ತಿರುವನಂತಪುರಂ, ಜ.30: ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ (Sabarimala gold theft) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡದ ‘ಕಾಂತಾರ’ (Kantara movie) ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಜಯರಾಮ್‌ರನ್ನು (Jayaram) ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಉನ್ನಿಕೃಷ್ಣನ್ ಪೊಟ್ಟಿ 2019ರಲ್ಲಿ ಶಬರಿಮಲೆ ದೇಗುಲದ ಚಿನ್ನದ ಕವಚಗಳನ್ನು ಪೂಜೆಗೆಂದು ಚೆನ್ನೈಗೆ ತೆಗೆದುಕೊಂಡು ಹೋಗಿದ್ದ. ಆತನ ಜತೆ ಜಯರಾಮ್ ದೇಗುಲವೊಂದರಲ್ಲಿ ಕವಚ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದು ವಿಡಿಯೋದಲ್ಲೂ ದಾಖಲಾಗಿತ್ತು. ಹೀಗಾಗಿ, ಪೊಟ್ಟಿ ಜೊತೆ ಹಣದ ವಹಿವಾಟು ನಡೆದಿರುವ ಶಂಕೆಯ ಮೇರೆಗೆ ಜಯರಾಮ್‌ರ ವಿಚಾರಣೆ ನಡೆದಿದೆ.
ಪ್ರಕರಣದಲ್ಲಿ ಬಂಧಿತರಾಗಿದ್ದ, ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿಯ ಇಬ್ಬರು ಆಡಳಿತಾಧಿಕಾರಿಗಳನ್ನು ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು.
ಪೊಟ್ಟಿ ನಿವಾಸಕ್ಕೆ ಇಡಿ ದಾಳಿ
ಶಬರಿಮಲೆ ದೇವಸ್ಥಾನದಲ್ಲಿ ನಡೆದ ಬಹು ಕೋಟಿ ಮೌಲ್ಯದ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ ಪೊಟ್ಟಿ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಮನೆ ಹಾಗೂ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸಗಳ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದರು.
ಸುಮಾರು 10 ಮಂದಿ ಇಡಿ ಅಧಿಕಾರಿಗಳ ತಂಡ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವ ಸಾಧ್ಯತೆ ಇದೆ. ಈ ದಾಳಿ ಬೆಂಗಳೂರು, ಬಳ್ಳಾರಿ ಮತ್ತು ಕೇರಳದ ತಿರುವನಂತಪುರಂ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.
Sabarimala Darshan: ಶಬರಿಮಲೆ ಭಕ್ತರ ಗಮನಕ್ಕೆ; ಪ್ರತಿದಿನ 5 ಸಾವಿರ ಜನರಿಗಷ್ಟೇ ಸ್ಟಾಟ್ ಬುಕ್ಕಿಂಗ್
ಶಬರಿಮಲೆ ಚಿನ್ನ ಕಳವು ಪ್ರಕರಣ
ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಹಾಗೂ ಮುಂಭಾಗದ ದ್ವಾರಪಾಲಕ ಶಿಲ್ಪಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4 ಕಿಲೋಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ಉನ್ನಿಕೃಷ್ಣನ್ ಮೊದಲ ಆರೋಪಿ ಆಗಿದ್ದರೆ, ಶಬರಿಮಲೆ ದೇವಸ್ವಂ ಮಂಡಳಿಯ ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು ಎರಡನೇ ಆರೋಪಿ ಆಗಿದ್ದಾರೆ.
