ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮ ಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿ ಲವಕುಶ್ ಮಿಶ್ರಾ ಆಸ್ತಿ ಮೇಲೆ ಎಡಿಎ ಕಣ್ಣು

ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಒಬ್ಬರಾದ ಲವಕುಶ್ ಮಿಶ್ರಾಗೆ ಸಂಬಂಧಿಸಿದ ಆಸ್ತಿ ಮೇಲೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆಯನ್ನು ಕೇಳಿದೆ. ಲವಕುಶ್ ಮಿಶ್ರಾ ಅವರ ಪತ್ನಿ ಸುಪ್ರಿಯಾ ಹೆಸರಲ್ಲಿ ನೋಂದಾಯಿಸಲಾಗಿರುವ ಆಸ್ತಿಗೆ ಸಂಬಂಧಿಸಿ ನೋಟಿಸ್ ಜಾರಿ ಮಾಡಲಾಗಿದೆ.

ಸಂಗ್ರಹ ಚಿತ್ರ

ಉತ್ತರಪ್ರದೇಶ: ಅಯೋಧ್ಯೆ ರಾಮ ಮಂದಿರದ (ayodhya Ram Mandir) ದೇಣಿಗೆ ಹಣ (donation theft) ದುರುಪಯೋಗ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ಆರೋಪಿ ಲವಕುಶ್ ಮಿಶ್ರಾಗೆ (Lavkush Mishra) ಸಂಬಂಧಿಸಿದ ಆಸ್ತಿಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (Ayodhya Development Authority) ಕೆಡವುವ ಬೆದರಿಕೆಯೊಡ್ಡಿದೆ. ಲವಕುಶ್ ಮಿಶ್ರಾ ಪತ್ನಿ ಸುಪ್ರಿಯಾ ಹೆಸರಿನಲ್ಲಿ ನೋಂದಾಯಿಸಲಾಗಿರುವ ಆಸ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವು ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ಪ್ರಶ್ನಿಸಿ ಎಡಿಎ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಒಂದು ವಾರದೊಳಗೆ ಪ್ರತಿಕ್ರಿಯಿಸಲು ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಲವಕುಶ್ ಮಿಶ್ರಾ ಪತ್ನಿ ಸುಪ್ರಿಯಾ ಹೆಸರಿನಲ್ಲಿ ನೋಂದಾಯಿಸಲಾಗಿರುವ ಆಸ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕುರಿತು ನೋಟಿಸ್ ಜಾರಿಗೊಳಿಸಿದ್ದು, ಇದರಲ್ಲಿ ಅವರು ಸರಿಯಾಗಿ ಅನುಮೋದಿತ ಕಟ್ಟಡ ಯೋಜನೆಯನ್ನು ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದೆ. ಈ ಕುರಿತು ಕಟ್ಟಡ ಮಾಲೀಕರು ಒಂದು ವಾರದೊಳಗೆ ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ರಾಮ ಮಂದಿರ ದೇಣಿಗೆ ಕಳವು: 1 ರಿಂದ 20 ಲಕ್ಷ ರುಪಾಯಿವರೆಗೆ ದೋಚಿದ ಸಿಬ್ಬಂದಿ

ಅಯೋಧ್ಯೆ ರಾಮ ಮಂದಿರದ ಹಣ ದುರುಪಯೋಗಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳಲ್ಲಿ ಒಬ್ಬರಾದ ಲವಕುಶ್ ಮಿಶ್ರಾ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಈ ನೋಟಿಸ್ ಜಾರಿ ಮಾಡಿದೆ.

ನಿಗದಿತ ಕಟ್ಟಡ ನಿಯಮಗಳಿಗೆ ಅನುಸಾರವಾಗಿ ನಿರ್ಮಾಣ ಕಾರ್ಯ ನಡೆಸಲಾಗುತ್ತಿಲ್ಲ ಎಂದು ಕಂಡುಕೊಂಡಿರುವ ಎಡಿಎ ಅಧಿಕಾರಿಗಳು, ಸುಪ್ರಿಯಾ ಹೆಸರಿನಲ್ಲಿ ಕಟ್ಟಡ ನಕ್ಷೆಯನ್ನು ಮಂಜೂರು ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ಅನುಮೋದನೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.

ಒಂದು ವಾರದೊಳಗೆ ಇದಕ್ಕೆ ಪ್ರತಿಕ್ರಿಯಿಸದೇ ಇದ್ದಾರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಅಧಿಕಾರಿಗಳು ನಿರ್ಮಾಣ ಕಾರ್ಯ ಅನಧಿಕೃತವಾಗಿದೆ ಎಂದು ಕಂಡುಬಂದರೆ ಕೂಡಲೇ ಕೆಡವುದಾಗಿ ತಿಳಿಸಿದ್ದಾರೆ.

ರಾಮ ಮಂದಿರ ಕಚೇರಿಯಲ್ಲಿ ಲವಕುಶ್ ಮಿಶ್ರಾ ಅವರು ಕಾರ್ಯ ನಿರ್ವಹಿಸುತ್ತಿದ್ದಾಗ ಅಂದರೆ 2025ರ ಅಕ್ಟೋಬರ್ 16ರಂದು ಅಯೋಧ್ಯಾ ಜಿಲ್ಲೆಯ ಸೊಹಾವಾಲ್ ತಹಸಿಲ್‌ನ ಮಂಗ್ಸಿ ಪರಗಣ ಪ್ರದೇಶದಲ್ಲಿ ಭೂಮಿಯನ್ನು ಖರೀದಿ ಮಾಡಿ ಅದನ್ನು ಪತ್ನಿ ಸುಪ್ರಿಯಾ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದರು.

ಕಮಲ್ ಸ್ವರೂಪ್ ಸಿಂಗ್ ಅವರಿಂದ 8.8 ಲಕ್ಷ ರೂ.ಗಳಿಗೆ ಈ ಭೂಮಿಯನ್ನು ಖರೀದಿಸಲಾಗಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 25 ಲಕ್ಷ ರೂ. ಗಳಾಗಿವೆ. ಇದರಲ್ಲಿ ಈಗ 1,000 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲಾಗುತ್ತಿದ್ದು, ರಚನೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಮೃತದೇಹದಿಂದ ಮೆದುಳು, ಹೃದಯ ಸೇರಿ ಹಲವು ಅಂಗಾಂಗ ನಾಪತ್ತೆ!

ಅಯೋಧ್ಯಾ ರಾಮ ಮಂದಿರದ ಕಾಣಿಕೆ ಹಣ ಎಣಿಸುವ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದ ಲವಕುಶ್ ಮಿಶ್ರಾ ಅವರ ಮಾಸಿಕ ಸಂಬಳ 12,000 ರಿಂದ 15,000 ರೂ. ಗಳಾಗಿವೆ. ಹೀಗಿರುವಾಗ ಲಕ್ಷಾಂತರ ಮೌಲ್ಯದ ಈ ಆಸ್ತಿಯನ್ನು ಅವರು ಹೇಗೆ ಖರೀದಿ ಮಾಡಿದ್ದಾರೆ ಎನ್ನುವ ಕುರಿತು ಕೂಡ ವಿಚಾರಣೆ ನಡೆಯುತ್ತಿದೆ. ಇದಕ್ಕಾಗಿ ಮಿಶ್ರಾ ಅವರ ತಂದೆ ಬಚ್ಚು ಲಾಲ್ ಮಿಶ್ರಾ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author