2 ಗುಂಪುಗಳ ನಡುವೆ ಮಾರಾಮರಿ; ಗುಂಡು ತಗುಲಿ ನಿವೃತ್ತ ಬ್ರಿಗೇಡಿಯರ್ ಸಾವು
Retired Brigadier killed: ಬೆಳಗ್ಗಿನ ವಾಕಿಂಗ್ ವೇಳೆ 70 ವರ್ಷದ ನಿವೃತ್ತ ಸೇನಾ ಬ್ರಿಗೇಡಿಯರ್ ಒಬ್ಬರು ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾರೆ. ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಅವರಿಗೆ ಗುಂಡು ತಗುಲಿತು. ರಾತ್ರಿ ನೈಟ್‌ಕ್ಲಬ್‌ನೊಳಗೆ ನಡೆದ ವಾಗ್ವಾದದಿಂದ ಈ ಘರ್ಷಣೆ ಉಂಟಾಗಿದೆ.
ಗುಂಡು ತಗುಲಿ ಮೃತಪಟ್ಟ ನಿವೃತ್ತ ಬ್ರಿಗೇಡಿಯರ್ ಜೋಶಿ (ಸಂಗ್ರಹ ಚಿತ್ರ) -
ಡೆಹ್ರಾಡೂನ್, ಮಾ. 30: ಬೆಳಗ್ಗಿನ ವಾಕಿಂಗ್ ವೇಳೆ 70 ವರ್ಷದ ನಿವೃತ್ತ ಸೇನಾ ಬ್ರಿಗೇಡಿಯರ್ ಒಬ್ಬರು ಗುಂಡು ತಗುಲಿ ಮೃತಪಟ್ಟಿದ್ದಾರೆ. ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನಲ್ಲಿ ಘಟನೆ ನಡೆದಿದೆ. ನೈಟ್‌ಕ್ಲಬ್‌ನಲ್ಲಿ ಡಿಜೆ ಸಂಗೀತಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ತಡರಾತ್ರಿ ನಡೆದ ಜಗಳ ಹೆಚ್ಚಾಗಿ, ಹಿಂಸಾಚಾರಕ್ಕೆ ಕಾರಣವಾಯಿತು (Crime news). ಕೊನೆಗೆ ಇದು ಘಟನೆಯೊಂದಿಗೆ ಸಂಬಂಧವೇ ಇಲ್ಲದ ನಿವೃತ್ತ ಸೇನಾ ಬ್ರಿಗೇಡಿಯರ್ ಸಾವಿಗೆ ಕಾರಣವಾಯ್ತು.
ನಿವೃತ್ತ ಬ್ರಿಗೇಡಿಯರ್ ವಿ.ಕೆ. ಜೋಶಿ ಬೆಳಗ್ಗೆ 6:30ರ ಸುಮಾರಿಗೆ ಸಹಕಾರಿ ಬ್ಯಾಂಕಿನ ಬಳಿ ಬೆಳಗಿನ ನಡಿಗೆಗೆ ಹೋಗಿದ್ದರು. ಈ ವೇಳೆ ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಎರಡು ಗುಂಪುಗಳ ನಡುವೆ ನಡೆದ ಚಕಮಕಿ ವೇಳೆ ಅವರಿಗೆ ಗುಂಡು ತಗುಲಿದೆ. ರಾತ್ರಿ ನೈಟ್‌ಕ್ಲಬ್‌ನೊಳಗೆ ನಡೆದ ವಾಗ್ವಾದದಿಂದ ಈ ಘರ್ಷಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುಷ್ಕರ್ಮಿಗಳ ಗುಂಪು ವಾಹನಗಳಲ್ಲಿ ಪರಸ್ಪರರನ್ನು ಬೆನ್ನಟ್ಟಿ, ಮನಬಂದಂತೆ ಗುಂಡು ಹಾರಿಸಿತು. ಈ ನಡುವೆ ಒಂದು ಗುಂಡು ಬ್ರಿಗೇಡಿಯರ್ ಜೋಶಿಗೆ ತಗುಲಿ ಅವರು ಸ್ಥಳದಲ್ಲೇ ಮೃತಪಟ್ಟರು. ಎರಡೂ ವಾಹನಗಳು ಸ್ಥಳದಿಂದ ಪರಾರಿಯಾಗಿದ್ದವು. ಆದರೆ ಈ ಪೈಕಿ ಟೊಯೋಟಾ ಫಾರ್ಚೂನರ್ ಪ್ರಾಥಮಿಕ ಶಾಲೆಯ ಬಳಿ ಡಿಕ್ಕಿ ಹೊಡೆದಿದೆ. ಫಾರ್ಚೂನರ್ ಅಪಘಾತಕ್ಕೀಡಾದ ನಂತರವೂ ಜಗಳ ಮುಂದುವರಿದಿದೆ.
ಸಾಲದ ಸುಳಿಗೆ ಸಿಲುಕಿದ ಕುಟುಂಬ, ಮೂವರ ಕತ್ತು ಸೀಳಿ ಆತ್ಮಹತ್ಯೆ ಯತ್ನ, ಇಬ್ಬರು ಸಾವು
ಪ್ರತ್ಯಕ್ಷದರ್ಶಿಗಳ ಪ್ರಕಾರ, ಹಿಂಸಾಚಾರವು ರಸ್ತೆಯ ಮೇಲೆ ಆರಂಭವಾಗಿದ್ದಲ್ಲ. ಬದಲಾಗಿ ಜನರಲ್ ಝಡ್ ಕ್ಲಬ್ ಒಳಗೆ ಡಿಜೆ ಸಂಗೀತದ ವಿವಾದಕ್ಕೆ ಸಂಬಂಧಿಸಿದ್ದು. ಕ್ಲಬ್ ಬೆಳಗಿನ ಜಾವದವರೆಗೆ ಕಾರ್ಯ ನಿರ್ವಹಿಸುತ್ತಿತ್ತು. ಅನುಮತಿಸಲಾದ ಸಮಯಕ್ಕಿಂತ ಹೆಚ್ಚಿನ ಸಮಯಕ್ಕೆ ಇದು ತೆರೆದಿತ್ತು. ಈ ಸಂಬಂಧ ರಾಜ್ಯ ಅಬಕಾರಿ ಇಲಾಖೆಯು ನೈಟ್‌ಕ್ಲಬ್‌ಗೆ ನೋಟಿಸ್ ಜಾರಿ ಮಾಡಿದ್ದು, ಬಾರ್ ನಿಗದಿತ ಸಮಯ ಮಿತಿಯನ್ನು ಮೀರಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಈ ಘಟನೆಯು ನೈಟ್‌ಕ್ಲಬ್ ರಾತ್ರಿಯಿಡೀ ಹೇಗೆ ಕಾರ್ಯನಿರ್ವಹಿಸಿತು ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟು ಹಾಕಿತು. ಕ್ಲಬ್‌ನಲ್ಲಿನ ಪ್ರವೇಶ-ನಿರ್ಗಮನ ನಿರ್ವಹಣೆ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ನಡೆದ ಪ್ರಾಥಮಿಕ ತನಿಖೆ ಭಾರಿ ಕಳವಳ ವ್ಯಕ್ತಪಡಿಸಿದೆ. ಕ್ಲಬ್ ಅಗ್ನಿ ಸುರಕ್ಷತಾ ಅನುಮತಿ ಮತ್ತು ಅಬಕಾರಿ ಪರವಾನಗಿಯನ್ನು ಹೇಗೆ ಪಡೆದುಕೊಂಡಿತು ಎಂಬುದು ಕೂಡ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡುತ್ತಿದೆ.
ಈ ಮಧ್ಯೆ ಘರ್ಷಣೆಯಲ್ಲಿ ಭಾಗಿಯಾದ ಸ್ಕಾರ್ಪಿಯೋ ಮತ್ತು ಗುಂಡು ಹಾರಿಸಿದ ವ್ಯಕ್ತಿ ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ಅನೇಕ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬ್ರಿಗೇಡಿಯರ್ ಜೋಶಿ ಅವರ ಪತ್ನಿ, ಪುತ್ರಿ ಮತ್ತು ಒಬ್ಬ ಪುತ್ರ ಡೆಹ್ರಾಡೂನ್‌ನಿಂದ ಹೊರ ವಲಯದಲ್ಲಿ ವಾಸಿಸುತ್ತಿದ್ದಾರೆ. ಜೋಶಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.