ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ಮೃತದೇಹದಿಂದ ಮೆದುಳು, ಹೃದಯ ಸೇರಿ ಹಲವು ಅಂಗಾಂಗ ನಾಪತ್ತೆ!
ವೆನೆಜುವೆಲಾದಲ್ಲಿ ಮೃತಪಟ್ಟ ಉತ್ತರ ಪ್ರದೇಶದ 33 ವರ್ಷದ ಭಾರತೀಯ ನಾವಿಕ ರಾಕೇಶ್ ಚೌಹಾಣ್ ಅವರ ಮೃತದೇಹ ಭಾರತಕ್ಕೆ ಬಂದ ಬಳಿಕ ನಡೆದ ಮರು-ಮರಣೋತ್ತರ ಪರೀಕ್ಷೆಯಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿ ಪ್ರಮುಖ ಆಂತರಿಕ ಅಂಗಾಂಗಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಧಿಕೃತ ಆಟೋಪ್ಸಿ ವರದಿ ನೀಡದಿರುವುದು ಪ್ರಕರಣವನ್ನು ಮತ್ತಷ್ಟು ಅನುಮಾನಾಸ್ಪದವಾಗಿಸಿದ್ದು, ಮೃತರ ಕುಟುಂಬ ಹಾಗೂ ಭಾರತೀಯ ನಾವಿಕರ ಒಕ್ಕೂಟವು ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯದಿಂದ ಸಮಗ್ರ ತನಿಖೆಗೆ ಆಗ್ರಹಿಸಿದೆ.
ಮೃತ ಭಾರತೀಯ ನಾವಿಕ ರಾಕೇಶ್ ಚೌಹಾಣ್ -
ಲಖನೌ, ಜು. 1: ವೆನೆಜುವೆಲಾದಲ್ಲಿ ಮೇಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ 33 ವರ್ಷದ ಭಾರತೀಯ ನಾವಿಕ ರಾಕೇಶ್ ಚೌಹಾಣ್ (Rakesh Chauhan) ಅವರ ಸಾವು ಇದೀಗ ಭಾರಿ ತಿರುವು ಪಡೆದಿದೆ. ಉತ್ತರ ಪ್ರದೇಶದ ದೇವರಿಯಾ ಮೂಲದ ಈ ನಾವಿಕನ ಮೃತದೇಹ ಸ್ವದೇಶಕ್ಕೆ ಮರಳಿದ ಬಳಿಕ ನಡೆಸಿದ ಮರು-ಮರಣೋತ್ತರ ಪರೀಕ್ಷೆಯಲ್ಲಿ ಮೆದುಳು, ಹೃದಯ ಮತ್ತು ಶ್ವಾಸಕೋಶ ಸೇರಿ ಎಲ್ಲ ಪ್ರಮುಖ ಆಂತರಿಕ ಅಂಗಾಗಗಳು ನಾಪತ್ತೆಯಾಗಿರುವುದು ಬಯಲಾಗಿದೆ. ಈ ಭಯಾನಕ ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತೀಯ ನಾವಿಕರ ಒಕ್ಕೂಟ (Federation of Seafarers' Unions of India) ಸದಸ್ಯರು ಮತ್ತು ಮೃತರ ಕುಟುಂಬಸ್ಥರು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಮೃತ ರಾಕೇಶ್ ಅವರ ಮೃತದೇಹವನ್ನು ವೆನೆಜುವೆಲಾ ಅಧಿಕಾರಿಗಳು ಯಾವುದೇ ಅಧಿಕೃತ ಆಟೋಪ್ಸಿ ವರದಿ ಅಥವಾ ವಿವರಗಳಿಲ್ಲದೆ ಭಾರತಕ್ಕೆ ಕಳುಹಿಸಿದ್ದರು. