ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ; ಗಡಿಯಲ್ಲಿ ಡ್ರೋನ್ ಬಾಂಬ್ ಮೂಲಕ ಅಟ್ಯಾಕ್ ಮಾಡಲು ಯತ್ನ
ಪಾಕಿಸ್ತಾನದಿಂದ ಡ್ರೋನ್ ಮೂಲಕ ಸ್ಫೋಟಕ್ಕೆ ಸಿದ್ಧವಾಗಿದ್ದ ಬಾಂಬ್ ಕಳುಹಿಸಲಾಗಿದೆ. ಇದು ಪೊಲೀಸರಿಗೆ ಸಿಕ್ಕಿದ್ದರಿಂದ ಭಯೋತ್ಪಾದಕರ ಸಂಚು ವಿಫಲಗೊಂಡಿದೆ. ರಾಜಸ್ಥಾನದ ಶ್ರೀ ಗಂಗಾನಗರ ವಲಯದಲ್ಲಿ ಮಾದಕವಸ್ತು ವಿರೋಧಿ ಕಾರ್ಯಪಡೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇದು ಕಂಡು ಬಂದಿದೆ ಎಂದು ಕಾರ್ಯಪಡೆಯ ಇನ್ಸ್ಪೆಕ್ಟರ್ ಜನರಲ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ರಾಜಸ್ಥಾನ: ಹಬ್ಬದ ಋತು, ಪಂಜಾಬ್ ಚುನಾವಣೆ (punjab election) ಸಂದರ್ಭದಲ್ಲಿ ಭಯೋತ್ಪಾದಕ ದಾಳಿ (terror attack) ನಡೆಸಲು ಪಾಕಿಸ್ತಾನದಿಂದ (pakistan) ಡ್ರೋನ್ ಮೂಲಕ ಸ್ಫೋಟಕ್ಕೆ (bomb attack) ಸಿದ್ಧವಾಗಿದ್ದ ಬಾಂಬ್ ಕಳುಹಿಸಲಾಗಿದೆ. ಆದರೆ ಈ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ರಾಜಸ್ಥಾನದ ಶ್ರೀ ಗಂಗಾನಗರ ವಲಯದಲ್ಲಿ ಮಾದಕವಸ್ತು ವಿರೋಧಿ ಕಾರ್ಯಪಡೆ (Rajasthan Anti-Narcotics Task Force) ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಡ್ರೋನ್ ಮೂಲಕ ಹಾರಿ ಬಂದ ಬಾಂಬ್ ಅನ್ನು ಮಾದಕವಸ್ತು ವಿರೋಧಿ ಕಾರ್ಯಪಡೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾರ್ಯಪಡೆಯ ಇನ್ಸ್ಪೆಕ್ಟರ್ ಜನರಲ್ ವಿಕಾಸ್ ಕುಮಾರ್, ಭಯೋತ್ಪಾದಕ ದಾಳಿ ನಡೆಸಲು ಸ್ಪೋಟಕ್ಕೆ ಸಿದ್ಧಗೊಂಡಿರುವ ಬಾಂಬ್ ಅನ್ನು ಪಾಕಿಸ್ತಾನದಿಂದ ಕಳುಹಿಸಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.
ತೇಜೋವಧೆ, ಜಾತಿ ನಿಂದನೆ ಆರೋಪ: ಪತ್ರಕರ್ತೆ ಮತ್ತು ಅಭಿಜೀತ್ ದಿಪ್ಕೆ ವಿರುದ್ಧ ACP ವಿವೇಕ್ ಭಗತ್ ದೂರು!
