ಹೈದರಾಬಾದ್, ಆ. 20: ತೆಲಂಗಾಣದ (Telangana) ನಲ್ಗೊಂಡದಲ್ಲಿ ನಡೆದ 48 ವರ್ಷದ ಶಾಲಾ ಪ್ರಾಂಶುಪಾಲರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹಣ ಮತ್ತು ಐಷಾರಾಮಿ ಜೀವನಶೈಲಿಗಾಗಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮತ್ತು ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ ಆಗಸ್ಟ್ 12ರ ಬೆಳಗ್ಗೆ ತಮ್ಮ ನಿವಾಸದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು (Crime News). ಅವರಿಗೆ 27 ಬಾರಿ ಇರಿದು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಭಾರಿ ಸಂಚಲನ ಮೂಡಿಸಿತ್ತು. ಇಷ್ಟು ಕ್ರೂರವಾಗಿ ಕೊಲೆ ಮಾಡಿದ್ದು ಯಾರೆನ್ನುವ ಪ್ರಶ್ನೆ ಮೂಡಿತ್ತು.
ಫೋನ್ ಕರೆಗಳಿಗೆ ಆಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೈದರಾಬಾದ್‌ನಲ್ಲಿದ್ದ ಆಕೆಯ ಪತಿ ನೆರೆಹೊರೆಯವರಿಗೆ ತಿಳಿಸಿದ್ದಾರೆ. ಕೂಡಲೇ ಅವರು ಮನೆಗೆ ಹೋಗಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಪೊಲೀಸರು ಐದು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚುಗಳು, ತಾಂತ್ರಿಕ ದತ್ತಾಂಶಗಳು ಮತ್ತು ಶಂಕಿತರ ಚಲನವಲನಗಳನ್ನು ಪರಿಶೀಲಿಸಿ 80ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದರು. ರೂಪಾ ರೆಡ್ಡಿ ಅವರ ಫೋನ್ ಸ್ವಿಚ್ ಆಫ್ ಆಗುವ ಮುನ್ನ ತಮ್ಮ ಅತ್ತೆಗೆ ಕರೆ ಮಾಡಿದ್ದಾಗ ಬಾಬು ಎಂಬ ಪದವನ್ನು ಬಳಸಿದ್ದರು ಎಂಬುದನ್ನು ಪತ್ತೆಹಚ್ಚಿದ ತನಿಖಾಧಿಕಾರಿಗಳಿಗೆ ಈ ಪ್ರಕರಣದಲ್ಲಿ ಪ್ರಮುಖ ಸುಳಿವು ಸಿಕ್ಕಿತು.
ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ಬಳಕೆ
ಆಕೆ ಫೋನ್‌ನಲ್ಲಿ ಮಾತನಾಡುವಾಗ ಹೇಳಿದ ಬಾಬು ಎಂಬ ಕೊನೆಯ ಪದ ಯಾರನ್ನು ಉಲ್ಲೇಖಿಸಿರಬಹುದು ಎಂದು ಶಂಕಿಸಿದ ಪೊಲೀಸರು ಹೆಚ್ಚಿನ ತನಿಖೆ ನಡೆಸಿದರು. ಈ ವೇಳೆ ಶಾಲಾ ವಿದ್ಯಾರ್ಥಿಗಳತ್ತ ಸಂಶಯ ಉಂಟಾಯಿತು ಎಂದು ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದರು.
ನಂತರ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಿಸಿದರು. ಶಾಲೆಗೆ ಗೈರಾದ ಐವರು 10ನೇ ತರಗತಿಯ ವಿದ್ಯಾರ್ಥಿಗಳನ್ನು ತನಿಖೆ ನಡೆಸಲಾಯಿತು. ಅವರಲ್ಲಿ ಇಬ್ಬರು ಕೆಲವು ದಿನಗಳಿಂದ ಸಾಕಷ್ಟು ಹಣ ಖರ್ಚು ಮಾಡಿ ಪಾರ್ಟಿ ಮಾಡುತ್ತಾರೆ ಎಂದು ತಿಳಿದುಬಂತು. ಬುಧವಾರ (ಆ. 19) ಬೆಳಗ್ಗೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಅವರು ರೂಪಾ ರೆಡ್ಡಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ಪವಾರ್ ಹೇಳಿದರು.
