ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕ್ರಿಕೆಟ್‌ನಿಂದ ಶುರುವಾದ ಪ್ರೀತಿ, ಒಟ್ಟಿಗೆ ಕುಳಿತು ಮ್ಯಾಚ್‌ ವೀಕ್ಷಣೆ; ವೈರಲ್‌ ಆಯ್ತು ಸಿಯಾ - ಚೇತನ್‌ ಹಳೆ ವಿಡಿಯೋ

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ನಡುವಿನ ಸಂಬಂಧವನ್ನು ಪುಷ್ಟಿಕರಿಸುವ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದೆ. ಇದರಲ್ಲಿ ಇವರಿಬ್ಬರು ಜೊತೆಯಾಗಿ ಕುಳಿತು ಪುಣೆಯಲ್ಲಿ ನಡೆಯುವ ಪ್ರಮುಖ ಸಮುದಾಯ ಆಧಾರಿತ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿರುವುದು ಕಂಡು ಬಂದಿದೆ.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್‌ ಅಗರ್ವಾಲ್ ಹತ್ಯೆ (Ketan Agarwal murder case) ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ (Siya Goyal) ತನ್ನ ಪ್ರಿಯಕರನೊಂದಿಗೆ ಕಾಣಿಸಿಕೊಂಡಿರುವ ಹಳೆಯ ವಿಡಿಯೋವೊಂದು ಪೊಲೀಸರ ಕೈಗೆ ಸಿಕ್ಕಿದೆ. ಇದರಲ್ಲಿ ಚೇತನ್ (Chetan Chaudhary) ಗೆ ಒರಗಿ ಕುಳಿತು ಸಿಯಾ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವಿನ ಸಂಬಂಧವನ್ನು ಪುಷ್ಟಿಕರಿಸುವಂತಿದೆ. ಇದರಲ್ಲಿ ಇವರಿಬ್ಬರು ಜೊತೆಯಾಗಿ ಕುಳಿತು ಪುಣೆಯಲ್ಲಿ ನಡೆದ ಪ್ರಮುಖ ಸಮುದಾಯ ಆಧಾರಿತ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆ ಸಮೀಪದ ಕಣಿವೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 26 ವರ್ಷದ ಕೇತನ್‌ ಅಗರ್ವಾಲ್ ಸಾವಿನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಇದರ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವಿನ ಸಂಬಂಧವನ್ನು ಬೆಳಕಿಗೆ ತರುವ ಮತ್ತೊಂದು ವಿಡಿಯೋ ಪೊಲೀಸರ ಕೈಸೇರಿದೆ.

ʼʼಕೇತನ್‌ ತಲೆ ಬುರುಡೆ ನಜ್ಜುಗುಜ್ಜಾಗಿತ್ತುʼʼ: ಲೋಹಗಢ ಪ್ರಕರಣದ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ವಿವರ

ಕೇತನ್ ಅಗರ್ವಾಲ್ ಹತ್ಯೆಗೂ ಮುನ್ನ ಚೇತನ್ ಮತ್ತು ಸಿಯಾ ಇಬ್ಬರು ಮಾರ್ಕೆಟ್ ಯಾರ್ಡ್ ಫ್ರೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಪುಣೆಯಲ್ಲಿ ಸ್ಥಳೀಯ ವ್ಯಾಪಾರಿಗಳು, ವ್ಯವಹಾರ ಮತ್ತು ಸಮುದಾಯದ ಪ್ರತಿನಿಧಿಗಳು ಪ್ರಾಯೋಜಿಸುವ ಫ್ರಾಂಚೈಸ್ ಆಧಾರಿತ ತಂಡಗಳನ್ನು ಒಳಗೊಂಡಿರುವ ಪ್ರಮುಖ ಸಮುದಾಯ ಆಧಾರಿತ ಕ್ರಿಕೆಟ್ ಪಂದ್ಯವಾಗಿರುವ ಎಂಎಫ್ಸಿಎಲ್ ಇವರಿಬ್ಬರು ಜೊತೆಯಾಗಿ ಕುಳಿತು ವೀಕ್ಷಿಸಿದ್ದಾರೆ.



