Sabarimala Darshan: ಶಬರಿಮಲೆ ಭಕ್ತರ ಗಮನಕ್ಕೆ; ಪ್ರತಿದಿನ 5 ಸಾವಿರ ಜನರಿಗಷ್ಟೇ ಸ್ಟಾಟ್ ಬುಕ್ಕಿಂಗ್
ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಇದರಿಂದ ದೇವಾಲಯ ಪರಿಸರದಲ್ಲಿ ಭಾರಿ ಜನ ಸಂದಣಿ ಕಂಡು ಬರುತ್ತಿದೆ. ಇದೀಗ ಜನಸಂದಣಿ ನಿಯಂತ್ರಿಸಲು ಟ್ರಾವಂಕೂರ್ ದೇವಸ್ವಂ ಬೋರ್ಡ್ ಮುಂದಾಗಿದ್ದು, ನವೆಂಬರ್ 20ರಿಂದ ಪ್ರತಿದಿನ 5,000 ಮಂದಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗುತ್ತಿದೆ ಎಂದು ಘೋಷಿಸಿದೆ.
ಶಬರಿಮಲೆಯಲ್ಲಿ ಜನಸಂದಣಿ (ಸಂಗ್ರಹ ಚಿತ್ರ). -
ತಿರುವನಂತಪುರಂ, ನ. 20: ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆ (Sabarimala) ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ದೇಶಾದ್ಯಂತದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ (Sabarimala Darshan). ಇದರಿಂದ ದೇವಾಲಯ ಪರಿಸರದಲ್ಲಿ ಭಾರಿ ಜನ ಸಂದಣಿ ಕಂಡು ಬರುತ್ತಿದ್ದು, ನೂಕು ನುಗ್ಗಲು ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಜನಸಂದಣಿ ನಿಯಂತ್ರಿಸಲು ಟ್ರಾವಂಕೂರ್ ದೇವಸ್ವಂ ಬೋರ್ಡ್ (Travancore Devaswom Board) ಮುಂದಾಗಿದ್ದು, ನವೆಂಬರ್ 20ರಿಂದ ಪ್ರತಿದಿನ 5,000 ಮಂದಿಗೆ ಮಾತ್ರ ಸ್ಪಾಟ್ ಬುಕ್ಕಿಂಗ್‌ಗೆ (ಸ್ಥಳದಲ್ಲೇ ಬುಕ್ಕಿಂಗ್) ಅವಕಾಶ ನೀಡಲಾಗುತ್ತಿದೆ ಎಂದು ಘೋಷಿಸಿದೆ. ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸಲಾಗಿದೆ ಎಂದು ಟಿಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆ ನಿಳಕ್ಕಲ್ ಮತ್ತು ವಂಡಿಪೆರಿಯಾರ್ ಕೇಂದ್ರದಲ್ಲಿ ಮಾತ್ರ ಇರಲಿದೆ. ಪಂಪ, ಎರುಮೆಲಿ ಮತ್ತು ಚೆಂಗನೂರ್‌ನಲ್ಲಿ ತಾತ್ಕಾಲಿಕವಾಗಿ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಬಂಧ ನವೆಂಬರ್ 24ರವರೆಗೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಶಬರಿಮಲೆಯಲ್ಲಿ ಕಂಡು ಬಂದ ಜನಸಂದಣಿ:
🚨 Sabarimala 2025: When Devotion Meets a Dangerous Crowd Surge
— Narayan Kulkarni (@narayankulkarni) November 19, 2025
What happened at Sabarimala this week isn’t just a “big crowd.”
It’s a public-safety warning that Kerala can’t afford to ignore.
In just 48 hours:
~2 lakh devotees reached the hill
Queues stretched 12+ hours… pic.twitter.com/UKX1tpeTGb
ಶಬರಿಮಲೆ ದರ್ಶನಕ್ಕಾಗಿ ಭಕ್ತರು ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ಬುಕ್ ಮಾಡುವಂತೆ ಟಿಡಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ನವೆಂಬರ್ 17ರಂದು ದೇವಾಲಯದ ಬಾಗಿಲು ತರೆದ 48 ಗಂಟೆಗಳಲ್ಲಿಸುಮಾರು 2 ಲಕ್ಷದಷ್ಟು ಭಕ್ತರು ಭೇಟಿ ನೀಡಿ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕಾಗಿ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠದ ಜಸ್ಟಿಸ್ ರಾಜ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಟಿಡಿಬಿಯ ಕ್ರಮವನ್ನು ಟೀಕಿಸಿದ್ದಾರೆ.