ರಾಜಸ್ಥಾನದ ಶ್ರೀ ಗಂಗಾನಗರ ವಲಯದಲ್ಲಿ ಪಾಕಿಸ್ತಾನದಿಂದ ಡ್ರೋನ್ಗಳ ಮೂಲಕ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ರಾಜಸ್ಥಾನದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಕಾರ್ಯಾಚರಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಡ್ರೋನ್ ಮೂಲಕ ಹಾರಿ ಬಂದ ಆರ್ ಡಿಎಕ್ಸ್ , ಸುಧಾರಿತ ಸ್ಫೋಟಕ ಸಾಧನ, ಪಿಸ್ತೂಲ್, ರಿಮೋಟ್ ಮೂಲಕ ಸ್ಫೋಟಿಸುವ ಉಪಕರಣ, ಬ್ಯಾಟರಿ ಮತ್ತು ನೂರಾರು ಗುಂಡುಗಳು ಸಿಕ್ಕಿವೆ.
ಅಕ್ಟೋಬರ್ 12 ಮತ್ತು 13ರಂದು ಮಧ್ಯರಾತ್ರಿ ಪಾಕಿಸ್ತಾನದ ಒಳಗೆ ಸುಮಾರು 5 ರಿಂದ 10 ಕಿಲೋಮೀಟರ್ ದೂರದಿಂದ ಹಾರಿಬಂದ ಮೂರು ಡ್ರೋನ್ಗಳು ಗಂಗಾನಗರ ವಲಯದ ಮೇಲೆ ಹಾರಾಡಿದವು.
ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಗಂಗಾನಗರ ಜಿಲ್ಲೆಯ ರಾವೋಲಾ ಪ್ರದೇಶದ 12 ಕೆಡಿ ಗ್ರಾಮದ ಬಳಿಯ ಹೊಲವೊಂದರಲ್ಲಿ ಈ ಡ್ರೋನ್ಗಳು ಕೆಲವು ಪೊಟ್ಟಣಗಳನ್ನು ಕೆಳಗೆ ಹಾಕಿದವು. ಸುಮಾರು 19 ವರ್ಷ ವಯಸ್ಸಿನ ಇಬ್ಬರು ಯುವಕರು ಕತ್ತಲೆಯ ಮರೆಯಲ್ಲಿ ಆ ಹೊಲಕ್ಕೆ ನುಗ್ಗಿ ಆ ಪೊಟ್ಟಣಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು. ಆಗ ಅಲ್ಲಿದ್ದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ಸಿಬ್ಬಂದಿ ಅವುಗಳನ್ನು ವಶಕ್ಕೆ ಪಡೆದರು.
ಡ್ರೋನ್ ಮೂಲಕ ಬಂದ ಪೊಟ್ಟಣದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳು ಇರಲಿಲ್ಲ. ಬದಲಾಗಿ, ಅತ್ಯಾಧುನಿಕ ಸ್ಫೋಟಕಗಳು, ಟರ್ಕಿಯಲ್ಲಿ ತಯಾರಾದ ಎರಡು ಪಿಸ್ತೂಲ್ಗಳು ಮತ್ತು 867 ಗುಂಡುಗಳು ಇದ್ದವು. ಅದು ಬಾಂಬ್ ಆಗಿತ್ತು. ಕೇವಲ ಸರ್ಕ್ಯೂಟ್ಗಳನ್ನು ಜೋಡಿಸಿದರೆ ಅದು ಸ್ಫೋಟಗೊಳ್ಳುತ್ತಿತ್ತು ಎಂದು ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಬಾಂಬ್ಗಳು ಸಿದ್ಧವಾಗಿದ್ದವು. ಲೋಹದ ಚೂರುಗಳನ್ನು ಅವುಗಳಲ್ಲಿ ತುಂಬಲಾಗಿತ್ತು. ಸ್ಫೋಟಗೊಂಡರೆ ಸೆಕೆಂಡಿಗೆ 9.5 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲವು. ಇದು ಭಾರಿ ಪ್ರಮಾಣದ ಹಾನಿಯನ್ನು ಉಂಟು ಮಾಡಬಲ್ಲದು. ಇದೊಂದು ಅತ್ಯಾಧುನಿಕ ಮತ್ತು ಪ್ರಬಲ ಸ್ಫೋಟಕವಾಗಿದ್ದು, ಅಪಾರ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ನಿಷ್ಕ್ರಿಯಗೊಳಿಸಲು ವಿಶೇಷ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಬೇಕಾಯಿತುಎಂದು ಅವರು ಹೇಳಿದರು.
