ಮಧ್ಯಪ್ರದೇಶ: ಪ್ರವಾಸೋದ್ಯಮ ಇಲಾಖೆಯಿಂದ ನಿರ್ವಹಿಸಲ್ಪಡುವ ಕ್ರೂಸ್ ದೋಣಿಯೊಂದು ಗುರುವಾರ ಸಂಜೆ ಮಧ್ಯಪ್ರದೇಶದ (Madhyapradesh) ಭೋಪಾಲ್ (Bhopal) ನ ಜಬಲ್ಪುರದ ಬಾರ್ಗಿ ಅಣೆಕಟ್ಟಿನ (Bargi dam) ಜಲಾಶಯದಲ್ಲಿ ಬಿರುಗಾಳಿಗೆ ಸಿಲುಕಿ ಮುಳುಗಿದೆ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಶುಕ್ರವಾರ ಐದು ಶವಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ಮುಂದುವರೆದಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ಕಳೆದೆರಡು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ನಾಪತ್ತೆಯಾದವರಿಗಾಗಿ ಹುಡುಕಾಡುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, ಪ್ರವಾಸಿಗರಿಗೆ ಲೈಫ್ ಜಾಕೆಟ್‌ಗಳನ್ನು ನೀಡದಿರುವುದು ಸೇರಿದಂತೆ ಸುರಕ್ಷತಾ ಕ್ರಮದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ದೋಣಿಯ ಮೂವರು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಅಲ್ಲದೇ ಮಧ್ಯಪ್ರದೇಶದಾದ್ಯಂತ ಎಲ್ಲಾ ಕ್ರೂಸ್ ಕಾರ್ಯಾಚರಣೆಗಳು, ಮೋಟಾರ್ ಬೋಟ್ ಸೇವೆಗಳು ಮತ್ತು ಜಲ ಕ್ರೀಡೆಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದಾರೆ.
Fact check: ಜಬಲ್ಪುರ ದೋಣಿ ದುರಂತ: ವೈರಲ್ ಆಗಿರುವ ತಾಯಿ, ಮಗುವಿನ ಚಿತ್ರ ನಕಲಿ
ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮೋಹನ್ ಯಾದವ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಪ್ರವಾಸಿಗರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸ್ಥಳೀಯರನ್ನು ಸ್ವಾತಂತ್ರ್ಯ ದಿನದಂದು ಗೌರವಿಸಲಾಗುವುದು. ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ತಡೆಯಲು ಅಪಘಾತದ ಬಗ್ಗೆ ಪ್ರವಾಸೋದ್ಯಮ ಇಲಾಖೆ ತನಿಖೆ ನಡೆಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದುರಂತಕ್ಕೆ ಸಂತಾಪ ಸೂಚಿಸಿದ್ದು, ಮೃತರ ಹತ್ತಿರದ ಸಂಬಂಧಿಕರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮಧ್ಯಪ್ರದೇಶದ ಜಬಲ್ಪುರದಲ್ಲಿ ಉಂಟಾಗಿರುವ ದೋಣಿ ದುರಂತ ಅತ್ಯಂತ ನೋವಿನ ಸಂಗತಿ. ಇದರಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾನು ನನ್ನ ಸಂತಾಪವನ್ನು ಸೂಚಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಜಬಲ್ಪುರ ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ) ಅಂಜುಲ್ ಆಯನ್ ಮಿಶ್ರಾ ಅವರು ಘಟನೆ ಕುರಿತು ಮಾಹಿತಿ ನೀಡಿ, ದೋಣಿಯನ್ನು ಅಣೆಕಟ್ಟಿನ ನೀರಿನಿಂದ ಹೊರತೆಗೆಯಲಾಗಿದ್ದು, ಒಳಗೆ ಯಾರೂ ಪತ್ತೆಯಾಗಿಲ್ಲ. ಇನ್ನೂ ಕಾಣೆಯಾಗಿರುವ ಆರು ಜನರನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಗುರುವಾರ ರಾತ್ರಿ ರಕ್ಷಣಾ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿ ಕ್ಷೇಮ ಸಮಾಚಾರವನ್ನು ವಿಚಾರಿಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದರು.
ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದುರಂತದ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ರಕ್ಷಿಸಲ್ಪಟ್ಟವರಲ್ಲಿ ಒಬ್ಬರಾದ ದೆಹಲಿ ನಿವಾಸಿ ಸಂಗೀತಾ ಕೋರಿ ಅವರು ಹೇಳುವಂತೆ ಹಡಗಿನಲ್ಲಿ ಟಿಕೆಟ್ ಇಲ್ಲದ ಮಕ್ಕಳು ಸೇರಿದಂತೆ ಸುಮಾರು 40 ಜನರು ಇದ್ದರು. ಹವಾಮಾನ ಇದ್ದಕ್ಕಿದ್ದಂತೆ ಬದಲಾದಾಗ ಸುರಕ್ಷಿತ ಪ್ರದೇಶಕ್ಕೆ ಸಾಗುವಂತೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಹಡಗು ಸಿಬ್ಬಂದಿ ನಿರ್ಲಕ್ಷಿಸಿದರು ಎಂದು ಹೇಳಿದ್ದಾರೆ.
ಯಾವ ಪ್ರಯಾಣಿಕರೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಅದನ್ನು ಒಳಗೆ ಎಲ್ಲೋ ಇರಿಸಲಾಗಿತ್ತು. ನೀರು ದೋಣಿಯೊಳಗೆ ಪ್ರವೇಶಿಸಲು ಪ್ರಾರಂಭಿಸಿದಾಗ ಅವರು ಅವುಗಳನ್ನು ವಿತರಿಸಲು ಪ್ರಯತ್ನಿಸಿದರು. ಆದರೆ ಅದು ಭಯ ಮತ್ತು ಜಗಳಕ್ಕೆ ಕಾರಣವಾಯಿತು. ಕೆಲವೇ ಕ್ಷಣಗಳಲ್ಲಿ, ದೋಣಿ ಉರುಳಿತು ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯು ಶುಕ್ರವಾರ ಕ್ರೂಸ್ ಪೈಲಟ್ ಮಹೇಶ್ ಪಟೇಲ್, ಸಹಾಯಕ ಛೋಟೆಲಾಲ್ ಗೊಂಡ್ ಮತ್ತು ಟಿಕೆಟ್ ಕೌಂಟರ್ ಇನ್‌ಚಾರ್ಜ್ ಬ್ರಿಜೇಂದ್ರ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದೆ. ಹೊಟೇಲ್ ಮೈಕಲ್ ರೆಸಾರ್ಟ್ ಮತ್ತು ಬೋಟ್ ಕ್ಲಬ್ ಬಾರ್ಗಿಯ ವ್ಯವಸ್ಥಾಪಕ ಸುನಿಲ್ ಮರಾವಿ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಾದೇಶಿಕ ವ್ಯವಸ್ಥಾಪಕ ಸಂಜಯ್ ಮಲ್ಹೋತ್ರಾ ಅವರನ್ನು ಭೋಪಾಲ್‌ನಲ್ಲಿರುವ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿದ್ದು, ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊನೆಯ ಕ್ಷಣದ ವಿಡಿಯೊ ವೈರಲ್
ದೋಣಿ ಮುಳುಗುವ ಕೆಲವು ಕ್ಷಣಗಳ ಮೊದಲ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಕಿರುಚಾಟಗಳು ಕೇಳಿ ಬರುತ್ತಿದ್ದು, ಲೈಫ್ ಜಾಕೆಟ್‌ಗಳನ್ನು ಅವಸರವಸರವಾಗಿ ವಿತರಿಸುತ್ತಿರುವುದು ಕಂಡು ಬಂದಿದೆ. ಬಾರ್ಗಿ ಅಣೆಕಟ್ಟು ಕ್ರೂಸ್‌ನ ಒಳಗೆ ಚಿತ್ರೀಕರಿಸಿರುವ ಕೊನೆಯ ಕ್ಷಣದ ಈ ವಿಡಿಯೋದಲ್ಲಿ ಸುರಕ್ಷತೆಯನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ.
ವೈರಲ್ ವಿಡಿಯೋ ದೃಶ್ಯದಲ್ಲಿ ನೀರು ಇದ್ದಕ್ಕಿದ್ದಂತೆ ಹಡಗಿನೊಳಗೆ ನುಗ್ಗಲು ಪ್ರಾರಂಭಿಸಿದಾಗ ಪ್ರಯಾಣಿಕರು ಕಿರುಚಾಡುವುದನ್ನು ಕಾಣಬಹುದು. ಚಂಡಮಾರುತದ ನೀರು ಒಳಭಾಗವನ್ನು ತುಂಬುತ್ತಿದ್ದಂತೆ ದೋಣಿ ಅಲ್ಲಾಡುವುದು, ದೋಣಿ ಮುಳುಗಲು ಪ್ರಾರಂಭಿಸಿದಾಗ ಕ್ರೂಸ್ ಸಿಬ್ಬಂದಿ ಬಂಡಲ್ ಮಾಡಿದ ಲೈಫ್ ಜಾಕೆಟ್‌ಗಳನ್ನು ಬಿಚ್ಚಲು ಪರದಾಡುವುದನ್ನು ಕಾಣಬಹುದು.
