ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೃತ ಸೈನಿಕನ ಅಂತಿಮ ದರ್ಶನಕ್ಕೆ ಆಸ್ಪತ್ರೆಯಿಂದ ಆಗ ತಾನೇ ಜನಿಸಿದ ಮಗುವಿನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದ ಪತ್ನಿ

ಮಹಾರಾಷ್ಟ್ರದಲ್ಲಿ ಪಿತೃತ್ವ ರಜೆಯಲ್ಲಿದ್ದ ಸೈನಿಕನೊಬ್ಬ ಅಪಘಾತದಲ್ಲಿ ಮೃತ ಪಟ್ಟಿದ್ದು, ಮೃತ ಸೈನಿಕನ ಅಂತಿಮ ದರ್ಶನಕ್ಕೆ ಆಸ್ಪತ್ರೆಯಿಂದ ಪತ್ನಿ ಆಗ ತಾನೇ ಜನಿಸಿದ ಮಗುವಿನೊಂದಿಗೆ ಬಂದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಿಕಂದರಾಬಾದ್- ಶ್ರೀನಗರ ವಲಯದಲ್ಲಿ ನಿಯೋಜಿತರಾಗಿದ್ದ ಪ್ರಮೋದ್ ಪರಶುರಾಮ್ ಜಾಧವ್ ಅಪಘಾತದಲ್ಲಿ ಮೃತಪಟ್ಟ ಸೈನಿಕ.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ಒಂದೆಡೆ ಮಗು ಹುಟ್ಟಿದ ಸಂಭ್ರಮವಾದರೆ, ಇನ್ನೊಂದೆಡೆ ಗಂಡನನ್ನು ಕಳೆದುಕೊಂಡ ದುಃಖ. ಇಂತಹ ಪರಿಸ್ಥಿತಿ ಯಾರಿಗೂ ಬಾರದೇ ಇರಲಿ ಎಂದು ಎಲ್ಲರೂ ಹೇಳುವಂತೆ ಮಾಡಿತ್ತು ಈ ಒಂದು ಘಟನೆ. ಮಗು ಜನಿಸುವ ಕೆಲವೇ ಗಂಟೆಗಳ ಮೊದಲು ತಂದೆ ಅಪಘಾತದಲ್ಲಿ (accident case) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ (Maharastra) ಶುಕ್ರವಾರ ರಾತ್ರಿ ನಡೆದಿದೆ. ಸತಾರಾದ ಪಾರ್ಲಿ ಪ್ರದೇಶದ ನಿವಾಸಿ, ಭಾರತೀಯ ಸೇನಾ ಜವಾನ (army man) ಪ್ರಮೋದ್ ಪರಶುರಾಮ್ ಜಾಧವ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದು ಇವರ ಅಂತಿಮ ದರ್ಶನಕ್ಕಾಗಿ ಕೆಲವೇ ಗಂಟೆಗಳ ಮೊದಲು ಹುಟ್ಟಿದ ಮಗುವಿನೊಂದಿಗೆ ತಾಯಿ ಬಂದ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು.

ಮಡದಿ ಮಗುವಿಗೆ ಜನ್ಮ ನೀಡುವ ಸಮಯ ಹತ್ತಿರ ಬಂದಿದ್ದರಿಂದ ಪಿತೃತ್ವ ರಜೆ ಪಡೆದು ಬಂದಿದ್ದ ಸೈನಿಕ ಮಗು ಜನನಕ್ಕೂ ಮೊದಲೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಮೊದಲು ರಜೆಯಲ್ಲಿ ಬಂದಿದ್ದ ಪ್ರಮೋದ್ ಜಾಧವ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಟೆಂಪೋವೊಂದು ಡಿಕ್ಕಿಯಾಗಿದೆ. ಈ ದುರಂತ ಸಂಭವಿಸಿದಾಗ ಅವರ ಪತ್ನಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜಾಧವ್ ಮೃತಪಟ್ಟ ಕೆಲವು ಗಂಟೆಗಳ ಬಳಿಕ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Bus Stop Issue: ನಿಲುಗಡೆಯಾಗದ ಸಾರಿಗೆ ಬಸ್‌ಗಳಿಗಾಗಿ ಗ್ರಾಮಸ್ಥರ ಪರದಾಟ



ತುರ್ತು ವೈದ್ಯಕೀಯ ವಿಧಾನಗಳ ಬಳಿಕ ಜಾಧವ್ ಅವರ ಅಂತಿಮ ದರ್ಶನಕ್ಕಾಗಿ ಆಸ್ಪತ್ರೆಯಿಂದ ನೇರವಾಗಿ ಪತ್ನಿಯನ್ನು ಸ್ಟ್ರೆಚರ್‌ನಲ್ಲಿ ಕರೆ ತರಲಾಯಿತು. ಜಾದವ್ ಅವರಿಗೆ ಪೂರ್ಣ ಮಿಲಿಟರಿ ಗೌರವಗಳನ್ನು ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಜಾಧವ್ ಅವರ ಪತ್ನಿ ಚೇತರಿಸಿಕೊಳ್ಳುತ್ತಿದ್ದು, ಸ್ಟ್ರೆಚರ್ ನಲ್ಲೇ ಮಲಗಿಕೊಂಡು ಜಾಧವ್ ಅವರಿಗೆ ಅಂತಿಮ ವಿದಾಯ ಹೇಳಿದರು. ಆಸ್ಪತ್ರೆ ಸಿಬ್ಬಂದಿ ಮಗುವನ್ನು ಹಿಡಿದುಕೊಂಡು ಮಗುವಿಗೆ ತಂದೆಯ ಅಂತಿಮ ದರ್ಶನ ಮಾಡಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕರು ಇದಕ್ಕೆ ಸಂತಾಪ ಸೂಚಿಸಿದ್ದಾರೆ.

ಸಿಕಂದರಾಬಾದ್-ಶ್ರೀನಗರ ವಲಯದಲ್ಲಿ ನಿಯೋಜಿತರಾಗಿದ್ದ ಪ್ರಮೋದ್ ಪರಶುರಾಮ್ ಜಾಧವ್ ಅವರಿಗೆ ಮಹಾರಾಷ್ಟ್ರದ ಡೇರ್ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು.

Iran protests: ಇರಾನ್‌ನಲ್ಲಿ ವ್ಯಾಪಕ ದಂಗೆ, ಹೆಣಗಳ ರಾಶಿಯಿಂದ ತುಂಬಿಹೋದ ಆಸ್ಪತ್ರೆಗಳು

ಸೈನಿಕನ ಮೃತದೇಹವನ್ನು ಭಾನುವಾರ ಮನೆಗೆ ತರುತ್ತಿದ್ದಂತೆ ಅವರ ಪತ್ನಿಯನ್ನು ಪತಿಯ ಅಂತ್ಯಕ್ರಿಯೆಗಾಗಿ ಆಸ್ಪತ್ರೆಯಿಂದ ಸ್ಟ್ರೆಚರ್‌ನಲ್ಲೇ ಕರೆ ತರಲಾಯಿತು. ಈ ಹೃದಯವಿದ್ರಾವಕ ಸನ್ನಿವೇಶವು ಗ್ರಾಮಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿತ್ತು. ಸೈನಿಕನ ಅಪಘಾತದ ತನಿಖೆಗಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author