ಬ್ಯಾಗ್‌ಗಳಲ್ಲಿ ನಗದು ಮತ್ತು ಮೊಬೈಲ್ ಫೋನ್ ಸಿಕ್ಕ ನಂತರ ಆರೋಪಿಗಳನ್ನು ರೂಪಾ ರೆಡ್ಡಿ ಈ ಹಿಂದೆ ಗದರಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಅವರು ಈ ವಿಷಯವನ್ನು ಆರೋಪಿಗಳ ಪೋಷಕರಿಗೆ ತಿಳಿಸಿದ್ದರು. ನಂತರ ಅವರನ್ನು ಹಾಸ್ಟೆಲ್‌ನಿಂದ ತೆಗೆದುಹಾಕಿ, ಡೇ-ಸ್ಕಾಲರ್ಸ್ ಆಗಿ ಬದಲಾಯಿಸಲಾಗಿತ್ತು. ಈ ವಿಚಾರವು ಪ್ರಾಂಶುಪಾಲರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಗಳು, ಕೊಲೆ ಮಾಡುವ ಮುನ್ನ ಐದು ದಿನಗಳ ಕಾಲ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಆಕೆಯ ಮನೆಯನ್ನು ಪರಿಶೀಲನೆ ನಡೆಸಿದ್ದರು. ಅವರು ತಮ್ಮ ಗುರುತನ್ನು ಮರೆಮಾಚಲು ಚಾಕು ಮತ್ತು ಗ್ಲೌಸ್‌ಗಳನ್ನು ಖರೀದಿಸಿದ್ದರು. ಇದರಿಂದಾಗಿ ಆರಂಭದಲ್ಲಿ ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆಗಳು ಸಿಗಲಿಲ್ಲ.
ಮೂತ್ರ ಕುಡಿಸಿದ ಸಹಪಾಠಿ: ದೂರು ನೀಡಿದ ವಿದ್ಯಾರ್ಥಿನಿಯರಿಗೆ ಚಾಕ್ಲೆಟ್ ತಿನ್ನಿ ಎಂದ ಪ್ರಾಂಶುಪಾಲ
ಕೊಲೆಯಾದ ದಿನದಂದು, ವಿದ್ಯಾರ್ಥಿಗಳಲ್ಲಿ ಒಬ್ಬ ಮಂಕಿ ಕ್ಯಾಪ್ ಮತ್ತು ಗ್ಲೌಸ್ ಧರಿಸಿ ಮನೆಯೊಳಗೆ ನುಗ್ಗಿದ್ದ. ಬೆಡ್‌ರೂಮ್‌ನಲ್ಲಿ ಇಟ್ಟಿದ್ದ 2.50 ಲಕ್ಷ ರುಪಾಯಿ ಹಣವನ್ನು ತೆಗೆದುಕೊಂಡು ಅವನು ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಆ ಸಮಯದಲ್ಲಿ ಅವನ ಮಂಕಿ ಕ್ಯಾಪ್ ಜಾರಿಬಿದ್ದಿದ್ದರಿಂದ, ರೂಪಾ ರೆಡ್ಡಿ ಅವನನ್ನು ಗುರುತಿಸಿದರು. ತಾನು ಸಿಕ್ಕಿಬೀಳಬಹುದು ಎಂಬ ಭಯದಿಂದ ಆತ ಆಕೆಯನ್ನು ಚಾಕುವಿನಿಂದ 27 ಬಾರಿ ಇರಿದು ಕೊಲೆ ಮಾಡಿದ್ದಾನೆ.
ಕೊಲೆಯ ನಂತರ, ಆರೋಪಿಗಳು ಹಣವನ್ನು ತೆಗೆದುಕೊಂಡು ರಕ್ತದ ಕಲೆಗಳಿದ್ದ ಬಟ್ಟೆಗಳು ಮತ್ತು ಮಂಕಿ ಕ್ಯಾಪ್ ಅನ್ನು ಹೂತುಹಾಕುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು. ಅವರು ಗೋವಾ ಪ್ರವಾಸಕ್ಕೂ ಹೋಗಿದ್ದರು. ಆರೋಪಿಗಳಿಂದ 1.54 ಲಕ್ಷ ರುಪಾಯಿ ನಗದು, ಅವರು ಖರೀದಿಸಿದ್ದ ಒಂದು ಐಫೋನ್ ಮತ್ತು ರೂಪಾ ರೆಡ್ಡಿ ಅವರ ಫೋನ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಬ್ಬರು ತಮ್ಮ ಸಂಚನ್ನು ಕಾರ್ಯಗತಗೊಳಿಸುವ ಮುನ್ನ, ಬೇಗ ಹಣ ಗಳಿಸುವುದು ಹೇಗೆ ಎಂಬುದರ ಕುರಿತು ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಹುಡುಕಾಟ ನಡೆಸಿದ್ದರು.