“ತುಟಿ ನೀಲಿ ಬಣ್ಣಕ್ಕೆ ತಿರುಗಿತ್ತು, ನಾಡಿಮಿಡಿತ ಕಡಿಮೆಯಾಗಿತ್ತು”: ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಜೀವ ಉಳಿಸಲು ಮಾಡಿದ ಪ್ರಯತ್ನ ನೆನಪಿಸಿಕೊಂಡ ದಂತ ವೈದ್ಯ
flydubai incident: ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ದಂತವೈದ್ಯ ಶೋಟಾ ಮಸುವೇವ್ ಕಾಪಾಡಿದ್ದರು. ವಿಮಾನವು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಇಳಿಯುವವರೆಗೆ ಸ್ಮಿತ್ ಮಚ್ಚಾರ್ ಅವರ ಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಾ, ಅವರನ್ನು ಜೀವಂತವಾಗಿರಿಸಲು ಪ್ರಯತ್ನಿಸಿದರು.
ಸಾಂದರ್ಭಿಕ ಚಿತ್ರ -
ದುಬೈ, ಅ.7: ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ರಕ್ಷಣೆಗೆ ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂತ ವೈದ್ಯರೊಬ್ಬರು ಧಾವಿಸಿದರು. ಜಾರ್ಜಿಯಾದ ವೈದ್ಯರನ್ನು ಶೋಟಾ ಮಸುವೇವ್ ಎಂದು ಗುರುತಿಸಲಾಗಿದೆ. ಅವರು ಟಿ-ಶರ್ಟ್‌ಗಳು ಮತ್ತು ಐಸ್‌ಪ್ಯಾಕ್‌ಗಳನ್ನು ಬಳಸಿ ಸುಮಾರು 45 ನಿಮಿಷಗಳ ಕಾಲ ಪೈಲಟ್‌ಗೆ ಚಿಕಿತ್ಸೆ ನೀಡಿದರು. ವಿಮಾನವು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಇಳಿಯುವವರೆಗೆ ಸ್ಮಿತ್ ಮಚ್ಚಾರ್ ಅವರ ಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಾ, ಅವರನ್ನು ಜೀವಂತವಾಗಿರಿಸಲು ಪ್ರಯತ್ನಿಸಿದರು (flydubai attack).
ವಿಮಾನದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ವೈದ್ಯಕೀಯ ತುರ್ತು ಪರಿಸ್ಥಿತಿ ಹಾಗೂ ಗಾಯಗೊಂಡ ಪೈಲಟ್‌ನ ಜೀವ ಉಳಿಸಲು ತಾವು ಕೈಗೊಂಡ ಪ್ರಯತ್ನಗಳನ್ನು ಶೋಟಾ ಮಸುವೇವ್ ನೆನಪಿಸಿಕೊಂಡಿದ್ದಾರೆ. ಮಸುವೇವ್ ಅವರು ಕಾಕ್‌ಪಿಟ್‌ನಿಂದ ಕಿರುಚಾಟ ಕೇಳಿದ ತಕ್ಷಣ ಅಲ್ಲಿಗೆ ಧಾವಿಸಿ, ದಾಳಿಕೋರನನ್ನು ನಿಯಂತ್ರಿಸಲು ಸಹಾಯ ಮಾಡಿದರು. ಬಳಿಕ ಕಾಕ್‌ಪಿಟ್‌ನಲ್ಲಿ ಗಾಯಗೊಂಡು ಬಿದ್ದಿದ್ದ ಮಚ್ಚಾರ್ ಅವರತ್ತ ಗಮನ ಹರಿಸಿದರು.
“ಆ ಸಮಯದಲ್ಲಿ, ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ನಾನು ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸಿದೆ. ಆಗ ನೆಲದ ಮೇಲೆ ರಕ್ತಸ್ರಾವವಾಗಿ ಬಿದ್ದಿದ್ದ ಪೈಲಟ್‌ನನ್ನು ನೋಡಿದೆ. ಅವರ ತಲೆ ಮತ್ತು ಎಡಗೈಯಿಂದ ಭಾರೀ ರಕ್ತಸ್ರಾವವಾಗುತ್ತಿತ್ತು” ಎಂದು ಅವರು ಹೇಳಿದರು.
