ಅಮರಾವತಿ, ಅ. 7: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆಗಳು ಹೂಡಿದ್ದ ಕುತಂತ್ರದ ಹನಿಟ್ರ್ಯಾಪ್ ಬಲೆಗೆ ಬಿದ್ದು ದೇಶದ ಸೂಕ್ಷ್ಮ ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪದಡಿ ಭಾರತೀಯ ನೌಕಾಪಡೆಯ 13 ಸಿಬ್ಬಂದಿಯನ್ನು ಆಂಧ್ರ ಪ್ರದೇಶ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಸೆಲ್ (CIC) ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ. ನೌಕಾಪಡೆಯ ಈ ಸಿಬ್ಬಂದಿ ಸೇರಿ ಒಟ್ಟು 18 ಶಂಕಿತರನ್ನು ಗುರುತಿಸಲಾಗಿದ್ದು, ಅಕ್ಟೋಬರ್ 1ರಂದು ನಡೆಸಲಾದ ದೇಶವ್ಯಾಪಿ ಜಂಟಿ ಕಾರ್ಯಾಚರಣೆಗೆ ಆಪರೇಷನ್ ಫೈರ್‌ವಾಲ್–2026 (Operation Firewall–2026) ಎಂದು ಹೆಸರಿಡಲಾಗಿದೆ.
ಈ ಬೃಹತ್ ಬೇಹುಗಾರಿಕೆ ಜಾಲಕ್ಕೆ ಸಂಬಂಧಿಸಿದಂತೆ ವಿಶಾಖಪಟ್ಟಣ ನೌಕಾ ಕಮಾಂಡ್‌ಗೆ ನಿಯೋಜಿತನಾಗಿದ್ದ ನಾವಿಕ ಪ್ರದೀಪ್ ಮುಖರ್ಜಿ ಮತ್ತು ಗುತ್ತಿಗೆ ಆಧಾರದ ಚಾಲಕ ಅಣ್ಣಂ ಸಾಯಿ ವರಪ್ರಸಾದ್ ಎಂಬ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ 13 ನೌಕಾ ಸಿಬ್ಬಂದಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸಲಾಗಿದ್ದು, ಅವರ ವಿರುದ್ಧ ಸಮಗ್ರ ಸಾಕ್ಷ್ಯಾಧಾರ ಸಂಗ್ರಹಿಸಿದ ನಂತರವೇ ಔಪಚಾರಿಕ ಬಂಧನ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸ್ಮಿತ್ ಮಚ್ಚಾರ್ ಜೀವ ಉಳಿಸಲು ಮಾಡಿದ ಪ್ರಯತ್ನ ನೆನಪಿಸಿಕೊಂಡ ದಂತ ವೈದ್ಯ
ಈ ಪ್ರಕರಣದ ಬೇರುಗಳನ್ನು ಪತ್ತೆಹಚ್ಚಲು ಆಂಧ್ರ ಪ್ರದೇಶ, ಕರ್ನಾಟಕ, ಕೇರಳಂ, ಮಹಾರಾಷ್ಟ್ರ, ಗುಜರಾತ್, ಗೋವಾ, ದೆಹಲಿ, ತಮಿಳುನಾಡು, ಛತ್ತೀಸ್‌ಗಢ ಮತ್ತು ಬಿಹಾರ ಸೇರಿ ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಐಸಿ, ಎಟಿಎಸ್ ಹಾಗೂ ನೌಕಾಪಡೆಯ ಜಂಟಿ ತಂಡಗಳು ಕಾರ್ಯಾಚರಣೆ ನಡೆಸಿವೆ.
ಪೊಲೀಸರ ಅಧಿಕೃತ ಪ್ರಕಟಣೆಯ ಪ್ರಕಾರ, ಪಾಕಿಸ್ತಾನಿ ಗುಪ್ತಚರ ಏಜೆಂಟರು (ಪಿಐಒ) 'ಜೋಷಿತಾ ಪಾಲ್' ಮತ್ತು 'ಅನ್ವಿ ಮೆಹ್ತಾ' ಎಂಬ ನಕಲಿ ಹೆಸರುಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆರೆದು ನೌಕಾ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು. ಜೋಷಿತಾ ಮುಂಬೈಯ ಹಡಗು ನಿರ್ಮಾಣ ಕಂಪನಿಯ ಉದ್ಯೋಗಿ ಎಂದೂ, ಅನ್ವಿ ದೆಹಲಿ ಮೂಲದ ಮನಶ್ಶಾಸ್ತ್ರಜ್ಞೆ ಎಂದೂ ಪರಿಚಯಿಸಿಕೊಂಡಿದ್ದರು. ಬಳಿಕ ವಾಟ್ಸ್‌ಆ್ಯಪ್ ಸಂವಹನ ಮೂಲಕ ಅಶ್ಲೀಲ ವಿಡಿಯೊ ಕರೆಗಳು, ನಕಲಿ ಪ್ರೇಮದ ಮಾತುಗಳು ಮತ್ತು ಹಣದ ಆಮಿಷವೊಡ್ಡಿ ಭಾರತೀಯ ಯುದ್ಧ ನೌಕೆಗಳು, ಜಲಾಂತರ್ಗಾಮಿಗಳು ಮತ್ತು ಕಮಾಂಡಿಂಗ್ ಅಧಿಕಾರಿಗಳ ವಿವರಗಳನ್ನು ಕಲೆಹಾಕಲು ಯತ್ನಿಸಿದ್ದರು.
ಅಲ್ಲದೆ, ಭಾರತೀಯರ ಹೆಸರಿನಲ್ಲೇ ಸಿಮ್ ಕಾರ್ಡ್ ಪಡೆದು, ವಾಟ್ಸ್‌ಆ್ಯಪ್ ಸಕ್ರಿಯಗೊಳಿಸುವ ಒಟಿಪಿಗಳನ್ನು ಪಾಕಿಸ್ತಾನಕ್ಕೆ ಹಂಚಿಕೊಳ್ಳಲು ಭಾರತೀಯ ಸಿಬ್ಬಂದಿಗೆ ಕ್ರಿಪ್ಟೋಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವೂ ಬಯಲಾಗಿದೆ.
ಈ ಹಿಂದೆ 2019ರ ಡಿಸೆಂಬರ್‌ನಲ್ಲಿಯೂ ಆಂಧ್ರ ಪ್ರದೇಶ ಸಿಐಸಿ ಆಪರೇಷನ್ ಡಾಲ್ಫಿನ್ಸ್ ನೋಸ್ ಮೂಲಕ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸುತ್ತಿದ್ದ 7 ನೌಕಾ ಸಿಬ್ಬಂದಿ ಮತ್ತು ಹವಾಲಾ ಆಪರೇಟರ್ ಸೇರಿ 15 ಜನರನ್ನು ಬಂಧಿಸಿತ್ತು. ಇದೀಗ ಆಪರೇಷನ್ ಫೈರ್‌ವಾಲ್-2026 ಮೂಲಕ ಮತ್ತೊಂದು ಪಾಕ್ ಬೇಹುಗಾರಿಕೆ ಜಾಲವನ್ನು ಯಶಸ್ವಿಯಾಗಿ ಮಟ್ಟ ಹಾಕಲಾಗಿದೆ.