ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯರ (minor girls) ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಉತ್ತರ ಪ್ರದೇಶದ (uttarpradesh) ಹಾಪುರದಲ್ಲಿ (Hapur City) ನಡೆದಿದೆ. ಕೋಟ್ಲಾ ಮೆವಾಟಿಯಾನ್ ಪ್ರದೇಶದ 45- 50 ವರ್ಷ ವಯಸ್ಸಿನ ಅಯ್ಯೂಬ್ ಮತ್ತು ಇನಾಮ್ ಇಲಾಹಿ ಬಂಧಿತರು. ಪೊಲೀಸರು ಬರುವ ಮುನ್ನವೇ ಇವರಿಗೆ ಸ್ಥಳೀಯರು ಸರಿಯಾಗಿ ಥಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿಡಿಯೊ ರೆಕಾರ್ಡ್ ಮಾಡಿ ಸ್ಥಳೀಯರಿಗೆ ತಿಳಿಸಿದ್ದು, ಬಳಿಕ ಅವರಿಬ್ಬರನ್ನು ಬಂಧಿಸಿ ಸ್ಥಳೀಯರೇ ಸರಿಯಾಗಿ ಥಳಿಸಿದ್ದಾರೆ ಎನ್ನಲಾಗಿದೆ.
ಹಾಪುರ್ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕಂದರ್ ಗೇಟ್ ಪ್ರದೇಶದಲ್ಲಿ ಶುಕ್ರವಾರ ಅಯ್ಯೂಬ್ ಮತ್ತು ಇನಾಮ್ ಇಲಾಹಿ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದ 6 ಮತ್ತು 8 ವರ್ಷ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ರಹಸ್ಯವಾಗಿ ರೆಕಾರ್ಡ್ ಮಾಡಿ ಇತರರಿಗೆ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯರು ಇಬ್ಬರ ಮೇಲೂ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಬ್ಬರು ಕೋಟ್ಲಾ ಮೆವಾಟಿಯಾನ್ ಪ್ರದೇಶದವರು ಎಂದು ತಿಳಿಸಿದ್ದಾರೆ. ಅಯ್ಯೂಬ್ ಮತ್ತು ಇನಾಮ್ ಇಲಾಹಿ ಮಕ್ಕಳಿಗೆ ಮೊದಲು ಆಮಿಷವೊಡ್ಡಿ ಕಿರುಕುಳ ನೀಡಿದರು. ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಅವರನ್ನು ಅನುಚಿತವಾಗಿ ಮುಟ್ಟಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಸುತ್ತಮುತ್ತಲಿನ ಅನೇಕರು ಸ್ಥಳದಲ್ಲಿ ಸೇರಿ ಅವರನ್ನು ಥಳಿಸಿದ್ದಾರೆ. ಘಟನೆಯ ಕುರಿತು ಮೊದಲೇ ವ್ಯಕ್ತಿಯೊಬ್ಬರು ಗೌಪ್ಯವಾಗಿ ವಿಡಿಯೊ ಮಾಡಿದ್ದರು. ಅದನ್ನು ಅಲ್ಲಿದ್ದವರಿಗೆ ದಾಖಲೆಯಾಗಿ ಒಪ್ಪಿಸಿದ್ದಾರೆ.
ಅಯ್ಯೂಬ್ ಮತ್ತು ಇನಾಮ್ ಇಲಾಹಿಯನ್ನು ವಶಕ್ಕೆ ಪಡೆದ ನಗರ ಕೊಟ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದರು. ಮಕ್ಕಳ ಕುಟುಂಬ ಈ ಕುರಿತು ದೂರು ನೀಡಿದೆ. ಹೀಗಾಗಿ ಆರೋಪಿಗಳಿಬ್ಬರನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಮುನೀಶ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.