ಒಳನಾಡಿನ ಹಡಗುಗಳ ಕಾಯ್ದೆ 2021ರ ಅಡಿಯಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ನೌಕಾಯಾನ ಮಾಡುವ ಮೊದಲು ಲೈಫ್ ಜಾಕೆಟ್ ಒದಗಿಸಬೇಕು ಮತ್ತು ಅವುಗಳನ್ನು ಅವರು ಸರಿಯಾಗಿ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಈ ನಿಯಮವನ್ನು ಇಲ್ಲಿ ಉಲ್ಲಂಘಿಸಿರುವುದನ್ನು ವಿಡಿಯೋ ದೃಢಪಡಿಸಿದೆ. ಕೇವಲ 29 ಪ್ರಯಾಣಿಕರಿಗೆ ಮಾತ್ರ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದ್ದರೂ ಕ್ರೂಸ್‌ನಲ್ಲಿ 40 ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬದುಕುಳಿದವರಲ್ಲಿ 72 ವರ್ಷದ ರಿಯಾಜ್ ಹುಸೇನ್ ಸುಮಾರು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿಯೇ ಇದ್ದರು. ದುರಂತದಲ್ಲಿ ಮೃತಪಟ್ಟ ಮರೀನಾ ಮ್ಯಾಸ್ಸಿ ಮತ್ತು ಅವರ ನಾಲ್ಕು ವರ್ಷದ ಮಗ ತ್ರಿಶಾನ್ ಅವರ ಶವಗಳು ಪತ್ತೆಯಾಗಿದ್ದು, ಅವರು ಪರಸ್ಪರ ಬಿಗಿಯಾಗಿ ತಬ್ಬಿಕೊಂಡಿದ್ದರು. ಅವರ ಪತಿ ಪ್ರದೀಪ್ ಮ್ಯಾಸ್ಸಿ ಬದುಕುಳಿದಿದ್ದಾರೆ.
ಜಬಲ್ಪುರ ದೋಣಿ ದುರಂತ: ಒಂಬತ್ತು ಮಂದಿ ನೀರುಪಾಲು, ಎಲ್ಲರ ಕಣ್ಣಾಲಿಗಳು ತುಂಬುವಂತೆ ಮಾಡಿತು ತಾಯಿ, ಮಗುವಿನ ಮೃತದೇಹ
ರಕ್ಷಣಾ ತಂಡಕ್ಕೆ ಸಂಜೆ 6.15ಕ್ಕೆ ವಿಪತ್ತು ಕರೆ ಬಂದಿದ್ದರೂ ಮೊದಲ ತಂಡ ಸಂಜೆ 6.40 ರವರೆಗೆ ಹೊರಡಲು ಸಾಧ್ಯವಾಗಲಿಲ್ಲ. ಅವರ ವಾಹನವು ಚಾಲನೆಗೊಳ್ಳದೆ ವಿಳಂಬವಾಗಿತ್ತು. ಅನಂತರ ಉಪಕರಣಗಳನ್ನು ಮತ್ತೊಂದು ವಾಹನದಲ್ಲಿ ತುಂಬಿಸಬೇಕಾಯಿತು. ಎರಡನೇ ರಕ್ಷಣಾ ತಂಡವು ಸಂಜೆ 7 ಗಂಟೆಯ ಸುಮಾರಿಗೆ ಹೊರಟಿತು. ಇದರಿಂದಾಗಿಯೇ ಹೆಚ್ಚಿನ ಜೀವ ಹಾನಿಯಾಗಿದೆ ಎನ್ನಲಾಗುತ್ತಿದೆ.
ಆರಂಭದಲ್ಲಿ ಸ್ಥಳೀಯ ಮೀನುಗಾರರು ಮತ್ತು ರೈತರು ರಕ್ಷಣಾ ಪ್ರಯತ್ನಗಳನ್ನು ನಡೆಸಿ 15ಕ್ಕೂ ಹೆಚ್ಚು ಮಂದಿಯ ಜೀವ ಉಳಿಸಿದರು. ಬಳಿಕ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಸೇರಿದಂತೆ ವಿಶೇಷ ತಂಡಗಳು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡವು.