ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಇವರು ನನ್ನನ್ನು ಕೊಲ್ಲುತ್ತಾರೆ”: ಹೆರಿಗೆಗೂ ಮುನ್ನ ಹೇಳಿದ್ದ ಮೃತ ಮಹಿಳೆಯ ವಿಡಿಯೊ ವೈರಲ್‌

childbirth death: ಹೆರಿಗೆಯ ನಂತರ ಮಹಿಳೆ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜನರು ತನ್ನನ್ನು ಕೊಲ್ಲುತ್ತಾರೆ ಎಂದು ಆಕೆ ಹೇಳಿರುವ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇದೀಗ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಹೆರಿಗೆಯ ನಂತರ ಮಹಿಳೆ, ಮಗು ಸಾವು; ಹಳೆಯ ವಿಡಿಯೊ ಬಹಿರಂಗ

ಮಧ್ಯ ಪ್ರದೇಶದ ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ -

Priyanka P
Priyanka P Aug 29, 2026 7:43 PM

ಭೋಪಾಲ್‌, ಆ. 29: ಹೆರಿಗೆಯ ನಂತರ ಮಹಿಳೆ, ಮಗು ಮೃತಪಟ್ಟ ಪ್ರಕರಣಕ್ಕೆ (Woman and baby death) ಸಂಬಂಧಿಸಿದಂತೆ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಜನರು ತನ್ನನ್ನು ಕೊಲ್ಲುತ್ತಾರೆ ಎಂದು ಮಹಿಳೆ ಹೇಳಿರುವ ಮಾತು ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಧ್ಯ ಪ್ರದೇಶದ (Madhya Pradesh) ರೇವಾದ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಮೊದಲ ಮಗುವಿಗೆ ಜನ್ಮ ನೀಡಿದ ನಂತರ 25 ವರ್ಷದ ಕಲ್ಪನಾ ಮಿಶ್ರಾ ಮೃತಪಟ್ಟಿದ್ದಾರೆ. ಮಿಶ್ರಾ ಸಾಯುವ ಕೆಲವು ಗಂಟೆಗಳ ಮೊದಲು, ಅಳುತ್ತಿದ್ದರು, ಕಿರುಚುತ್ತಿದ್ದರು. ಅಲ್ಲಿಂದ ತಮ್ಮನ್ನು ಕರೆದುಕೊಂಡು ಹೋಗುವಂತೆ ಕುಟುಂಬದ ಬಳಿ ಕೇಳಿಕೊಂಡಿದ್ದರು.

“ಈ ರೀತಿಯ ಚಿಕಿತ್ಸೆ ಮುಂದುವರಿದರೆ, ಈ ಜನರು ನನ್ನನ್ನು ಕೊಲ್ಲುತ್ತಾರೆ” ಎಂದು ಕಲ್ಪನಾ ತನ್ನ ತಾಯಿಗೆ ಹೇಳುತ್ತಿರುವುದು ಅವರ ಸಾವಿಗೆ ಸ್ವಲ್ಪ ಮೊದಲು ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿದೆ. ʼʼನಾನು ಬದುಕುಳಿಯುವುದಿಲ್ಲ. ದಯವಿಟ್ಟು ನನ್ನನ್ನು ಉಳಿಸಿ. ನನ್ನ ಜೀವ ಅಪಾಯದಲ್ಲಿದೆʼʼ ಎಂದು ಕಲ್ಪನಾ ಮಿಶ್ರಾ ಪದೇ ಪದೆ ಬೇಡಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳ ನಂತರ, ಕಲ್ಪನಾ ಮೃತಪಟ್ಟರು. ಆಗ ತಾನೆ ಜನಿಸಿದ ಅವರ ನವಜಾತ ಶಿಶುವೂ ಮೃತಪಟ್ಟಿತು.

ಕಲ್ಪನಾ ಅವರಿಗೆ ವೈದ್ಯಕೀಯ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ. ವೈದ್ಯರ ನಿರ್ಲಕ್ಷ್ಯವನ್ನು ನಿರಾಕರಿಸಿದೆ. ಆದರೆ ಆಕೆಯ ಕುಟುಂಬವು ವೈದ್ಯರ ನಿರ್ಲಕ್ಷ್ಯವೇ ತಾಯಿ-ಮಗು ಸಾವಿಗೆ ಕಾರಣ ಎಂದು ಆರೋಪಿಸಿದೆ.

ಇಲ್ಲಿದೆ ವಿಡಿಯೊ:



ಘಟನೆ ಸಂಬಂಧ ಇಬ್ಬರು ನರ್ಸಿಂಗ್ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಸ್ಪತ್ರೆ ಆಡಳಿತ ಹೇಳಿದೆ.

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ಚಿಂತಾಮಣಿಯಲ್ಲಿ ತಡರಾತ್ರಿ ಹೈಡ್ರಾಮಾ!

