವರು ಅನಕ್ಷರಸ್ಥರು" ಎಂದು ದಂಪತಿಗಳು ಕಿರುಚಾಡಲು ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರೂಬಿ ಜೈನ್ ಅವರು ಯುವತಿಯರನ್ನುದ್ದೇಶಿಸಿ, "ನೀವು 500 ರೂಪಾಯಿಗೆ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುವವರು (ಧಂದೇಬಾಜಿ ಮಾಡುವವರು)" ಎಂದು ಅವಹೇಳನ ಮಾಡಿದ್ದಾರೆ. ಅಷ್ಟೇ ಅಲ್ಲದೆ, "ನನ್ನ ಪತಿಯೊಂದಿಗೆ ಮಲಗಿ ನೋಡು, ಆಗ ಅವನ ಶಕ್ತಿ ನಿನಗೆ ತಿಳಿಯುತ್ತದೆ" ಎಂಬ ಅತ್ಯಂತ ಕೀಳುಮಟ್ಟದ ಲೈಂಗಿಕ ಕಾಮೆಂಟ್ ಮಾಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
Snehamayi Krishna: ಸ್ನೇಹಮಯಿ ಕೃಷ್ಣ ಮೇಲೆ ಮತ್ತೊಬ್ಬ ಮಹಿಳೆ ದೂರು
ಕಾನೂನು ಕ್ರಮ:
ಈ ಘಟನೆಯ ನಂತರ ದೆಹಲಿ ಪೊಲೀಸರು ಹರ್ಷ್ ಸಿಂಗ್ ಮತ್ತು ರೂಬಿ ಜೈನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ತರುವ ಸೆಕ್ಷನ್ 79, ಕ್ರಿಮಿನಲ್ ಬೆದರಿಕೆಯ ಸೆಕ್ಷನ್ 351(2) ಮತ್ತು ಜನಾಂಗೀಯ ದ್ವೇಷ ಹರಡುವಿಕೆಯ ಸೆಕ್ಷನ್ 196 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 196 ಜಾಮೀನು ರಹಿತ ಅಪರಾಧವಾಗಿದ್ದರೂ, ಪೊಲೀಸರು ಈವರೆಗೆ ಯಾರನ್ನೂ ಬಂಧಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಈ ಘಟನೆಯನ್ನು ಖಂಡಿಸಿದ್ದು, ಈಶಾನ್ಯ ಜನರ ಮೇಲಿನ ತಾರತಮ್ಯ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ. ಸಂತ್ರಸ್ತ ಮಹಿಳೆಯರು ತಮಗೆ ನ್ಯಾಯ ಬೇಕು ಮತ್ತು ಇಡೀ ಸಮುದಾಯಕ್ಕೆ ಅವಮಾನ ಮಾಡಿದ ದಂಪತಿಯು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.