ಮಂಡಲ-ಮಕರವಿಳಕ್ಕು ಋತುವಿನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶವಿದ್ದು, ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಪ್ರಸ್ತುತ ಇಷ್ಟು ಭಕ್ತರನ್ನು ನಿಭಾಯಿಸಲು ವ್ಯವಸ್ಥೆಗಳು ಸಾಕಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನವೆಂಬರ್ 19ರಂದು ಕೇರಳ ಹೈಕೋರ್ಟ್ ಶಬರಿಮಲೆ ಸನ್ನಿಧಾನಂನಲ್ಲಿನ ತೀರಾ ಅಸಮರ್ಪಕ ಸೌಲಭ್ಯಗಳಿಗಾಗಿ ಟಿಡಿಬಿಯನ್ನು ಟೀಕಿಸಿದೆ. ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ವ್ಯಾಪಕ ಸುಧಾರಣೆಗೆ ಆದೇಶಿಸಿದೆ.
ಹೈಕೋರ್ಟ್ ಹೇಳಿದ್ದೇನು?
ಸನ್ನಿಧಾನಂ ಫ್ಲೈಓವರ್ ಉದ್ದಕ್ಕೂ ಉದ್ದನೆಯ ಸರದಿ, ಮೂಲಭೂತ ಸೌಕರ್ಯ ಮತ್ತು ಕುಡಿಯುವ ನೀರಿನ ಕೊರತೆಯನ್ನು ವಿವರಿಸುವ 2 ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಈ ನಿರ್ದೇಶನಗಳನ್ನು ನೀಡಲಾಗಿದೆ.
ಅರ್ಜಿದಾರರಲ್ಲಿ ಒಬ್ಬರಾದ ದೀಪಕ್ ಪ್ರವೀಣ್ ಮಾವಾನಿ, ʼʼ2025ರ ಮೇ 16ರ ಬೆಳಗ್ಗೆ 6 ಗಂಟೆಗೆ ಅಯ್ಯಪ್ಪ ದೇವಸ್ಥಾನದ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿದ್ದೆ. ಆದರೆ ದರ್ಶನ ಪಡೆಯಲು ಸುಮಾರು ಮೂರುವರೆ ಗಂಟೆಗಳ ಕಾಲ ಕಾಯಬೇಕಾಯಿತುʼʼ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಜನಸಂದಣಿಯಲ್ಲಿ ನಿರಂತರ ತಳ್ಳಾಟ ಕಂಡು ಬಂದಿದ್ದಾಗಿ ವಿವರಿಸಿದ್ದರು. ʼʼಫ್ಲೈಓವರ್‌ನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳಂತಹ ಅಗತ್ಯ ಸೌಲಭ್ಯಗಳ ಅನುಪಸ್ಥಿತಿ ಕಾಡಿದೆʼʼ ಎಂದೂ ಹೇಳಿದ್ದರು. ಮತ್ತೊಬ್ಬ ಅರ್ಜಿದಾರ ಕೆ.ಕೆ. ರಾಜೀವ್ ಕುಮಾರ್, ʼʼವಸತಿ ಸೌಕರ್ಯಕ್ಕಾಗಿ 3 ಗಂಟೆಗೂ ಹೆಚ್ಚು ಕಾಲ ಸರದಿಯಲ್ಲಿ ನಿಂತಿದ್ದರೂ ಕೊಠಡಿ ಸಿಗಲಿಲ್ಲ'' ಎಂದು ಆರೋಪಿಸಿದ್ದರು.
Sabarimala Temple: ಬಾಗಿಲು ತೆರೆದ ಶಬರಿಮಲೆ ಶ್ರೀ ಅಯ್ಯಪ್ಪ ಗರ್ಭಗುಡಿ, ಮಂಡಲ- ಮಕರವಿಳಕ್ಕು ಉತ್ಸವ ಆರಂಭ
ನವೆಂಬರ್ 17ರಂದು ದೇವಾಲಯ ತೆರೆದ 2 ದಿನಗಳ ಒಳಗೆ ಸುಮಾರು 2 ಲಕ್ಷ ಯಾತ್ರಿಕರು ಆಗಮಿಸಿದ್ದರಿಂದ ಪರಿಸ್ಥಿತಿಯ ನಿಯಂತ್ರಣ ತಪ್ಪಿತು ಎಂದು ನ್ಯಾಯಮೂರ್ತಿ ರಾಜ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.