ಸಹೋದರ ಸಾಹಿಲ್ ಗೋಯಲ್ ಮೂಲಕ ಸಿಯಾ ಮತ್ತು ಚೇತನ್ ಪರಸ್ಪರ ಭೇಟಿಯಾಗಿದ್ದರು. ಸಾಹಿಲ್ ಜೊತೆಗೂ ಚೇತನ್ ಹಲವು ಬಾರಿ ಕ್ರಿಕೆಟ್ ಆಡುತ್ತಿದ್ದನು. ಸಿಯಾ ಕೆಲವೊಮ್ಮೆ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಹೋಗುತ್ತಿದ್ದಳು. ಹೀಗಾಗಿ ಚೇತನ್ ಮತ್ತು ಸಿಯಾ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್ ಕೊಲೆ ಪ್ರಕರಣದ ಆರೋಪಿಯಾಗಿರುವ ಸಿಯಾ ಗೋಯಲ್ ಅವರ ಪೋಷಕರು ಮತ್ತು ಸಹೋದರನನ್ನು ವಿಚಾರಣೆಗಾಗಿ ಶನಿವಾರ ಲೋನಾವಾಲ ಗ್ರಾಮೀಣ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಸಿಯಾ ಪೋಷಕರಾದ ಪ್ರವೀಣ್ ಗೋಯಲ್ ಮತ್ತು ಪೂಜಾ ಗೋಯಲ್ ಮತ್ತು ಅವರ ಸಹೋದರ ಸಾಹಿಲ್ ಶನಿವಾರ ಬೆಳಗ್ಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಇದಕ್ಕೂ ಮೊದಲು ಶುಕ್ರವಾರ ಕೂಡ ಸಾಹಿಲ್ ವಿಚಾರಣೆ ನಡೆದಿದೆ. ಸಾಹಿಲ್ ಅವರನ್ನು ಪೊಲೀಸರು 10 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದರು.

ಸಿಯಾ ಪೋಷಕರು, ಸಹೋದರರನ್ನು ವಿಚಾರಣೆಗೆ ಠಾಣೆಗೆ ಕರೆಸಲಾಗಿದ್ದು, ಅವರ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಲೋಹಗಡ್ ಕೋಟೆಯ ಮೇಲಿನಿಂದ ಜೂನ್ 18 ರಂದು ಕೇತನ್ ಅಗರ್ವಾಲ್ ಅವರನ್ನು ತಳ್ಳಿದ ಆರೋಪದಲ್ಲಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಅವರನ್ನು ಬಂಧಿಸಲಾಗಿದೆ. ಸಿಯಾ ಮತ್ತು ಕೇತನ್ ಮದುವೆ ನವೆಂಬರ್‌ನಲ್ಲಿ ನಡೆಯುವುದರಲ್ಲಿತ್ತು. ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಆಕೆ ತನ್ನ ಪ್ರಿಯಕರ ಚೇತನ್ ಜೊತೆ ಸೇರಿ ಆತನನ್ನು ಕೊಲ್ಲಲು ಸಂಚು ರೂಪಿಸಿದ್ದಳು.

ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು? ದಿಢೀರ್‌ ಸುದ್ದಿಯಾಗಿದ್ದೇಕೆ?

ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಶುಕ್ರವಾರ ಭೇಟಿಯಾಗಿದ್ದು, ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಅಲ್ಲದೇ ಉಜ್ವಲ್ ನಿಕಮ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸುವಂತೆ ಮನವಿ ಮಾಡಿದ್ದರು. ಅವರ ಈ ಬೇಡಿಕೆಯನ್ನು ಈಡೇರಿಸುವುದಾಗಿ ದೇವೇಂದ್ರ ಫಡ್ನವೀಸ್ ಅವರು ಭರವಸೆ ನೀಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author