ಮಸುವೇವ್ ಅವರು ಆರಂಭದಲ್ಲಿ ಟಿ-ಶರ್ಟ್‌ಗಳನ್ನು ಬಳಸಿದರು. ಆದರೆ ರಕ್ತಸ್ರಾವ ಮುಂದುವರಿಯುತ್ತಿತ್ತು. ನಂತರ ಅವರು ಕ್ಯಾಬಿನ್ ಸಿಬ್ಬಂದಿಯ ಬಳಿ ಐಸ್ ತರುವಂತೆ ಕೇಳಿದರು. “ಅವರಿಗೆ ತುಂಬಾ ಆಳವಾದ ಗಾಯಗಳಾಗಿದ್ದವು. ನಮಗೆ ಸಾಕಷ್ಟು ಐಸ್ ಪ್ಯಾಕ್‌ಗಳು ಬೇಕಾದವು. ಆದರೆ ರಕ್ತಸ್ರಾವ ಎಷ್ಟಿದೆ ಎಂದು ಪರಿಶೀಲಿಸಲು ನಾನು ಪ್ರತಿ ಬಾರಿ ಟಿ-ಶರ್ಟ್ ತೆರೆದಾಗ, ಮತ್ತೆ ಹೆಚ್ಚು ರಕ್ತಸ್ರಾವವಾಗುತ್ತಿತ್ತು. ಹಾಗಾಗಿ ನಾನು ಹೆಚ್ಚು ಬಲವಾಗಿ ಒತ್ತದೆ, ಐಸ್‌ನೊಂದಿಗೆ ಗಾಯದ ಮೇಲೆ ಒತ್ತಡ ಹಾಕುತ್ತಿದ್ದೆ. ಆ 45 ನಿಮಿಷಗಳ ಅವಧಿಯಲ್ಲೂ ನಿರಂತರವಾಗಿ ಒತ್ತಡವನ್ನು ಕಾಯ್ದುಕೊಂಡಿದ್ದೆ” ಎಂದು ಮಸುವೇವ್ ಹೇಳಿದರು.
ಪೈಲಟ್ ಸ್ಮಿತ್ ಮಚ್ಚಾರ್ ಅವರು ಪ್ರಜ್ಞೆ ಕಳೆದುಕೊಳ್ಳದಂತೆ ನೋಡಿಕೊಳ್ಳಲು ದಂತ ವೈದ್ಯರು ಅವರೊಂದಿಗೆ ಮಾತನಾಡುತ್ತಾ, ಅವರ ಕುಟುಂಬದ ಬಗ್ಗೆ ಪ್ರಶ್ನಿಸಿದ್ದಾಗಿ ಹೇಳಿದರು. “ದಯವಿಟ್ಟು ನಿದ್ರಿಸಬೇಡಿ, ನಮಗೆ ನಿಮ್ಮ ಅಗತ್ಯವಿದೆ ಎಂದು ನಾನು ಅವರಿಗೆ ಹೇಳಿದೆ. ಅವರಿಗೆ ಎಷ್ಟು ಮಕ್ಕಳಿದ್ದಾರೆ, ಅವರ ಹೆಸರುಗಳೇನು ಎಂದು ಕೇಳಿದೆ. ಭಯಪಡಬೇಡಿ, ನೀವು ನಿಮ್ಮ ಕುಟುಂಬದ ಬಳಿಗೆ ಹಿಂದಿರುಗುತ್ತೀರಿ. ನಾವು ಶೀಘ್ರದಲ್ಲೇ ಲ್ಯಾಂಡ್ ಆಗಲಿದ್ದೇವೆ ಎಂದು ನಾನು ಪದೇಪದೇ ಹೇಳುತ್ತಿದ್ದೆ” ಎಂದು ಅವರು ಹೇಳಿದರು.
ಮಚ್ಚಾರ್ ಅವರು ತಮ್ಮ ಹೆಸರು ಮತ್ತು ವಯಸ್ಸನ್ನು ಮಸುವೇವ್‌ಗೆ ತಿಳಿಸಿದರು. ತಾವು ದುಬೈನಲ್ಲಿ ವಾಸಿಸುತ್ತಿದ್ದು, ಭಾರತೀಯ ಎಂದು ಹೇಳಿದರು. ಅಲ್ಲದೆ, ನೋವಿನಿಂದ ಬಳಲುತ್ತಿದ್ದ ಅವರು ಪದೇಪದೇ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದರು ಎಂದು ತಿಳಿಸಿದರು. “ಎಲ್ಲವೂ ಸರಿಯಾಗುತ್ತದೆ ಎಂದು ಪೈಲಟ್‌ಗೆ ಹೇಳಿದ್ದಾಗಿ ಮಸುವೇವ್ ತಿಳಿಸಿದ್ದಾರೆ. ಅವರು ನನ್ನ ಬಳಿ, ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಇಲ್ಲಿ ಸಾಯಲು ಬಯಸುವುದಿಲ್ಲ ಎಂದು ಹೇಳಿದರು” ಎಂಬುದಾಗಿ ಮಸುವೇವ್ ಹೇಳಿದರು.