ರೇವಾ ಜಿಲ್ಲೆಯ ಹತ್ವಾ ನಿವಾಸಿ ಕಲ್ಪನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆಗಸ್ಟ್ 25ರ ರಾತ್ರಿ ಹೆರಿಗೆಗಾಗಿ ಅವರನ್ನು ಸಂಜಯ್ ಗಾಂಧಿ-ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 26ರಂದು ರಾತ್ರಿ 8:30ರ ಸುಮಾರಿಗೆ ಅವರಿಗೆ ಆಪರೇಷನ್ ಮೂಲಕ ಹೆರಿಗೆ ಮಾಡಲಾಯಿತು. ಆದರೆ ಅದಾಗಿ ಕೆಲವೇ ಹೊತ್ತಲ್ಲಿ ತಾಯಿ-ಮಗು ಮೃತಪಟ್ಟರು. ಮಗುವನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿದ್ದ ಕುಟುಂಬವು ಆಘಾತಗೊಂಡಿತು.

ತಮ್ಮ ಸೊಸೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು ಎಂದು ಕಲ್ಪನಾ ಅವರ ಮಾವ ಧರ್ಮೇಂದ್ರ ಮಿಶ್ರಾ ಹೇಳಿದ್ದಾರೆ. ಆ. 25ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆರಿಗೆಯ ಸಮಯದಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆ ಪಡೆಯುತ್ತಿರುವಾಗ ಅವರು ಆಗಸ್ಟ್‌ 27ರಂದು ನಿಧನರಾದರು.

ಕಲ್ಪನಾ ಅವರ ಸಾವಿಗೆ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೊವೊಂದು ಇದೀಗ ಬಹಿರಂಗವಾಗಿದೆ. ಕಲ್ಪನಾ ಮಿಶ್ರಾ ಮಹಿಳಾ ವಾರ್ಡ್ ಒಳಗೆ ಅಳುತ್ತಾ ಕಿರುಚುತ್ತಾ, ಹೊರಹೋಗಲು ಪ್ರಯತ್ನಿಸುತ್ತಿದ್ದಾರೆ. ತನ್ನ ಕುಟುಂಬಸ್ಥರನ್ನು ನೋಡಿ ಕೂಗಿಕೊಂಡಿದ್ದಾರೆ. ನರ್ಸಿಂಗ್ ಸಿಬ್ಬಂದಿ ಅವರನ್ನು ತಡೆಯಲು ಮತ್ತು ಅಲ್ಲಿಯೇ ಇರಲು ಮನವೊಲಿಸಲು ಪ್ರಯತ್ನಿಸುತ್ತಿರುವಂತೆ ಕಂಡು ಬಂದಿದೆ.

ಸರ್ಕಾರಿ ವೈದ್ಯನ ನಿರ್ಲಕ್ಷ್ಯದಿಂದ ಸಾವು ಬದುಕಿನ ನಡುವೆ ಬಾಣಂತಿ ಹೋರಾಟ; ಹಾವೇರಿಯಲ್ಲಿ ದೂರು ದಾಖಲು

ಒಂದು ಹಂತದಲ್ಲಿ, ಒಬ್ಬ ಸಿಬ್ಬಂದಿ ನಿಮಗೆ ಹುಚ್ಚು ಹಿಡಿದಿದೆಯೇ? ಎಂದು ಪ್ರಶ್ನಿಸಿರುವುದು ಕೇಳಿಸುತ್ತದೆ. ಆದರೆ ಕಲ್ಪನಾ ಮುಂದೆ ಸಾಗುತ್ತಲೇ ಇದ್ದರು. ಆಕೆ ತನ್ನ ಕುಟುಂಬದ ಕಡೆಗೆ ಕೈಚಾಚಿ, ಅತ್ತಿದ್ದಾರೆ. ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗಳ ಸ್ಥಿತಿ ಹದಗೆಟ್ಟಿತು. ಆಸ್ಪತ್ರೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಲ್ಪನಾ ಮಿಶ್ರಾ ತಂದೆ ಆರೋಪಿಸಿದ್ದಾರೆ. ಅರಿವಳಿಕೆ ನೀಡಿದ ನಂತರ ಕಲ್ಪನಾಗೆ ಪ್ರಜ್ಞೆ ಮರಳಲಿಲ್ಲ. ಓವರ್‌ ಡೋಸ್‌ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.

ಕಲ್ಪನಾ ಅವರ ಸಂಬಂಧಿಕರು ಆಸ್ಪತ್ರೆಯ ಮುಖ್ಯ ದ್ವಾರದಲ್ಲಿ ಜಮಾಯಿಸಿ, ವೈದ್ಯಕೀಯ ನಿರ್ಲಕ್ಷ್ಯವನ್ನು ಆರೋಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು. ಆಸ್ಪತ್ರೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ಮುಂದುವರಿಯಿತು. ಕ್ರಮ ಕೈಗೊಳ್ಳದ ಹೊರತು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ಕುಟುಂಬ ನಿರಾಕರಿಸಿತು.

ಇಡೀ ಘಟನೆಯ ತನಿಖೆಗಾಗಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಯಿತು. ತಪ್ಪಿತಸ್ಥರು ಯಾರದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಕುಟುಂಬವು ಮಾಡಿರುವ ಆರೋಪಗಳನ್ನು ತನಿಖೆ ಮಾಡಲಾಗುತ್ತದೆ ಎಂದು ಡೀನ್ ಡಾ. ಸುನಿಲ್ ಅಗರ್ವಾಲ್ ಹೇಳಿದರು.