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ದೇವರಿಯಾದಲ್ಲಿ ದ್ವಿತೀಯ ಮರಣೋತ್ತರ ಪರೀಕ್ಷೆ ನಡೆಸಿದರು. ಆ ವರದಿಯಲ್ಲಿ ವೈದ್ಯರು ಬೆಚ್ಚಿಬೀಳುವ ಸತ್ಯವನ್ನು ಬಹಿರಂಗಪಡಿಸಿದ್ದು, ದೇಹದಲ್ಲಿ ಒಂದೇ ಒಂದು ಪ್ರಮುಖ ಆಂತರಿಕ ಅಂಗವೂ ಉಳಿದಿಲ್ಲ ಎಂದಿದ್ದಾರೆ. ಮೆದುಳು, ಹೃದಯ, ಶ್ವಾಸಕೋಶಗಳು, ಲಿವರ್, ಮೂತ್ರಪಿಂಡಗಳು, ಜಠರ ಮತ್ತು ಕರುಳುಗಳು ಸಂಪೂರ್ಣವಾಗಿ ನಾಪತ್ತೆಯಾಗಿವೆ. ಶವದ ಕುತ್ತಿಗೆಯಿಂದ ಕೆಳಭಾಗದವರೆಗೆ 22 ಹೊಲಿಗೆಗಳು ಹಾಗೂ ಕಿವಿಯ ಹಿಂಭಾಗದಲ್ಲಿ 21 ಹೊಲಿಗೆಗಳನ್ನು ಹಾಕಲಾಗಿತ್ತು. ಎಲ್ಲ ಅಂಗಾಗಗಳು ಕಾಣೆಯಾಗಿದ್ದರಿಂದ ಹಾಗೂ ದೇಹವನ್ನು ಒಂದು ತಿಂಗಳು ಫ್ರೀಜರ್‌ನಲ್ಲಿಟ್ಟಿದ್ದರಿಂದ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ದಪ್ಪಗಿದ್ದಾಳೆ ಎಂದು ಹೆಂಡತಿಯನ್ನೇ ಕತ್ತು ಹಿಸುಕಿ ಕೊಂದ ಪಾಪಿ ಪತಿ!
ರಾಕೇಶ್ 2025ರ ನವೆಂಬರ್ನಲ್ಲಿ ಎಕ್ಸ್‌ಫಿನಿಟಿ ಕಂಪನಿ ಮೂಲಕ ಮರ್ಚೆಂಟ್ ನೇವಿ ಹಡಗಿನ ಸಿಬ್ಬಂದಿಯಾಗಿ ತೆರಳಿದ್ದರು. ಕಂಪನಿಯು ಆರಂಭದಲ್ಲಿ "ರಾಕೇಶ್ ಹಡಗಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ" ಎಂದು ತಿಳಿಸಿ, ನಂತರ ಸಾವನ್ನಪ್ಪಿರುವುದಾಗಿ ಹೇಳಿತ್ತು. ಜೂನ್ 4ರಂದು ಸುಮಾರು ಒಂದು ತಿಂಗಳ ನಂತರ ಮೃತದೇಹ ಮನೆಗೆ ತಲುಪಿತು. ಸಾಮಾನ್ಯವಾಗಿ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ತಪಾಸಣೆಗಾಗಿ ಕೆಲವು ಅಂಗಗಳನ್ನು ತೆಗೆಯಲಾಗುತ್ತದೆ. ಆದರೆ, ವೆನೆಜುವೆಲಾ ಸರ್ಕಾರವಾಗಲಿ ಅಥವಾ ಕಂಪನಿಯಾಗಲಿ ಯಾವುದೇ ವರದಿ ನೀಡದೆ ಇರುವುದು ಭಾರಿ ಅನುಮಾನ ಮೂಡಿಸಿದೆ.
ವಿದೇಶದಲ್ಲಿ ಉದ್ಯೋಗ ಮಾಡುವ ಭಾರತೀಯ ನಾವಿಕರು ಇಂತಹ ಅಮಾನವೀಯ ಸ್ಥಿತಿಗೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಮಾನವ ಅಂಗಾಂಗ ದಂಧೆಯ ಶಂಕೆಯೂ ಈ ಪ್ರಕರಣದಲ್ಲಿ ವ್ಯಕ್ತವಾಗಿದೆ. ಹೀಗಾಗಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಕ್ಷಣ ಹಸ್ತಕ್ಷೇಪ ಮಾಡಿ ಈ ಕ್ರೂರ ಘಟನೆಯ ಸತ್ಯಾಸತ್ಯತೆಯನ್ನು ಹೊರತರಬೇಕು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ಕೊಡಿಸಬೇಕೆಂದು ಒಕ್ಕೂಟ ತೀವ್ರವಾಗಿ ಆಗ್ರಹಿಸಿದೆ.