“ಅವರಿಗೆ ತೀವ್ರವಾಗಿ ಗಾಯವಾಗಿತ್ತು. ನನ್ನ ಕೈಗಳು ತುಂಬಾ ಬಿಸಿಯಾಗುತ್ತಿವೆ ಎಂದು ಅವರು ಹೇಳುತ್ತಿದ್ದರು. ಅವರು ಖಂಡಿತವಾಗಿಯೂ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಅವರಿಗೆ ಪದೇಪದೇ ಧೈರ್ಯ ಹೇಳುತ್ತಿದ್ದೆ” ಎಂದು ಮಸುವೇವ್ ಹೇಳಿದರು.
ಕಾಕ್‌ಪಿಟ್‌ನಲ್ಲಿ ನಡೆದಿದ್ದು ಏನು? ಇಸ್ರೇಲ್ ಪ್ರಧಾನಿಗೆ ಸ್ಮಿತ್ ಮಚ್ಚಾರ್ ವಿವರಿಸಿದ ಆ ಭಯಾನಕ ಅನುಭವ ಹೇಗಿತ್ತು?
“ಮಚ್ಚಾರ್ ಅವರ ಸ್ಥಿತಿ ಬಳಿಕ ಮತ್ತಷ್ಟು ಹದಗೆಟ್ಟಿದ್ದು, ಅವರ ನಾಡಿಮಿಡಿತ ಅಪಾಯಕಾರಿಯಾಗಿ ಕಡಿಮೆಯಾಯಿತು. ಒಂದು ಹಂತದಲ್ಲಿ ಅವರ ನಾಡಿಮಿಡಿತ ತುಂಬಾ ಕಡಿಮೆಯಾಗಿತ್ತು. ಹಾಗಾಗಿ ನಾನು ಅವರ ಕಾಲುಗಳನ್ನು ಮೇಲಕ್ಕೆತ್ತಿದೆ. ನಂತರ ನಾಡಿಮಿಡಿತ ಮತ್ತೆ ಸಹಜವಾಯಿತು” ಎಂದು ಮಸುವೇವ್ ಹೇಳಿದರು.
ನಂತರ ದಂತ ವೈದ್ಯರು ಮತ್ತೊಂದು ಆತಂಕಕಾರಿ ಲಕ್ಷಣವನ್ನು ಗಮನಿಸಿದ್ದಾಗಿ ಹೇಳಿದರು. “ಮಚ್ಚಾರ್ ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು. ಈ ವೇಳೆ ವಿಮಾನ ಚಲಾಯಿಸುತ್ತಿದ್ದ ಸ್ಟೀವರ್ಡ್‌ಗೆ, ನಾವು ಬೇಗನೆ ಲ್ಯಾಂಡ್ ಆಗಬೇಕು. ಅವರಿಗೆ ಹೆಚ್ಚು ಸಮಯವಿಲ್ಲ” ಎಂದು ಹೇಳಿದೆ ಎಂದು ಮಸುವೇವ್ ತಿಳಿಸಿದ್ದಾರೆ.
ಮಚ್ಚಾರ್ ಅವರು ನೋವು ನಿವಾರಕ ಔಷಧಿ ನೀಡುವಂತೆ ಕೇಳುತ್ತಿದ್ದರು. ಮಸುವೇವ್ ಅವರು ಅವರಿಗೆ ಸ್ವಲ್ಪ ಸ್ವಲ್ಪ ನೀರು ಕುಡಿಸಿದರು. ಆದರೆ ಗಾಯಗಳ ತೀವ್ರತೆ ಮತ್ತು ಮತ್ತೆ ರಕ್ತಸ್ರಾವವಾಗುವ ಅಪಾಯದ ಹಿನ್ನೆಲೆಯಲ್ಲಿ ಔಷಧಿ ನೀಡದಿರಲು ನಿರ್ಧರಿಸಿದರು.
ಸ್ಮಿತ್ ನಮ್ಮೆಲ್ಲರ ಜೀವಗಳನ್ನು ಉಳಿಸಿದರು. ಸ್ಮಿತ್ ಒಬ್ಬ ಹೀರೋ. ನನ್ನ ಕುಟುಂಬ ಮತ್ತು ಎಲ್ಲಾ ಪ್ರಯಾಣಿಕರನ್ನು ಉಳಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ನಮ್ಮ ಜೀವಗಳನ್ನು ಉಳಿಸಿದರು. ನಾವು ಅವರ ಜೀವವನ್ನು ಉಳಿಸಲು ಹೋರಾಡಿದೆವು ಎಂದು ಮುಸೇವ್ ಹೇಳಿದರು. ಸದ್ಯ, ಯುಎಇನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.