ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಕೇತನ್‌ ತಲೆ ಬುರುಡೆ ನಜ್ಜುಗುಜ್ಜಾಗಿತ್ತುʼʼ: ಲೋಹಗಢ ಪ್ರಕರಣದ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಬೆಚ್ಚಿಬೀಳಿಸುವ ವಿವರ

Ketan Aggarwal Murder Case: ಪುಣೆಯ ಉದ್ಯಮಿ ಕೇತನ್ ಅಗರ್‌ವಾಲ್ ಹತ್ಯೆ ಪ್ರಕರಣದಲ್ಲಿ ರಕ್ಷಣಾ ಸಿಬ್ಬಂದಿ ಮೃತದೇಹದ ಸ್ಥಿತಿ ಕುರಿತು ಬೆಚ್ಚಿಬೀಳಿಸುವ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹತ್ಯೆಗೂ ಮುನ್ನ ಹಾಗೂ ಬಳಿಕ ಮೊಬೈಲ್ ಚಾಟ್‌ಗಳನ್ನು ಅಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಲೋಹಗಢ ಕೇತನ್ ಹತ್ಯೆ ಪ್ರಕರಣ: ಹೊಸ ತಿರುವು ಪಡೆದುಕೊಂಡ ತನಿಖೆ

ಕೇತನ್‌ ಮತ್ತು ಸುನೀಲ್ ಗಾಯಕ್ವಾಡ್ -

Profile
Sushmitha Jain Jun 27, 2026 9:39 PM

ಮುಂಬೈ, ಜೂ. 27: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆ (Lohagad Fort) ಸಮೀಪದ ಕಣಿವೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್‌ ಅಗರ್‌ವಾಲ್ (Ketan Aggarwal) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಈ ನಡುವೆ ಮೃತದೇಹವನ್ನು ಹೊರತೆಗೆದ ರಕ್ಷಣಾ ತಂಡದ ಸದಸ್ಯ ಸುನೀಲ್ ಗಾಯಕ್ವಾಡ್ ಪ್ರಕರಣದ ಕುರಿತು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಎಎನ್‌ಐಗೆ ನೀಡಿದ ಹೇಳಿಕೆಯಲ್ಲಿ, "ಲೋಹಗಢ ಕೋಟೆಗೆ ತಲುಪಿದಾಗ ಯುವಕನ ಮೃತದೇಹ ಪತ್ತೆಯಾಯಿತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ತಲೆಬುರುಡೆ ನಜ್ಜುಗುಜ್ಜಾಗಿತ್ತು. ಕೈ-ಕಾಲುಗಳ ಮೇಲೂ ಹಲವು ಗಾಯಗಳಿದ್ದವು. ಆತ ಆಗಲೇ ಮೃತಪಟ್ಟಿದ್ದ" ಎಂದು ತಿಳಿಸಿದ್ದಾರೆ.

ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ ಅಗರ್‌ವಾಲ್ ಕಣಿವೆಗೆ ಬಿದ್ದು ಮೃತಪಟ್ಟಿದ್ದರು. ಆದರೆ ತನಿಖೆಯಲ್ಲಿ ಇದು ಪೂರ್ವಯೋಜಿತ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿದ್ದು, ಅವರ ನಿಶ್ಚಿತಾರ್ಥದ ಸಂಗಾತಿ ಸಿಯಾ ಗೋಯಲ್ (22) ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ (25) ವಿರುದ್ಧ ಸಂಚು ರೂಪಿಸಿ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.

ರಕ್ಷಣಾ ಕಾರ್ಯಾಚರಣೆಯ ವೇಳೆ ನಡೆದ ಘಟನೆಯನ್ನು ನೆನಪಿಸಿಕೊಂಡ ಗಾಯಕ್ವಾಡ್, "ಮೃತದೇಹವನ್ನು ಕಾಡಿನ ಮೂಲಕ ಹೊತ್ತು ತರಬೇಕಾಯಿತು. ಕಡಿದಾದ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ಕಷ್ಟವಾಗಿತ್ತು. ಎಲ್ಲರೂ ಆತಂಕದಲ್ಲಿದ್ದಾಗ ಸಿಯಾ ಮಾತ್ರ ಶಾಂತವಾಗಿದ್ದಳು. ಇತರರು ಜೋರಾಗಿ ಅಳುತ್ತಿದ್ದರೂ ಆಕೆಯಲ್ಲಿ ಹೆಚ್ಚಿನ ಭಾವನಾತ್ಮಕ ಪ್ರತಿಕ್ರಿಯೆ ಕಾಣಿಸಲಿಲ್ಲ," ಎಂದು ಹೇಳಿದ್ದಾರೆ.

ಇನ್ನು ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಹತ್ಯೆಗೆ ಮುನ್ನ ಹಾಗೂ ಬಳಿಕ ಸಿಯಾ ಮತ್ತು ಚೇತನ್ ತಮ್ಮ ಮೊಬೈಲ್‌ಗಳಲ್ಲಿದ್ದ ಎಲ್ಲ ಚಾಟ್‌ಗಳು ಹಾಗೂ ರಿಸೈಕಲ್ ಬಿನ್‌ನಲ್ಲಿದ್ದ ಮಾಹಿತಿಯನ್ನೂ ಅಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್! ಸಿಯಾ-ಚೇತನ್ ಸಂಬಂಧದ ಶಾಕಿಂಗ್ ಮಾಹಿತಿ ಬಹಿರಂಗ

ಪೊಲೀಸರ ಪ್ರಕಾರ, ಸಿಯಾ ಮತ್ತು ಚೇತನ್ ಆರು ತಿಂಗಳಿಂದ ನಿರಂತರ ಸಂಪರ್ಕದಲ್ಲಿದ್ದು, ಈ ಅವಧಿಯಲ್ಲಿ ಸುಮಾರು 2,004 ಬಾರಿ ಪರಸ್ಪರ ಕರೆ ಮಾಡಿದ್ದರು. ಹತ್ಯೆ ನಡೆದ ದಿನ ಇಬ್ಬರೂ ಕಾಫೆಯಲ್ಲಿ ಭೇಟಿಯಾಗಿ ಅಂತಿಮ ಸಂಚು ರೂಪಿಸಿದ್ದು, ಲೋಹಗಢ ಕೋಟೆಯಲ್ಲೇ ಕೇತನ್‌ ಅವರನ್ನು ತಳ್ಳಬೇಕಾದ ಸ್ಥಳವನ್ನೂ ಮುಂಚಿತವಾಗಿ ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಅವರ ಸಹೋದರ ಸಾಹಿಲ್‌ನನ್ನೂ ಪೊಲೀಸರು ದೀರ್ಘಕಾಲ ವಿಚಾರಣೆ ನಡೆಸಿದ್ದಾರೆ. ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಬಗ್ಗೆ ತನಗೆ ಹಲವು ತಿಂಗಳಿನಿಂದ ತಿಳಿದಿತ್ತು. ಕೇತನ್‌ನೊಂದಿಗೆ ನಿಶ್ಚಿತಾರ್ಥವಾಗಿದ್ದ ಕಾರಣ ಆ ಸಂಬಂಧವನ್ನು ಕೊನೆಗೊಳಿಸುವಂತೆ ತಂಗಿಗೆ ಸಲಹೆ ನೀಡಿದ್ದಾಗಿ ಸಾಹಿಲ್ ಪೊಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ.