ಕೋಲ್ಕತ್ತಾ: ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (Trinamool Congres) ನ ಮಾಜಿ ಶಾಸಕ (Ex MLA) ನಿರ್ಮಲ್ ಘೋಷ್ ಅವರನ್ನು ಬಂಧಿಸಲಾಗಿದೆ. 2024ರಲ್ಲಿ ನಡೆದ ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ, ಕೊಲೆ ಪ್ರಕರಣಕ್ಕೆ (RG Kar medical student case) ಸಂಬಂಧಿಸಿ ಅವರ ವಿರುದ್ಧ ಸಾಕ್ಷ್ಯ ನಾಶ, ಕ್ರಿಮಿನಲ್ ಸಂಚು, ಇಚ್ಛೆಗೆ ವಿರುದ್ಧವಾಗಿ ಕೃತ್ಯ ಎಸಗಲು ಒತ್ತಾಯಿಸಿರುವ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಹಿಳಾ ತರಬೇತಿ ವೈದ್ಯೆಯ ತಂದೆ ನೀಡಿದ ಹೊಸ ದೂರಿನ ಆಧಾರದ ಮೇಲೆ ಸೋಮವಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ತರಬೇತಿ ವೈದ್ಯೆಯ ಅಂತ್ಯಕ್ರಿಯೆಗೆ ಆತುರ ನಡೆಸಿದ ಆರೋಪದಲ್ಲಿ ನಿರ್ಮಲ್ ಘೋಷ್ ಅವರನ್ನು ಗುರುವಾರ ಬಂಧಿಸಲಾಗಿದೆ. ಅವರ ವಿರುದ್ಧ ಒಡಿಶಾದ ಸಂಭಾಲ್‌ಪುರದಲ್ಲಿ ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ ಮತ್ತು ಇಚ್ಛೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಿರುವ ಆರೋಪ ಹೊರಿಸಲಾಗಿದೆ.
ನಿರ್ಮಲ್ ಘೋಷ್ ಪಾಣಿಹಟಿ ಕ್ಷೇತ್ರದ ಶಾಸಕರಾಗಿದ್ದರು. ಈ ಕ್ಷೇತ್ರವನ್ನು ಈಗ ವಿಧಾನಸಭೆಯಲ್ಲಿ ಸಂತ್ರಸ್ತೆಯ ತಾಯಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಿ ರತ್ನ ದೇಬ್ನಾಥ್ ಪ್ರತಿನಿಧಿಸುತ್ತಿದ್ದಾರೆ. 2024ರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಎರಡು ದಿನಗಳ ಬಳಿಕ ಅವರನ್ನು ಬಂಧಿಸಲಾಗಿದೆ.
ಮಗಳ ಶವವನ್ನು ಆತುರಾತುರವಾಗಿ ಅಂತ್ಯಕ್ರಿಯೆ ನಡೆಸಲು ಒತ್ತಾಯಿಸಿದ ಮೂವರಲ್ಲಿ ಘೋಷ್ ಕೂಡ ಸೇರಿದ್ದಾರೆ. ಇವರೊಂದಿಗೆ ಪಾಣಿಹಟಿ ಪುರಸಭೆಯ ಕೌನ್ಸಿಲರ್ ಸೋಮನಾಥ್ ಡೇ ಮತ್ತು ಕುಟುಂಬದ ನೆರೆಹೊರೆಯವರಾದ ಸಂಜೀವ್ ಮುಖರ್ಜಿ ಕೂಡ ಇದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಮೂವರ ಮೇಲ್ವಿಚಾರಣೆಯಲ್ಲಿ ಮಗಳ ಅಂತ್ಯಕ್ರಿಯೆಯನ್ನು ಅನಗತ್ಯವಾಗಿ ಆತುರದಿಂದ ನಡೆಸಲಾಗಿದೆ. ಇದರಿಂದ ಎರಡನೇ ಶವಪರೀಕ್ಷೆಯ ಸಾಧ್ಯತೆಯನ್ನು ತಡೆಯಲು ಮತ್ತು ಸಾಕ್ಷ್ಯ ನಾಶಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪಾಣಿಹಟಿಯಲ್ಲಿ ಭಾನುವಾರ ವೈದ್ಯೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಂತ್ರಸ್ತೆಯ ಅಂತ್ಯಕ್ರಿಯೆಗೆ ಶುಲ್ಕ ಮನ್ನಾ ಮಾಡಲಾಗಿದೆ. ಸಂಬಂಧಿತ ದಾಖಲೆಗಳಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರ ಸಹಿ ಇಲ್ಲದಿರುವುದು ಸೇರಿದಂತೆ ಹಲವು ಪ್ರಶ್ನೆಗಳಿವೆ. ಹೀಗಾಗಿ ಈ ಬಗ್ಗೆ ಹೊಸ ತನಿಖೆ ನಡೆಸಲು ಬ್ಯಾರಕ್‌ಪೋರ್ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಬ್ಯಾರಕ್‌ಪೋರ್ ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿ, ಇದು ಸಿಬಿಐ ತನಿಖೆಯಿಂದ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಹೊಸ ಎಫ್‌ಐಆರ್‌ಗಳು ಮೃತರ ಕುಟುಂಬದ ದೂರುಗಳನ್ನು ಆಧರಿಸಿವೆ ಎಂದು ತಿಳಿಸಿದರು.
ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೋಲ್ಕತ್ತಾ ಪೊಲೀಸರ ವ್ಯಾಪ್ತಿಗೆ ಸೇರಿದ್ದು, ಇದನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈ ಕುರಿತು ಖಾರ್ದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.