ಚಂಡೀಗಢ, ಆ.30: ಗರ್ಭಿಣಿಯನ್ನು ಅಪಹರಿಸಿ, ಬಳಿಕ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಚಂಡೀಗಢದ ಮೊರಿಂಡಾದಲ್ಲಿ ನಡೆದಿದೆ. 28 ವರ್ಷದ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ (Social media influencer) ಮಂಜೀತ್ ಕೌರ್ ಅವರು ಆಗಸ್ಟ್ 26 ರಂದು ಪಿಜಿಐಎಂಇಆರ್ ಆಸ್ಪತ್ರೆಯಲ್ಲಿ ತೀವ್ರ ಸುಟ್ಟ ಗಾಯಗಳಿಂದಾಗಿ (Crime News) ಮೃತಪಟ್ಟಿದ್ದಾರೆ. ಆಘಾತಕಾರಿ ವಿಷಯವೆಂದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು 7 ವಾರಗಳ ಗರ್ಭಿಣಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಎಫ್‌ಐಆರ್ ಪ್ರಕಾರ, ಜುಲೈ 3ರಂದು ಮಂಜೀತ್ ಕೌರ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಚಂಡೀಗಢದಿಂದ ಮೊರಿಂಡಾಗೆ ಕರೆದೊಯ್ಯಲಾಗಿದೆ. ಬಳಿಕ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
“ಇವರು ನನ್ನನ್ನು ಕೊಲ್ಲುತ್ತಾರೆ”: ಹೆರಿಗೆಗೂ ಮುನ್ನ ಹೇಳಿದ್ದ ಮೃತ ಮಹಿಳೆಯ ವಿಡಿಯೊ ವೈರಲ್
ಸ್ಥಳಕ್ಕೆ ಬಂದ ಮಂಜೀತ್ ಕೌರ್ ಅವರ ಸ್ನೇಹಿತೆಯೊಬ್ಬರು ಕಂಬಳಿಯಿಂದ ಬೆಂಕಿಯನ್ನು ನಂದಿಸಿ ಮೊರಿಂಡಾದ ಆಸ್ಪತ್ರೆಗೆ ಕರೆದೊಯ್ದರು. ನಂತರ ಜುಲೈ 9 ರಂದು ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಗಸ್ಟ್ 5 ರಂದು ಮಂಜೀತ್ ಕೌರ್‌ಗೆ ಪ್ರಜ್ಞೆ ಮರಳಿತು. ಆದರೆ, ಗಂಭೀರ ಗಾಯಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 26 ರಂದು ನಿಧನರಾಗಿದ್ದಾರೆ.
ವಿಚ್ಛೇದಿತಳಾದ ಮಂಜೀತ್ ಕೌರ್‌ಗೆ ಏಳು ವರ್ಷದ ಮಗನಿದ್ದು, ಆತ ಆಕೆಯ ಮಾಜಿ ಪತಿಯೊಂದಿಗೆ ವಾಸಿಸುತ್ತಿದ್ದಾನೆ. ತನಿಖೆಯ ಸಮಯದಲ್ಲಿ ಆಕೆಯ ಗರ್ಭಧಾರಣೆಯು ದೃಢಪಟ್ಟಿದ್ದು, ಆಕೆ ಸುಮಾರು ಏಳು ವಾರಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೀತ್ ಕೌರ್ ಅವರ ಅಂತ್ಯಕ್ರಿಯೆ ನಡೆಯುತ್ತಿರುವುದರಿಂದ ಅವರ ಕುಟುಂಬ ಇನ್ನೂ ತನಿಖೆಗೆ ಕೈಜೋಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜೀತ್ ಅವರ ತಾಯಿ ಕಾಂತಾ ದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಶುಭಿ ಮತ್ತು ಪಿಂಡಾ ಎಂಬುವವರ ವಿರುದ್ಧ ಅಪಹರಣ ಮತ್ತು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಅಪಹರಣದ ಸುತ್ತಲಿನ ಸಂದರ್ಭಗಳು ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಚಂಡೀಗಢ ಮತ್ತು ಮೊರಿಂಡಾ ನಡುವಿನ ಮಾರ್ಗದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದು, ತನಿಖೆ ನಡೆಸಲಾಗುತ್ತಿದೆ.