Sabarimala Gold Theft: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇರಳ ಸಚಿವ ಭಾಗಿ; ಬಿಜೆಪಿ ಆರೋಪ
ದ್ವಾರಪಾಲಕ ಮೂರ್ತಿಗಳ ಮೇಲೆ ಚಿನ್ನದ ಎಲೆಕ್ಟ್ರೋಪ್ಲೇಟಿಂಗ್ ಮಾಡಲು ಎಂಬ ನೆಪದಲ್ಲಿ, ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಚಿನ್ನ ಲೇಪಿತ ತಾಮ್ರದ ಹೊದಿಕೆಯನ್ನು ಪೊಟ್ಟಿ ಉನ್ನಿಕೃಷ್ಣನ್ ಪಡೆದಿದ್ದ ಎನ್ನಲಾಗಿದೆ. ಆದರೆ ಈ ಚಿನ್ನವನ್ನು ಅನುಮತಿ ಇಲ್ಲದೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ದೇವಾಲಯಗಳು ಹಾಗೂ ಖಾಸಗಿ ಮನೆಗಳಿಗೆ ಸಾಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ, ಈ ಪೈಕಿ 475 ಗ್ರಾಂ ಚಿನ್ನವನ್ನು ಬಳ್ಳಾರಿಯ ಜುವೆಲರ್ ಗೋವರ್ಧನ್ ಅನ್ನೋರಿಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪವೂ ಇದೆ. ಈ ಚಿನ್ನ ಕಳವು ಮತ್ತು ಮಾರಾಟಕ್ಕೆ ಮುರಾರಿ ಬಾಬು ಸಹಾಯ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
2019ರ ತನಕ ಪೊಟ್ಟಿ ಉನ್ನಿಕೃಷ್ಣನ್ ಶಬರಿಮಲೆಯಲ್ಲಿ ವಿಐಪಿ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡುವ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ಮೂಲಕ ಹಲವು ಪ್ರಭಾವಿಗಳೊಂದಿಗೆ ಸಂಪರ್ಕ ಸಾಧಿಸಿ, ತನ್ನ ಪ್ರಭಾವ ಬಳಸಿ ಅಕ್ರಮ ಚಟುವಟಿಕೆಗಳನ್ನು ನಡೆಸಿದ್ದಾನೆ ಎಂಬ ಆರೋಪವೂ ತನಿಖೆಯ ಭಾಗವಾಗಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಹಣ ಶುದ್ಧೀಕರಣ ತಡೆ ಕಾಯ್ದೆ (PMLA) ಅಡಿಯಲ್ಲಿ ಕೊಚ್ಚಿ ಘಟಕದಲ್ಲಿ ECIR ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಈ ಹಿಂದೆ ಈ ಪ್ರಕರಣದ ತನಿಖೆಯನ್ನು ಕೇರಳ ವಿಶೇಷ ತನಿಖಾ ತಂಡ (SIT) ನಡೆಸಿದ್ದು, ನಂತರ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡಿದೆ.
ಈ ಪ್ರಕರಣದ ಭಾಗವಾಗಿ, ಬಳ್ಳಾರಿಯಲ್ಲಿ ರೊದ್ದಂ ಜ್ಯುವೆಲರ್ ಮಾಲೀಕ ಗೋವರ್ಧನ್ ಅವರ ಅಂಗಡಿಗೆ ಇಡಿ ತಂಡ ದಾಳಿ ನಡೆಸಿದೆ. ನಾಲ್ಕೂವರೆ ಕಿಲೋಗ್ರಾಂ ಚಿನ್ನ ನಾಪತ್ತೆ ಸಂಬಂಧಿಸಿದಂತೆ ಈ ಶೋಧ ನಡೆಯುತ್ತಿದೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್ ಜೊತೆ ಸೇರಿ ಚಿನ್ನದ ದ್ವಾರ ಬಾಗಿಲು ನಿರ್ಮಾಣದಲ್ಲಿ ಗೋವರ್ಧನ್ ಪಾತ್ರವಿದೆ ಎನ್ನಲಾಗಿದೆ. ಈಗಾಗಲೇ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದು, ಇತ್ತೀಚೆಗೆ ಅವರ ಅಂಗಡಿ ಮತ್ತು ಮನೆ ಮೇಲೆ ಸಿಆರ್ಪಿಎಫ್ ಭದ್ರತೆಯೊಂದಿಗೆ ಇಡಿ ಅಧಿಕಾರಿಗಳು ಇಂಚಿಂಚಾಗಿ ತಪಾಸಣೆ ನಡೆಸಿದ್ದಾರೆ. ಜ್ಯುವೆಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಕರೆಸಲಾಗಿತ್ತು.