ಯಾರ ಕಣ್ಣಿಗೂ ಬೀಳದಂತೆ ಗಾಳಿಯಾಡದಂತೆ ಭದ್ರವಾಗಿ ಇದನ್ನು ಪ್ಯಾಕ್ ಮಾಡಲಾಗಿತ್ತು. ಶ್ವಾನ ದಳಕ್ಕೂ ಇದನ್ನು ಗುರುತಿಸುವುದು ಕಷ್ಟಕರವಾಗಿರುತ್ತಿತ್ತು ಎಂದು ಅವರು ತಿಳಿಸಿದರು.
ಸ್ಫೋಟಕ ಸಾಮಗ್ರಿಗಳನ್ನು ಪಡೆಯಲು ಬಂದಿದ್ದ ಇಬ್ಬರನ್ನು ಪಂಜಾಬ್ನ ಫಿರೋಜ್ಪುರದ ಲಖ್ವಿಂದರ್, ಜಲಂಧರ್ನ ಆತನ ಸೋದರಸಂಬಂಧಿ ಸುಖ್ವಿಂದರ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಇಬ್ಬರು 2026ರ ಸೆಪ್ಟೆಂಬರ್ 13ರಂದು ಪಂಜಾಬ್ನ ಫಾಜಿಲ್ಕಾ ಜಿಲ್ಲೆಯಲ್ಲಿರುವ ಜಲಾಲಾಬಾದ್ ಪೊಲೀಸ್ ಠಾಣೆಯ ಮೇಲೆ ನಡೆದ ಗ್ರೆನೇಡ್ ದಾಳಿಯ ಪ್ರಕರಣದಲ್ಲಿ ಬೇಕಾದವರಾಗಿದ್ದರು. ಕಳೆದ ಒಂದು ತಿಂಗಳಿನಿಂದ ಈ ಇಬ್ಬರು ಗ್ರಾಮದಲ್ಲಿ ಕೃಷಿ ಕಾರ್ಮಿಕರಂತೆ ನಟಿಸುತ್ತಿದ್ದರು. ಆ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ಮತ್ತು ಇತರ ಭದ್ರತಾ ಸಂಸ್ಥೆ ಸಿಬ್ಬಂದಿ ಮೇಲೆ ನಿಗಾ ಇರಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ವಿವಿಎಸ್ ಲಕ್ಷ್ಮಣ್ ಪ್ರಭಾವ; ಹಂಗಾಮಿ ಮುಖ್ಯ ಆಯ್ಕೆದಾರರಾಗಿ ಪ್ರಗ್ಯಾನ್ ಮುಂದುವರಿಯುವ ಸಾಧ್ಯತೆ
ಬಂಧಿತರು ಪಾಕಿಸ್ತಾನದ ಉಮರ್ ಚಾಚಾ, ಡುಂಗರ್ ಚಾಚಾ ಮತ್ತು ಶಾ ಪಠಾನ್ ಎಂಬ ಮೂವರು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಅವರ ಸಂವಹನವು ಸಾಮಾಜಿಕ ಜಾಲತಾಣಗಳು ಮತ್ತು ಕಾನ್ಫರೆನ್ಸ್ ಕರೆಗಳ ಮೂಲಕ ನಡೆದಿದೆ. ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಆರ್ಎಸ್ ಎಂಬ ಹೆಸರಿನ ನಿರ್ವಾಹಕನನ್ನು ಗುರುತಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ರಾಜಸ್ಥಾನ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಈ ತನಿಖೆಯಲ್ಲಿ ಕೈಜೋಡಿಸಿವೆ.